ಸಾರಾಂಶ
ಕನ್ನಡಪ್ರಭ ವಾರ್ತೆ ಸಿರುಗುಪ್ಪ
‘ಬಡಿಗೆ ಬಡಿದಾಟ ಹಬ್ಬ’ ಎಂದೇ ಪ್ರಸಿದ್ಧಿ ಪಡೆದಿರುವ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ದೇವರಗುಡ್ಡ ಪ್ರದೇಶದಲ್ಲಿ ದಸರಾ ಅಂಗವಾಗಿ ಜರುಗಿದ ಮಾಳ ಮಲ್ಲೇಶ್ವರ ಜಾತ್ರೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ನಡೆದ ಬಡಿಗೆ ಬಡಿದಾಟದಲ್ಲಿ ಅವಘಡ ಸಂಭವಿಸಿದ್ದು, ಇಬ್ಬರು ಮೃತರಾಗಿದ್ದಾರೆ. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಐವರ ಸ್ಥಿತಿ ಚಿಂತಾಜನಕವಾಗಿದೆ.ಕರ್ನಾಟಕ- ಆಂಧ್ರ ಗಡಿಯಲ್ಲಿ ಜರುಗುವ ದೇವರಗುಡ್ಡದ ಜಾತ್ರೆಗೆ ಗಡಿಭಾಗದ ಕನ್ನಡದ ಗ್ರಾಮಗಳು ಹಾಗೂ ಬಳ್ಳಾರಿ ಜಿಲ್ಲೆಯ ನಾನಾ ಕಡೆಗಳಿಂದ ಸಾವಿರಾರು ಜನರು ಭಾಗವಹಿಸುತ್ತಾರೆ. ದಸರಾ ಹಬ್ಬದಲ್ಲಿ ಗುಡ್ಡ ಪ್ರದೇಶದಲ್ಲಿ ಜರುಗುವ ಜಾತ್ರೆಯಲ್ಲಿ ದೇವರ ಮೂರ್ತಿಯನ್ನು ತಮ್ಮ ಊರಿಗೆ ಕರೆದೊಯ್ಯಲು ಭಕ್ತರು ಬಡಿದಾಡಿಕೊಳ್ಳುವ ವಿಶಿಷ್ಟ ಆಚರಣೆ ನೂರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದ್ದು, ಬಡಿದಾಟದಲ್ಲಿ ಪ್ರತಿವರ್ಷ ನೂರಾರು ಜನರಿಗೆ ತೀವ್ರವಾದ ಗಾಯಗಳಾಗುತ್ತವೆ. ಈ ಬಾರಿಯ ಬಡಿಗೆ ಬಡಿದಾಟದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಆದೋನಿಯ ಆಂಜಿನೇಯಲು (50) ಹಾಗೂ ಅರಿಕೇರಿ ತಿಮ್ಮಪ್ಪ (40) ಮೃತರು. ನೆರಣಿಕೆ, ಎಳ್ಳಾರ್ತಿ, ಅರಕೇರಿ, ಸುಳುವಾಯಿ, ವಿರುಪಾಪುರ ಸೇರಿದಂತೆ ನಾನಾ ಗ್ರಾಮಗಳ 100ಕ್ಕೂ ಹೆಚ್ಚು ಭಕ್ತರಿಗೆ ಪೆಟ್ಟಾಗಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನೆರಣಿಕೆ ಗ್ರಾಮಕ್ಕೆ ಸೇರಿದ ಮೀಸಲು ಅರಣ್ಯ ಪ್ರದೇಶದಲ್ಲಿ ಮಾಳ ಮಲ್ಲೇಶ್ವರ ಸ್ವಾಮಿ ದೇವಸ್ಥಾನವಿದ್ದು, ಪ್ರತಿವರ್ಷ ದಸರಾ ಹಬ್ಬದಂದು ಮಲ್ಲೇಶ್ವರಸ್ವಾಮಿ ಕಲ್ಯಾಣೋತ್ಸವ ನಿಮಿತ್ತ ಜಾತ್ರೆ ನಡೆಯುತ್ತದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಕಲ್ಯಾಣೋತ್ಸವದಲ್ಲಿ ಭಾಗವಹಿಸುತ್ತಾರೆ. ಬಳಿಕ ದೇವರನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯುವ ಕುರಿತಂತೆ ಬಡಿಗೆ ಬಡಿದಾಟ ನಡೆಯುತ್ತದೆ.
ಈ ಮಧ್ಯೆ, ಜಾತ್ರೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಗೊರವಯ್ಯ ಕಾರಣಿಕ ನುಡಿದಿದ್ದಾರೆ. "ಗೋಪುರಕ್ಕೆ ಹಾವು ಹರಿದಾಡೀತು ಎಚ್ಚರ. ಗಂಗಿ ಹೊಳೆದಂಡಿಗೆ ನಿಂತಾಳ. ಉತ್ತರ ಭಾಗಕ್ಕೆ ಹೊಂಟಾಳ " ಎಂದು ತಿಳಿಸಿದ್ದಾರೆ.