ಜ.26ಕ್ಕೆ ಬೆಂಗಳೂರು ಏರ್ಪೋರ್ಟ್‌ ಸ್ತಬ್ಧಚಿತ್ರ?

| Published : Dec 29 2023, 01:30 AM IST

ಸಾರಾಂಶ

2024ರ ಜನವರಿ 26 ಗಣರಾಜ್ಯೋತ್ಸವಕ್ಕೆ ಈ ಬಾರಿ ಕರ್ನಾಟಕದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2 ಟರ್ಮಿನಲ್‌ನ ಸ್ತಬ್ಧಚಿತ್ರ ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೇಶದ 75ನೇ ಗಣರಾಜ್ಯೋತ್ಸವದ ಅಂಗವಾಗಿ 2024ರ ಜನವರಿ 26ರಂದು ನಡೆಯುವ ವಾರ್ಷಿಕ ಪರೇಡ್‌ನಲ್ಲಿ ಕರ್ನಾಟಕದಿಂದ ವಿಶ್ವದಲ್ಲೇ ಅತ್ಯಂತ ಸುಂದರ ಟರ್ಮಿನಲ್‌ ಎಂಬ ಹಿರಿಮೆಗೆ ಪಾತ್ರವಾಗಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ‘ಟರ್ಮಿನಲ್ –2’ನ ಟ್ಯಾಬ್ಲೋವನ್ನು ಪ್ರದರ್ಶಿಸುವ ಬಗ್ಗೆ ಚರ್ಚೆ ನಡೆದಿದೆ. ಟರ್ಮಿನಲ್‌ -2 ಜೊತೆಗೆ ರಾಜ್ಯದ ಇನ್ನೂ ಕೆಲ ವಿಶ್ವವಿಖ್ಯಾತ ತಾಣಗಳು, ಐತಿಹಾಸಿಕ ಸ್ಥಳಗಳು, ಸಂಸ್ಕೃತಿ ಬಿಂಬಿಸುವ ವಿಚಾರಗಳು ಕೂಡ ಪ್ರಸ್ತಾವನೆಯಲ್ಲಿವೆ. ಇವುಗಳ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಕೆಲ ಸುತ್ತಿನ ಸಭೆ ನಡೆಸಿ ಚರ್ಚಿಸಿದ್ದಾರೆ. ಆದರೆ, ಇನ್ನೂ ಯಾವುದನ್ನೂ ಅಂತಿಮಗೊಳಿಸಿಲ್ಲ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ವಾಗಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ಗೆ ಕರ್ನಾಟಕದ ಸ್ತಬ್ಧಚಿತ್ರ ಆಯ್ಕೆಯಾಗಿದೆ. ಆದರೆ ಅದರ ಟ್ಯಾಬ್ಲೋದ ಥೀಮ್‌ ಅಂತಿಮವಾಗಬೇಕಾಗಿದೆ. ಕರ್ನಾಟಕದ ಸ್ತಬ್ಧಚಿತ್ರ ಆಯ್ಕೆಯಾಗಿರುವುದನ್ನು ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್‌ ಖಚಿತಪಡಿಸಿದ್ದಾರೆ.