ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜಾತಿ ಜನಗಣತಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಹಿಂದು ಸಮಾಜವನ್ನು ಛಿದ್ರಗೊಳಿಸುವ ಕೆಟ್ಟ ಸಂಪ್ರದಾಯಕ್ಕೆ ಕೈ ಹಾಕಿದೆ. ಇದಕ್ಕೆ ನಾನು ಛೀಮಾರಿ ಹಾಕ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.
ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜಾತಿ ಜನಗಣತಿ ವರದಿಯನ್ನು ಗುರುವಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಹಾಲಿ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಹೆಗ್ಡೆ ಸಿಎಂ ಸಿದ್ದರಾಯಮಯ್ಯ ಅವರಿಗೆ ಸಲ್ಲಿಸಿದ್ದಾರೆ. ವರದಿ ಸ್ವೀಕಾರದ ಮೂಲಕ ಸಿದ್ದರಾಮಯ್ಯ ಕೆಟ್ಟ ಸಂಪ್ರದಾಯ ಹುಟ್ಟು ಹಾಕಿದ್ದಾರೆ. ಚುನಾವಣಾ ಸಂದರ್ಭದಲ್ಲಿ ತನಗೆ ಲಾಭ ಆಗಬಹುದು ಎಂಬ ಕಾರಣದಿಂದ ಸಿದ್ದರಾಮಯ್ಯ ಸ್ವೀಕಾರ ಮಾಡಿದ್ದಾರೆ ಎಂದು ಟೀಕಿಸಿದರು.ಜಾತ್ಯತೀತ ಪಕ್ಷ ಅಂತ ಹೇಳುವ ಕಾಂಗ್ರೆಸ್ ಈ ವರದಿ ಸ್ವೀಕಾರದ ವೇಳೆ ಕಾನೂನಾತ್ಮಕ ಚಿಂತನೆ ನಡೆಸಬೇಕಿತ್ತು. ಇದು ಚರ್ಚೆಗೆ ಬಂದ್ರೆ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರೇ ಹೊಡೆದಾಡ್ತಾರೆ. ಸಮಾಜ ಛಿದ್ರ ಮಾಡಲು ಕಾಂಗ್ರೆಸ್ ಪ್ರಯತ್ನ ಮಾಡಿದೆ. ಹಿಂದು ಸಮಾಜ ಒಗ್ಗಟ್ಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಹಿಂದು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಎಲ್ಲರೂ ನಾನೇ ಜಾತಿಯ ನಾಯಕ ಎಂಬ ಪ್ರತಿಬಿಂಬ ಮಾಡಲು ಸಾಕಷ್ಟು ಪ್ರಯತ್ನ ಮಾಡಿ, ಇಡೀ ಸಮಾಜ ಗೊಂದಲ ಮಾಡಿದ್ದಾರೆ. ಸಿದ್ದರಾಮಯ್ಯ ನಾನು ಹಿಂದುಳಿದ ವರ್ಗದ ನಾಯಕ. ನಾನೇ ಜಾತಿ ಜನಗಣತಿ ವರದಿ ಸ್ವೀಕಾರ ಮಾಡಿದ್ದು ಎಂಬ ಹೆಗ್ಗಳಿಕೆ ಪಡೆಯಲು ಮುಂದಾಗಿದ್ದಾರೆ. ಕಾಂಗ್ರೆಸ್ ಲಿಂಗಾಯಿತ ಶಾಸಕರು ನಾವೇ ಜಾತಿ ನಾಯಕರು ಎಂಬ ಬಿರುದು ಪಡೆಯಲು ವರದಿಯನ್ನು ವಿರೋಧ ಮಾಡುತ್ತಿದ್ದಾರೆ. