ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ದಿನದ ೧೬ ರಿಂದ ೧೮ ಗಂಟೆಗಳ ಕಾಲ ರಸ್ತೆಯಲ್ಲಿ ಸಂಚರಿಸಿ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಸ್ವಿಗ್ಗಿ, ಜೊಮೆಟೋ ಯುವಕರು ಹಾಗೂ ಕಾರ್ಮಿಕರಿಗೆ ಅಪಘಾತ ವಿಮೆ ನೀಡುವ ನೂತನ ಯೋಜನೆ ಜಾರಿಗೊಳಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ತಿಳಿಸಿದರು.ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಬೆಂಗಳೂರು ಸಾರಿಗೆ ಇಲಾಖೆ ಹಾಗೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಮಂಡ್ಯ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ೫ ಲಕ್ಷ ರು. ಪರಿಹಾರ, ಅಂಗವೈಕಲ್ಯತೆ ಹೊಂದಿದರೆ ೨ ಲಕ್ಷ ರು. ಹಾಗೂ ಗರಿಷ್ಠ ೩ ಲಕ್ಷ ರು.ವರೆಗೆ ಆಸ್ಪತ್ರೆಗೆ ತಗಲುವ ವೆಚ್ಚ ಭರಿಸಲಾಗುವುದು ಎಂದರು.ಕುಟುಂಬದ ಜವಾಬ್ದಾರಿ ನಿರ್ವಹಿಸುವ ಯುವಕರ ಜೀವ ಅಮೂಲ್ಯವಾದದ್ದು ಪ್ರತಿಯೊಬ್ಬರೂ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಲು ಮರೆಯಬಾರದು. ಹಾಗೆಯೇ ಪ್ರತಿ ತಿಂಗಳು ಜಿಲ್ಲೆಯಲ್ಲಿ ಹೆಲ್ಮೆಟ್ ಬಳಕೆಯಿಂದಾಗುವ ಸದುಪಯೋಗ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಅವಕಾಶ ಕಲ್ಪಿಸಲು ಆಶಾದೀಪ ಯೋಜನೆಯನ್ನು ಜಾರಿಗೆ ತಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟ ಜನಾಂಗದ ಅಭ್ಯರ್ಥಿಗಳಿಗೆ ಉದ್ಯೋಗ ನೀಡುವ ಕಂಪನಿಗಳಿಗೆ, ಮಾಲೀಕರಿಗೆ ಸಮುದಾಯದ ನೌಕರರಿಗೆ ಮಾಸಿಕ ವೇತನ ನೀಡಲು ಶೇ.೫೦ರಷ್ಟು ಧನಸಹಾಯವನ್ನು ಆಶಾ ದೀಪ ಯೋಜನೆಯಡಿ ಕಾರ್ಮಿಕ ಇಲಾಖೆ ನೀಡಲಿದೆ ಎಂದರು.೧೦೧ ಅಸಂಘಟಿತ ಕಸುಬು ಮಾಡುವ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ಲಕ್ಷಾಂತರ ಜನರಿಗೆ ಕಾರ್ಮಿಕ ಕಾರ್ಡ್ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಲಾಗುವುದು.
ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಶ್ರಮವೂ ಪ್ರಮುಖವಾಗಿರುತ್ತದೆ. ಸಿನಿಮಾ ಕ್ಷೇತ್ರದ ಕಾರ್ಮಿಕರಿಗೆ ಅನುಕೂಲವಾಗಲು ನೂತನ ಸೌಲಭ್ಯ ಯೋಜನೆ ತರಲು ಕಾರ್ಮಿಕ ಇಲಾಖೆ ಮುಂದಾಗಿದೆ ಎಂದರು.ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಕಾರ್ಮಿಕರು ಶ್ರಮ ಜೀವಿಗಳು. ಅವರಿಗೆ ಅನುಕೂಲವಾಗಬೇಕು ಹಾಗೂ ಅವರ ಮಕ್ಕಳಿಗೆ ಉದ್ಯೋಗ ದೊರೆಯಬೇಕು ಎಂದು ಅನೇಕ ಸೌಲಭ್ಯಗಳನ್ನು ಕಾರ್ಮಿಕ ಇಲಾಖೆ ಜಾರಿಗೆ ತಂದಿದೆ. ಸ್ವತಃ ಇಲಾಖೆಯವರೇ ಜಿಲ್ಲೆಗಳಿಗೆ ಆಗಮಿಸಿ ಯೋಜನೆ, ಸೌಲಭ್ಯಗಳ ಅರಿವು ಮೂಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಎಲ್ಲಾ ವರ್ಗದಿಂದ ೩೫ ಲಕ್ಷ ಜನ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ೧೦೧ ಅಸಂಘಟಿತ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಸೌಲಭ್ಯ ನೀಡುತ್ತಿದೆ. ಸರ್ಕಾರ ರಾಜ್ಯದ ಎಲ್ಲಾ ಶ್ರಮಿಕರಿಗೆ, ಬಡವರಿಗಾಗಿ ಗ್ಯಾರಂಟಿ ಯೋಜನೆಯನ್ನು ಒಳಗೊಂಡಂತೆ ಇತರೆ ಯೋಜನೆಗಳನ್ನು ಜಾರಿಗೆ ತಂದಿರುವುದು. ಜನರ ಪರವಾಗಿ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ಪ್ರೋತ್ಸಾಹಿಸಿ ಎಂದರು.ಸರ್ಕಾರ ಕೋವಿಡ್ ನಿಂದ ಹಿಡಿದು ಇಲ್ಲಿಯವರೆಗೂ ಜನರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸಿದೆ. ಸರ್ಕಾರ ಕೇವಲ ಎಲ್ಲಾ ಸಮುದಾಯಗಳ ಪರವಾಗಿ ಇದ್ದು ಬಡವರಿಗಾಗಿ ನೂತನ ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರ ಎಲ್ಲಾ ಇಲಾಖೆಗಳಿಗೂ ಜವಾಬ್ದಾರಿಗಳನ್ನು ನೀಡಿದ್ದು, ಪ್ರತಿ ಇಲಾಖೆಯೂ ಬಡವರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯ ಮಹತ್ವ ತಿಳಿದಿದ್ದು ಸಂತೋಷ್ ಲಾಡ್ ಕಾರ್ಮಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗ. ರಸ್ತೆ ಅಪಘಾತದಲ್ಲಿ ಸಿಲುಕಿದ ಬಡವರಿಗಾಗಿ ಹಾಗೂ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆಯವರು ಕಾರ್ಮಿಕರಿಗಾಗಿ ಅಪಘಾತ ವಿಮೆಯನ್ನು ಜಾರಿಗೆ ತಂದಿರುವುದು ನಿಜಕ್ಕೂ ಶ್ಲಾಘನೀಯ ಎಂದರು.ಜಿಲ್ಲೆಯಲ್ಲಿದ್ದ ಹಕ್ಕುಪತ್ರ ಸಮಸ್ಯೆ ಪರಿಹರಿಸಿದ್ದು ಮುಖ್ಯ ಮಂತ್ರಿಯವರ ಅನುಮತಿ ಮೇರೆಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುವುದು. ಮನೆಯಿಲ್ಲದವರಿಗಾಗಿ ನಿವೇಶನ ನೀಡಲು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಜನರಿಗೆ ಮನೆ ನೀಡಲು ನಿವೇಶನ ಗುರುತಿಸಲಾಗಿದೆ ಮತ್ತು ನಿವೇಶನ ನೀಡಲು ಕಾರ್ಯಕ್ರಮ ಆಯೋಜಿಸಲಾಗುವುದು. ಮುಂದೆ ಮಂಡ್ಯ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದರು.
ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು.ಶಾಸಕರಾದ ಕೆ. ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ, ಕರ್ನಾಟಕ ಸಣ್ಣಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ ಹಾಗೂ ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))