ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪ್ರವಾಸ ಮುಗಿಸಿಕೊಂಡು ವಾಪಸ್ ಬರುತ್ತಿದ್ದಾಗ ತಾಲೂಕಿನ ಮನಗೂಳಿ ಪಟ್ಟಣದ ವಿಜಯಪುರ-ಚಿತ್ರದುರ್ಗ ರಾ.ಹೆದ್ದಾರಿ-50ರಲ್ಲಿ ಕಾರ್ ಮತ್ತು ಖಾಸಗಿ ಬಸ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಆರು ಜನರು ದಾರುಣವಾಗಿ ಮೃತಪಟ್ಟಿದ್ದಾರೆ.ಕಾರಿನಲ್ಲಿದ್ದ ತೆಲಂಗಾಣ ರಾಜ್ಯದ ಗಡ್ವಾಳ ಮೂಲದ ವಿಜಯಪುರ ಜಿಲ್ಲೆಯ ಹೊರ್ತಿಯ ಕೆನರಾ ಬ್ಯಾಂಕ್ ಮ್ಯಾನೇಜರ್ ಟಿ.ಭಾಸ್ಕರ್ (36), ಪತ್ನಿ ಪವಿತ್ರಾ (34), ಪುತ್ರ ಅಭಿರಾಮ (14), ಪುತ್ರಿ ಜೋತ್ಸ್ನಾ (12) ಐವರು ಸ್ಥಳದಲ್ಲೇ ಸಾವಿನ್ನಪ್ಪಿದ್ದು, ಇವರ ಮತ್ತೊಬ್ಬ ಮಗ ಪ್ರವೀಣತೇಜ್(10) ಅದೃಷ್ಟವಶಾತ್ ದುರ್ಘಟನೆಯಲ್ಲಿ ಪ್ರಾಣಾಪಾಯದಿಂದ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಲ್ಲದೇ, ಕಾರ್ ಚಾಲಕ ಹೊರ್ತಿಯ ವಿಕಾಸ ಶಿವಪ್ಪ ಮಕನಿ (30) ಹಾಗೂ ಬಸ್ ಚಾಲಕ ಧಾರವಾಡ ಜಿಲ್ಲೆಯ ಗೊಪನಕೊಪ್ಪದ ಸಿದ್ರಾಮ ನಗರದ ಬಸವರಾಜ ಲಕ್ಕಪ್ಪ ಲಮಾಣಿ (48) ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಅದರಂತೆಯೇ ಬಸ್‌ನಲ್ಲಿದ್ದ ಪ್ರಯಾಣಿಕ ಭಾಸರಿಯ ಬಾಳಾಸಾಹೇಬ (49) ಎಂಬುವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತೆಲಂಗಾಣ ಮೂಲದ ಮ್ಯಾನೇಜರ್ ಟಿ.ಭಾಸ್ಕರ್ ಕಳೆದ 15 ದಿನಗಳ ಹಿಂದಷ್ಟೆ ಹೊರ್ತಿ ಬ್ಯಾಂಕ್ ಮ್ಯಾನೇಜರ್ ಆಗಿ ನೇಮಕವಾಗಿದ್ದರು. ಕರ್ತವ್ಯಕ್ಕೆ ಹಾಜರಾಗಿ ಬಳಿಕ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಮಹಿಂದ್ರಾ ಟಿಯುವಿ-300 ಕಾರ್‌ನಲ್ಲಿ ಟಿ.ಭಾಸ್ಕರ್ ತಮ್ಮ ಕುಟುಂಬದೊಂದಿಗೆ ಮುರುಡೇಶ್ವರ ಮತ್ತು ಧರ್ಮಸ್ಥಳ ಸೇರಿ ವಿವಿಧೆಡೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ಮಂಗಳವಾರ ರಾತ್ರಿ ಚಿತ್ರದುರ್ಗ-ವಿಜಯಪುರ ಹೆದ್ದಾರಿ ಮಾರ್ಗವಾಗಿ ಮರಳುತ್ತಿದ್ದರು. ಈ ವೇಳೆ ಬೆಳಗಿನ ಜಾವ ಮನಗೂಳಿ ಸಮೀಪ ಕಾರ್ ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಏರಿದ್ದು, ಬಳಿಕ ಪಕ್ಕದ ರಸ್ತೆಯಲ್ಲಿ ವಿಜಯಪುರದಿಂದ ಹೊಸಪೇಟೆ ಕಡೆಗೆ ಹೊರಟಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಂಟೇನರ್‌ಗೂ ಅಪ್ಪಳಿಸಿದೆ. ಘಟನೆಗೆ ಕಾರ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆ ಮಧ್ಯದಲ್ಲಿಯೇ ಬಸ್ ಪಲ್ಟಿಯಾಗಿದೆ.ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿಎಸ್ಪಿ ಟಿ.ಎಸ್.ಸುಲ್ಪಿ, ಸಿಪಿಐ ರಮೇಶ ಅವಜಿ, ಮನಗೂಳಿ ಪಿಎಸ್‌ಐ ಶ್ರೀಕಾಂತ ಕಾಂಬಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಬಗ್ಗೆ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.