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ನಾನು ಒಕ್ಕಲಿಗರ ನಾಯಕ ಎಂದು ಬಿಂಬಿಸಿಕೊಳ್ಳಲು ವಿರೋಧ ಮಾಡುತ್ತಿದ್ದಾರೆ. ಜಾತಿ ಜನಗಣತಿ ಮಾಡಬೇಕಾದವರು ಕೇಂದ್ರ ಸರ್ಕಾರದವರು. ಇದು ರಾಜ್ಯ ಸರ್ಕಾರದ ಕೆಲಸ ಅಲ್ಲ ಎಂದು ಕುಟುಕಿದರು.ಇದು ಗೊತ್ತಿದ್ದರೂ ಜಾತಿಗಣತಿಗೆ ₹150ರಿಂದ ₹200 ಕೋಟಿ ವೆಚ್ಚ ಮಾಡಿದ್ದಾರೆ. ಕಾಂಗ್ರೆಸ್‌ನ ಎಂ.ಬಿ.ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಶಾಮನೂರು ಶಿವಶಂಕರಪ್ಪ ಬಹಿರಂಗವಾಗಿ ವರದಿಯನ್ನು ವಿರೋಧ ಮಾಡಿದ್ದಾರೆ. ಅಷ್ಟಕ್ಕೂ ಈ ವರದಿ 9 ವರ್ಷಗಳ ಹಿಂದೆ ತಯಾರಿಸಿದ ವರದಿಯಾಗಿದೆ. 9 ವರ್ಷಗಳ ಹಿಂದೆಯೇ ಅಂದಿನ ಅಧ್ಯಕ್ಷ ಕಾಂತರಾಜ್ ವರದಿ ರೆಡಿ ಇದೆ, ಸಿಎಂ ಹೇಳಿದರೆ ವರದಿ ಬಿಡುಗಡೆ ಮಾಡ್ತೀನಿ ಎಂದಿದ್ದರು. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ವೇಳೆಯೂ ಬಿಡುಗಡೆ ಮಾಡಲಿಲ್ಲ. ಏಕೆ ಬಿಡುಗಡೆ ಮಾಡಲಿಲ್ಲ ಅಂದ್ರೆ ಸಿಎಂ ಕುಮಾರಸ್ವಾಮಿ ಒಪ್ಪಲಿಲ್ಲ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕ್ಯಾಬಿನೆಟ್‌ನಲ್ಲಿ ಕುಳಿತು ಚರ್ಚೆ ಮಾಡಿ ಈ ವರದಿ ಸ್ವೀಕರಿಸಬಹುದಿತ್ತು. ಇದ್ಯಾವುದೂ ಆಗಿಲ್ಲ. ಈ ವರದಿಗೆ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಜಾತಿ ಗಣತಿ ವಿಚಾರವಾಗಿ ಅಮಿತ್ ಶಾ ಅವರು ದೇಶದ ಎಲ್ಲ ಪ್ರಮುಖರನ್ನು ಕರೆದು ಚರ್ಚೆ ಮಾಡಿದ್ದರು. ಸಂವಿಧಾನ ಏನು ಹೇಳುತ್ತದೆ, ಸುಪ್ರೀಂ ಕೋರ್ಟ್ ಏನು ಹೇಳುತ್ತದೆ, ತಜ್ಞರು ಏನು ಹೇಳ್ತಾರೆ ಎಂಬ ಅಭಿಪ್ರಾಯ ಪಡೆದು ವರದಿ ಬಿಡುಗಡೆ ಮಾಡ್ತೇವೆಂದು ಅಮಿತ್ ಶಾ ಹೇಳಿದ್ದರು. ಆದರೆ, ಚುನಾವಣಾ ಸಂದರ್ಭದಲ್ಲಿ ತನಗೆ ಲಾಭ ಆಗಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಈಗ ಈ ವರದಿ ಸ್ವೀಕರಿಸಿದ್ದಾರೆ ಎಂದು ಹರಿಹಾಯ್ದರು.- - -ಬಾಕ್ಸ್ ರಾಷ್ಟ್ರದ್ರೋಹಿಗಳಿಗೆ ಕಾಂಗ್ರೆಸ್ ನೇರ ಬೆಂಬಲನಾವು ರಾಷ್ಟ್ರದ್ರೋಹಿಗಳ ಪರ ಇದ್ದೇವೆ ಅಂತಾ ಡಿ.