ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ: ಅನ್ನ ಅಕ್ಷರ ದಾಸೋಹಕ್ಕೆ ಹೆಸರುವಾಸಿಯಾದ ಕೊಪ್ಪಳ ಗವಿಸಿದ್ಧೇಶ್ವರ ಮಠದಲ್ಲಿ ಈ ಬಾರಿಯ ಜಾತ್ರಾ ಮಹೋತ್ಸವದ ರಥೋತ್ಸವದ ದಿನವೇ ಬರೋಬ್ಬರಿ ಎರಡು ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ.ಇದುವರೆಗೂ ನಡೆದ ಜಾತ್ರೆಯ ಮಹಾದಾಸೋಹದಲ್ಲಿ ಒಂದೇ ದಿನ ಇಷ್ಟೊಂದು ಸಂಖ್ಯೆಯಲ್ಲಿ ಪ್ರಸಾದ ಸ್ವೀಕರಿಸಿರುವುದು ಇದೇ ಮೊದಲು ಎನ್ನುವುದು ಗಮನಾರ್ಹ ಸಂಗತಿ.ಪ್ರಸಕ್ತ ವರ್ಷ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಜಾತ್ರೆ ಆರಂಭವಾಗುವ ಮುನ್ನವೇ ಭಕ್ತರು ಹರಿದು ಬರಲಾರಂಭಿಸಿದ್ದರಿಂದ ವಾರ ಮೊದಲೇ ಪ್ರಸಾದ ಆರಂಭಿಸಲಾಗಿದೆ. ಅದರಲ್ಲೂ ರಥೋತ್ಸವದಂದು ವಿಪರೀತ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.ಪ್ರತಿ ಬಾರಿ ಸಂಜೆ ವೇಳೆಗೆ ಸಾಗರದಂತೆ ಹರಿದು ಬರುತ್ತಿದ್ದ ಭಕ್ತ ಸಾಗರ ಈ ವರ್ಷ ಬೆಳಗ್ಗೆಯಿಂದಲೇ ಆರಂಭವಾಗಿದೆ. ದಾಸೋಹದಲ್ಲಿ ಬೆಳಿಗ್ಗೆಯಿಂದ ಸಹಸ್ರ ಭಕ್ತರು ಏಕಕಾಲಕ್ಕೆ ಪ್ರಸಾದ ಸ್ವೀಕರಿಸುತ್ತಿದ್ದರು.ಮಹಾರಥೋತ್ಸವ ದಿನ ಮಧ್ಯಾಹ್ನದ ವೇಳೆಗೆ 75 ಕ್ವಿಂಟಲ್ ಅನ್ನ ಮಾಡಲಾಗಿದೆ. ಕಳೆದ ವರ್ಷ ಮೊದಲ ದಿನಪೂರ್ತಿ 65 ಕ್ವಿಂಟಲ್ ಅಕ್ಕಿಯ ಅನ್ನ ದಾಸೋಹಕ್ಕೆ ಬಳಕೆಯಾಗಿತ್ತು. ಆದರೆ, ಈ ವರ್ಷ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಳ ಆಗಿರುವುದರಿಂದ ಮಧ್ಯಾಹ್ನದ ವೇಳೆಗೆ ಅಷ್ಟು (65 ಕ್ವಿಂಟಲ್) ಅಕ್ಕಿಯ ಅನ್ನ ಮಾಡಲಾಗಿದೆ. ಸಂಜೆ ವೇಳೆಗೆ 75 ಕ್ವಿಂಟಲ್ ಬಳಕೆಯಾಗಿದ್ದು, ರಾತ್ರಿಯ ಲೆಕ್ಕಾಚಾರದಲ್ಲಿ ಮತ್ತೆ 25 ಕ್ವಿಂಟಲ್ ಅಕ್ಕಿಯ ಅನ್ನ ಮಾಡಲಾಗಿದೆ. ಹೀಗಾಗಿ ಮೊದಲ ದಿನವೇ ಬರೋಬ್ಬರಿ 100 ಕ್ವಿಂಟಲ್ ಅಕ್ಕಿಯ ಅನ್ನ ಬಳಕೆಯಾಗಿದೆ. ಪ್ರಸಾದ ಸ್ವೀಕಾರ ತಡರಾತ್ರಿವರೆಗೂ ಜರುಗುವುದರಿಂದ ಇದರ ಪ್ರಮಾಣ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ.ಲೆಕ್ಕ ಸಿಗುತ್ತಿಲ್ಲ: ಮಹಾದಾಸೋಹದಲ್ಲಿ ಸಿಹಿ, ರೊಟ್ಟಿಗಳ ಬಳಕೆ ಲೆಕ್ಕವೇ ಇಲ್ಲದಂತಾಗಿದೆ. ಬಂದಿರುವ 8 ಲಕ್ಷ ಶೇಂಗಾ ಹೋಳಿಗೆ, 250 ಕ್ವಿಂಟಲ್ ಮಾದಲಿಯ ಬಳಕೆ ಸರಾಗವಾಗಿ ನಡೆಯುತ್ತಿದೆ. ಜಾತ್ರೆಗೆ 15ಲಕ್ಷಕ್ಕೂ ಅಧಿಕ ರೊಟ್ಟಿಗಳು ಬಂದಿದ್ದು, ಅವುಗಳ ಬೇಡಿಕೆಗೆ ತಕ್ಕಂತೆ ಬಳಕೆ ಮಾಡಲಾಗುತ್ತದೆ. ಇದಕ್ಕೆ ಪೂರಕವಾಗಿ ಸಾಂಬಾರು, ಪಲ್ಯ, ಕೆಂಪು ಚಟ್ನಿ, ಚಟ್ನಿಪುಡಿ, ತುಪ್ಪ, ಹಾಲು ಬಳಕೆಯಾಗುತ್ತಿದೆ. ರಥೋತ್ಸವದ ದಿನವೇ ಇಷ್ಟೊಂದು ಬಳಕೆಯಾಗುತ್ತಿರುವುದರಿಂದ ಮರುದಿನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಶನಿವಾರ, ಭಾನುವಾರ ಬಂದಿರುವುದರಿಂದ ಜಾತ್ರೆಗೆ ಆಗಮಿಸುವವರ ಸಂಖ್ಯೆ ಅಧಿಕವಾಗಿದೆ.ಮಧ್ಯಾಹ್ನದ ವೇಳೆಗೆ 75 ಕ್ವಿಂಟಲ್ ಅನ್ನ ಮಾಡಲಾಗಿದ್ದು, ಸಂಜೆ ವೇಳೆಗೆ ಇನ್ನು 25 ಕ್ವಿಂಟಲ್ ಅನ್ನ ಮಾಡಲಾಗುತ್ತದೆ. ತಡರಾತ್ರಿ ಅಗತ್ಯಬಿದ್ದರೆ ಮತ್ತಷ್ಟು ಅನ್ನವನ್ನು ಸಿದ್ಧಪಡಿಸಲಾಗುವುದು ಎನ್ನುತ್ತಾರೆ ಮಹಾದಾಸೋಹದ ಉಸ್ತುವಾರಿ ರಾಮನಗೌಡ.