ಸಾರಾಂಶ
ಗೌರಿಬಿದನೂರು: ಪಟ್ಟಣದಿಂದ ಚಿಕ್ಕಬಳ್ಳಾಪುರಕ್ಕೆ ಹೋಗುತ್ತಿದ್ದ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಮಂಚೇನಹಳ್ಳಿಯಲ್ಲಿ ಬುಧವಾರ ನಡೆದಿದೆ. ಗೌರಿಬಿದನೂರು ಘಟಕದ (ಕೆಎ 40 ಎಫ್ 1300) ಕೆ.ಎಸ್.ಆರ್.ಟಿ.ಸಿ ಬಸ್ ಗೌರಿಬಿದನೂರು-ಚಿಕ್ಕಬಳ್ಳಾಪುರ ಮಾರ್ಗವಾಗಿ ಸಂಚರಿಸುತ್ತಿತ್ತು. ಮಂಚೇನಹಳ್ಳಿಗೆ ಆಗಮಿಸುತ್ತಿದ್ದಂತೆ ಬಸ್ ಮುಂಭಾಗದಲ್ಲಿ ದಟ್ಟಹೊಗೆ ಕಾಣಿಸಿಕೊಂಡು ಕ್ಷಣ ಮಾತ್ರದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ವೇಳೆ ಬಸ್ಸಿನ ಎಂಜಿನ್ ಭಾಗದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕನ ಜಾಗ್ರತೆ ವಹಿಸಿ ಬಸ್‌ನ್ನು ಪಕ್ಕಕ್ಕೆ ನಿಲ್ಲಿಸಿ ಪ್ರಯಾಣಿಕರನ್ನು ಕೂಡಲೇ ಕೆಳಗಿಳಿಸಿದ್ದಾರೆ. ಸ್ಥಳೀಯರು ಮತ್ತು ಯುವಕರು ತಕ್ಷಣ ಧಾವಿಸಿ ಬೆಂಕಿ ನಂದಿಸಿ, ಅನಾಹುತವನ್ನು ತಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಘಟಕ ವ್ಯವವಸ್ಥಾಪಕರು ಭೇಟಿ ನೀಡಿ ಪರಿಶೀಲಿಸಿದರು.
ಗೌರಿಬಿದನೂರು ಘಟಕ ವ್ಯವಸ್ಥಾಪಕ ರವಿಶಂಕರ್ ಪ್ರತಿಕ್ರಿಯಿಸಿ, ಈ ಘಟನೆಯಲ್ಲಿ ಬಸ್‌ನ ಮುಂಭಾಗ ಸಾಧಾರಣವಾಗಿ ಬೆಂಕಿಗೆ ಹಾನಿಯಾಗಿದೆ. ಬಸ್ ಎಂಜಿನ್ ಭಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.ವಿದ್ಯಾರ್ಥಿನಿ ಅನುಷ ಮಾತನಾಡಿ, ಸಮಯಕ್ಕೆ ಬಾರದ ಬಸ್ ಹಾಗೂ ಎಲ್ಲೆಂದರಲ್ಲಿ ಕೆಟ್ಟುನಿಲ್ಲುವ ಬಸ್ ಬಗ್ಗೆ 3 ದಿನಗಳ ಹಿಂದಷ್ಟೇ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ತಾಲೂಕಿನಲ್ಲಿ ಬಸ್ ಸಂಚಾರದ ಸಮಸ್ಯೆ ಹೆಚ್ಚುತ್ತಿದೆ. ಇದರಿಂದ ನಮಗೆ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಅಧಿಕಾರಿಗಳು ಇತ್ತ ಗಮನಹರಿಸಿ ಉತ್ತಮವಾದ ಬಸ್ ಓಡಿಸಬೇಕು ಎಂದಿದ್ದಾರೆ.