ಕೆ.ಶಿವಕುಮಾರ್, ಪ್ರಿಯಾಂಕ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್ ನೇರವಾಗಿ ಬೆಂಬಲ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದನ್ನು ಯಾವುದು ತಿರುಚಿಲ್ಲ ಅಂತಾ ಎಫ್‌ಎಸ್‌ಎಲ್ ವರದಿಯಲ್ಲಿ ಬಂದಿದೆ. ಆದರೆ, ಯಾರೂ ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಿಯೇ ಇಲ್ಲ ಇದು ಬಿಜೆಪಿ ಸೃಷ್ಟಿ ಅಂತಾ ಡಿ.ಕೆ.ಶಿವಕುಮಾರ್, ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಹೃದಯ, ಕಣ್ಣು, ಕಿವಿ ಸರಿಯಿಲ್ಲದ ಕಾಂಗ್ರೆಸ್ ನಾಯಕರು ಇನ್ನೇನು ಹೇಳಲು ಸಾಧ್ಯ. ಸಚಿವರು ಈ ರೀತಿ ಹೇಳಿದರೆ ವರದಿಯಲ್ಲಿ ಯಾಕೆ ಆ ರೀತಿ ಬಂದಿದೆ ಎಂದು ಪ್ರಶ್ನಿಸಿದರು.ಹೆಬ್ಬಾರ್ ಅವರು ಮತ ಹಾಕಿಲ್ಲ. ಸೋಮಶೇಖರ್ ಅವರು ಅಡ್ಡ ಮತದಾನ ಹಾಕಿದ್ದಾರೆ. ಈ ರೀತಿ ಭಂಡತನಕ್ಕೆ ಒಬ್ಬೊಬ್ವರೇ ಸೇರಿಕೊಂಡಿದ್ದಾರೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಹಿಮಾಚಲ ಪ್ರದೇಶಕ್ಕೆ ಹೋಗಿದ್ದರು. ಆಗ ಅಲ್ಲಿಯ ಶಾಸಕರು ಅಡ್ಡ ಮತ ಹಾಕಿದರು. ಆಗ ಅಲ್ಲಿನ ಸ್ಪೀಕರ್ ಅಡ್ಡ ಮತದಾನ ಮಾಡಿದ ಶಾಸಕರನ್ನು ಅನರ್ಹಗೊಳಿಸಿದರು. ಆದರೆ, ಕರ್ನಾಟಕದಲ್ಲಿ ಏಕೆ ಸೋಮಶೇಖರ್ ಅವರನ್ನು ಸ್ಪೀಕರ್ ಅನರ್ಹಗೊಳಿಸಲಿಲ್ಲ? ಇದು ರಾಜ್ಯದಲ್ಲಿ ಹೆಚ್ಚು ದಿನ ನಡೆಯುವುದಿಲ್ಲ ಎಂದು ಕಿಡಿಕಾರಿದರು.
ಖಾದರ್ ಅವರು ನಿಜಕ್ಕೂ ಸಭಾಧ್ಯಕ್ಷರು ಆಗಿದ್ದರೇ ಸೋಮಶೇಖರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ ಅಂತಿದ್ದರು. ಆದರೆ, ಈವರೆಗೆ ಒಬ್ಬನೇ ಒಬ್ಬ ಬಿಜೆಪಿ ಶಾಸಕ ಕಾಂಗ್ರೆಸ್‌ಗೆ ಹೋಗಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ದೇಶದಲ್ಲಿ ಬಿಜೆಪಿಗೆ 400ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲುವಾಗಲಿದೆ ಎಂದು ಭವಿಷ್ಯ ನುಡಿದರು.- - - -1ಎಸ್‌ಎಂಜಿಕೆಪಿ01: ಕೆ.ಎಸ್.ಈಶ್ವರಪ್ಪ