ಆಕಸ್ಮಿಕ ಬೆಂಕಿ: 6 ಭತ್ತದ ಹುಲ್ಲಿನ ಬಣವೆ ಭಸ್ಮ

| Published : Jan 18 2024, 02:01 AM IST

ಸಾರಾಂಶ

ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಘಟನೆಯಲ್ಲಿ ₹6 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಕುರುಗೋಡು: ಆಕಸ್ಮಿಕವಾಗಿ ಬೆಂಕಿ ತಗುಲಿ 6 ಭತ್ತದ ಹುಲ್ಲಿನ ಬಣವೆ ಮತ್ತು ಒಂದು ಗುಡಿಸಲು ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಬುಧವಾರ ಜರುಗಿದೆ.

ಸಿಂಧವಾಳದ ಮಲ್ಲಪ್ಪ, ಗಾದಿಲಿಂಗಪ್ಪ, ಕರಿಮಲೆ ಕರೆಪ್ಪ, ತಿಪ್ಪಯ್ಯ ಮತ್ತು ಮಡಿವಾಳರ ಮುಕ್ಕಣ್ಣ ಎಂಬ ರೈತರಿಗೆ ಸೇರಿದ ಭತ್ತದ ಹುಲಿನ ಬಣವೆಗಳು ಎಂದು ಗುರುತಿಸಲಾಗಿದೆ.

ಬೆಳಗ್ಗೆ ಬಣವೆಗಳಿರುವ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಾಳಿಗೆ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಪ್ರದೇಶವನ್ನು ವ್ಯಾಪಿಸಿ ಎಲ್ಲ ಬಣವೆಗಳು ಭಸ್ಮವಾಗಿವೆ. ಬಣವೆಗಳು ಹಾಕಿದ್ದ ಸ್ಥಳಕ್ಕೆ ಹೊಂದಿಕೊಂಡಿದ್ದ ಮಡಿವಾಳರ ಗೂಳಮ್ಮ, ದುರ್ಗಮ್ಮ ಅವರಿಗೆ ಸೇರಿದ ಗುಡಿಸಲಿಗೆ ಬೆಂಕಿ ತಗುಲಿ ಅಗತ್ಯ ವಸ್ತುಗಳು, ಬಟ್ಟೆ, ಪಾತ್ರೆ ಸಾಮಗ್ರಿಗಳು ಸಂಪೂರ್ಣ ಸುಟ್ಟಿವೆ.

ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಘಟನೆಯಲ್ಲಿ ₹6 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ಯುವರಾಜ ತಿಳಿಸಿದರು.

ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಪಿಎಸ್ಐ ಸುಪ್ರಿತ್, ಕಂದಾಯ ನಿರೀಕ್ಷಕ ಸುರೇಶ್. ವಿ.ಎ. ಕೊಟ್ರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ್ದರು. ನಷ್ಟ ಪರಿಹಾರ: ಮೇವಿನ ಬಣವೆಗಳಿಗೆ ಹಾಗೂ ಒಂದು ಗುಡಿಸಲಿಗೆ ಬೆಂಕಿ ಬಿದ್ದು ನಷ್ಟವಾಗಿರುವುದು ತಿಳಿದಿದೆ. ಗ್ರಾಪಂ ಕಡೆಯಿಂದ ಮನೆ ನಿರ್ಮಿಸಿಕೊಡಲು ಸೂಚಿಸಲಾಗುವುದು. ಮೇವಿನ ನಷ್ಟ ಪರಿಹಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲಾಗುವುದು ಎಂದು ತಹಸೀಲ್ದಾರ್‌ ಕೆ. ರಾಘವೇಂದ್ರ ರಾವ್‌ ತಿಳಿಸಿದರು.