ಕೆ.ಆರ್.ಪೇಟೆ ತಾಲೂಕು ಕಚೇರಿಯಲ್ಲಿ ಪೌತಿ ಖಾತೆ ಮಾಡಲು ಗ್ರಾಮ ಲೆಕ್ಕಿಗರು ಸಾಕಷ್ಟು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ನೈಜ ವಾರಸುದಾರರ ಕುಟುಂಬದ ಸದಸ್ಯರ ಹೆಸರಿಗೆ ಪೌತಿ ಖಾತೆ ಮಾಡದೆ ರಕ್ತ ಸಂಬಂಧಿಕರೇ ಅಲ್ಲದ ಇತರರ ಹೆಸರಿಗೆ ಪೌತಿ ಖಾತೆ ಮಾಡಿ ರೈತರು ಕೋರ್ಟ್ ಕಚೇರಿ ಅಲೆಯುವಂತೆ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅನ್ಯರ ಹೆಸರಿಗೆ ಅಕ್ರಮವಾಗಿ ಕೃಷಿ ಭೂಮಿ ಖಾತೆ ಮಾಡುತ್ತಿರುವ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಆಗ್ರಹಿಸಿದರು.

ಪಟ್ಟಣದ ರೈತ ಸಂಘ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಕ್ರಮ ಖಾತೆಗಳ ದಾಖಲೆಗಳನ್ನು ಬಿಡುಗಡೆ ಮಾಡಿ, ತಾಲೂಕಿನ ಶೀಳನೆರೆ ಹೋಬಳಿಯಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರರು ಮತ್ತು ಗ್ರಾಮ ಲೆಕ್ಕಿಗರು ಒಗ್ಗೂಡಿ ಜಮೀನಿನ ನೈಜ ವಾರಸುದಾರರರೇ ಅಲ್ಲದವರಿಗೆ ಅಕ್ರಮ ಖಾತೆ ಮಾಡಿರುವುದನ್ನು ಖಂಡಿಸಿದರು.

ತಾಲೂಕು ಕಚೇರಿಯಲ್ಲಿ ಪೌತಿ ಖಾತೆ ಮಾಡಲು ಗ್ರಾಮ ಲೆಕ್ಕಿಗರು ಸಾಕಷ್ಟು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ನೈಜ ವಾರಸುದಾರರ ಕುಟುಂಬದ ಸದಸ್ಯರ ಹೆಸರಿಗೆ ಪೌತಿ ಖಾತೆ ಮಾಡದೆ ರಕ್ತ ಸಂಬಂಧಿಕರೇ ಅಲ್ಲದ ಇತರರ ಹೆಸರಿಗೆ ಪೌತಿ ಖಾತೆ ಮಾಡಿ ರೈತರು ಕೋರ್ಟ್ ಕಚೇರಿ ಅಲೆಯುವಂತೆ ಮಾಡುತ್ತಿದ್ದಾರೆ ಎಂದು ದೂರಿದರು.

ಚೌಡಘಟ್ಟ ಗ್ರಾಮದ ಸರ್ವೇ ನಂ 4/7ರ 012 ಗುಂಟೆ ಜಮೀನು ಮೂಲ ಖಾತೆದಾರ ಶಿವೇಗೌಡರಿಗೆ ಸೇರಿದೆ. ಆದರೆ, ಸದರಿ ಜಮೀನನ್ನು ಶಿವೇಗೌಡರ ರಕ್ತ ಸಂಬಂಧಿಕರೇ ಅಲ್ಲದ ಪಾರ್ವತಮ್ಮರ ಹೆಸರಿಗೆ ಪೌತಿಖಾತೆ ಮಾಡಲಾಗಿದೆ. ಮಾಳೇನಹಳ್ಳಿ ಎಲ್ಲೆಯ ಸರ್ವೇ 7/2 ರಲ್ಲಿನ 09 ಗುಂಟೆ ಜಮೀನು, 8/2 ರಲ್ಲಿನ 0.20 ಗುಂಟೆ ಜಮೀನು ಪುಟ್ಟಸ್ವಾಮಿ, ವೆಂಕಟಸ್ವಾಮಯ್ಯ ಪುಟ್ಟಲಕ್ಷ್ಮಮ್ಮ ಅವರ ಹೆಸರಿನಲ್ಲಿ ಜಂಟಿ ಖಾತೆಯಿದ್ದು, ಪುಟ್ಟಸ್ವಾಮಿ ಅವರು ಪೌತಿಯಾಗಿದ್ದಾರೆ ಎಂದರು.

ಈ ಜಮೀನನ್ನು ಪೌತಿ ಖಾತೆ ಮಾಡುವಾಗ ಜಮೀನಿಗೆ ಸಂಬಂಧಿಸಿದವರ ವಂಶಸ್ಥರೇ ಅಲ್ಲದ ಡಿ.ಪುಟ್ಟಸ್ವಾಮಿ ಅವರ ಹೆಸರಿಗೆ ಪೌತಿ ಖಾತೆ ಮಾಡಲಾಗಿದೆ. ನವಿಲು ಮಾರನಹಳ್ಳಿ ಗ್ರಾಮದ ಸರ್ವೇ ನಂ.33/1ರಲ್ಲಿನ 1.28 ಗುಂಟೆ ಜಮೀನಿಗೆ ಕರೀಗೌಡರು ಮಾಲೀಕರಾಗಿದ್ದರೂ ಅವರು ಬದುಕಿರುವಾಗಲೇ ಅವರ ಮಕ್ಕಳ ಗಮನಕ್ಕೂ ಬಾರದಂತೆ ಸುಧಾ ಉರೀಗೌಡ, ಗಾಯಿತ್ರಿ ರಾಮೇಗೌಡ, ಜಯಮ್ಮ ನಾಗೇಗೌಡ ಮತ್ತು ಸರೋಜ ಶಿವಣ್ಣಗೌಡರ ಹೆಸರಿಗೆ ಅಕ್ರಮ ಖಾತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೌತಿ ಖಾತೆ ಅಕ್ರಮ ಪ್ರಕರಣಗಳ ಬಗ್ಗೆ ರೈತಸಂಘ ತಹಸೀಲ್ದಾರರು, ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ದಾಖಲೆ ಸಮೇತ ನೀಡಿದೆ. ತಪ್ಪು ಮಾಡಿದ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ತಮ್ಮಿಂದ ಆಗಿರುವ ಲೋಪವನ್ನು ರೈತ ಚಳವಳಿ ವೇಳೆ ತಹಸೀಲ್ದಾರರ ಸಮ್ಮುಖದಲ್ಲಿಯೇ ಒಪ್ಪಿಕೊಂಡಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಕ್ರಮವಾಗಬೇಕು. ಮತ್ತೆ ನೈಜ ಖಾತೆದಾರರ ಕುಟುಂಬದ ಹೆಸರಿಗೆ ಜಮೀನನ್ನು ಪೌತಿ ಖಾತೆ ಮಾಡಿಕೊಡುವಂತೆ ಒತ್ತಾಯಿಸಿದರು.

ಈ ವೇಳೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡ ಮಡುವಿನಕೋಡಿ ಪ್ರಕಾಶ್ ಇದ್ದರು.

.