ತಾಲೂಕಿನ ಮಿಯ್ಯಾರು ಗ್ರಾಮದ ಕಂಬಳ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 169ಎನಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಂಭೀರ

ಕಾರ್ಕಳ: ತಾಲೂಕಿನ ಮಿಯ್ಯಾರು ಗ್ರಾಮದ ಕಂಬಳ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 169ಎನಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತೂಫಾನ್ ವಾಹನ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.ಮೃತರನ್ನು ವಾಹನ ಚಾಲಕ ಮಣ್ಣಪ್ಪ, ಚೇತನ್ (27), ರೋಹಿತ್ (28), ಮಲ್ಲಮ್ಮ (45) ಎಂದು ಗುರುತಿಸಲಾಗಿದೆ.ಅಪಘಾತಕ್ಕೀಡಾದ ತೂಫಾನ್ ವಾಹನದಲ್ಲಿ ಕಲಬುರಗಿ ಜಿಲ್ಲೆಯ ಖಾನದಪುರ ಬಂದೆ ನವಾಜ್ ದರ್ಗಾ ಸಮೀಪದ ನಿವಾಸಿಗಳು ಸಂಚರಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ವಾಹನದಲ್ಲಿ ಚಾಲಕ ಸಹಿತ 13 ಮಂದಿ ಪ್ರಯಾಣಿಕರಿದ್ದರು. ಬುಧವಾರ ಪ್ರವಾಸಕ್ಕೆ ಹೊರಟಿದ್ದ ಈ ತಂಡ ಮೊದಲು ಮುರುಡೇಶ್ವರ ದೇವಾಲಯ, ಬಳಿಕ ಮರವಂತೆ ಕಡಲತೀರ ಹಾಗೂ ಉಡುಪಿ ಕೃಷ್ಣ ದರ್ಶನ ಮುಗಿಸಿಕೊಂಡು ಧರ್ಮಸ್ಥಳದತ್ತ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ತೀವ್ರತೆಗೆ ತೂಫಾನ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಗೀತ (40), ಕವಿತಾ (38) ಬಸವರಾಜ್ (56), ಕಿಶೋರ್ (28), ಲಕ್ಷ್ಮೀ (25), ಜ್ಯೋತಿ (25), ಜಯಲಕ್ಷ್ಮೀ (24), ಕುಶಲ್ (2) ಗಂಭೀರ ಗಾಯಗೊಂಡವರು. ಅವರನ್ನು ಕಾರ್ಕಳದ ಸರಕಾರಿ ಅಸ್ಪತ್ರೆ ಹಾಗೂ ಮಣಿಪಾಲದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಸ್ಥಳಕ್ಕೆ ಕಾರ್ಕಳ ನಗರ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಬೆಳ್ತಂಗಡಿ ಮೂಲದ ಖಾಸಗಿ ಬಸ್ ಅತಿ ವೇಗದಲ್ಲಿ ಸಂಚರಿಸುತ್ತಿದ್ದು, ತೂಫಾನ್ ವಾಹನದೊಂದಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.ಅವೈಜ್ಙಾನಿಕ ಕಾಮಗಾರಿ:ಇದಕ್ಕೆ ಪ್ರಮುಖ ಕಾರಣವಾಗಿ ರಾಷ್ಟ್ರೀಯ ಹೆದ್ದಾರಿ 169ಎಯ ಅವೈಜ್ಞಾನಿಕ ಕಾಮಗಾರಿ ಎಂಬ ಆರೋಪಗಳು ಕೇಳಿಬರುತ್ತಿವೆ. ಹೆದ್ದಾರಿಯಲ್ಲಿ ಸೂಕ್ತ ದಿಕ್ಕು ಸೂಚಕ ಫಲಕಗಳ ಕೊರತೆ, ಸರಿಯಾದ ಡಿವೈಡರ್‌ಗಳಿಲ್ಲದಿರುವುದು ಹಾಗೂ ಏಕಮುಖ ಸಂಚಾರ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸದಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ನಡೆಯುತ್ತಿದ್ದರೂ ವಾಹನ ಸಂಚಾರಕ್ಕೆ ಸ್ಪಷ್ಟ ನಿಯಮಗಳಿಲ್ಲದೆ, ಎರಡು ಬದಿಗಳಿಂದ ವಾಹನಗಳು ಮುಖಾಮುಖಿಯಾಗಿ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ತಕ್ಷಣ ಸರಿಪಡಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ಒತ್ತಾಯಿಸಿದ್ದಾರೆ.