ಟ್ರಸ್ಟ್‌ನವರು ಸುಮಾರು ₹೪೦ರಿಂದ ₹೫೦ ಕೋಟಿ ಅವ್ಯವಹಾರ ಮಾಡಿರುವ ಶಂಕೆ ಇದೆ.
ಕೊಟ್ಟೂರು: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸಮಗ್ರ ಭವಿಷ್ಯದ ದೃಷ್ಟಿಯಿಂದ ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಹಿರಿಯರ ನೇತೃತ್ವದ ಸಂಧಾನ ಸಭೆಯ ಕಾರಣದಿಂದಾಗಿ ಮೇ ೨೫ರಿಂದ ಹಮ್ಮಿಕೊಂಡಿದ್ದ ಹರಿಹರ ಪಂಚಮಸಾಲಿ ಸಮಾಜ ಟ್ರಸ್ಟ್ ವಿರುದ್ಧದ ಲೆಕ್ಕ ಕೊಡಿ ಅಭಿಯಾನ ಹೋರಾಟವನ್ನು ಸದ್ಯಕ್ಕೆ ಮುಂದೂಡಿದ್ದೇವೆ ಎಂದು ಲೆಕ್ಕ ಕೊಡಿ ಹೋರಾಟ ಸಮಿತಿಯ ಅಧ್ಯಕ್ಷ ಪರಮೇಶ್ವರಗೌಡ ಹೊಳೆಸಿರಿಗೆರೆ ಹೇಳಿದರು.
ಪಟ್ಟಣದ ಸಮಾಜದ ಮುಖಂಡ ಪಂಪಾಪತಿ ಅಂಗಡಿ ನಿವಾಸದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಒಗ್ಗಟ್ಟು, ಸಂಘಟನೆಗೆ ತೊಂದರೆ ಬರಬಾರದು ಎನ್ನುವ ಕಾರಣಕ್ಕಾಗಿ ಹುಬ್ಬಳ್ಳಿಯಲ್ಲಿ ಬುಧವಾರ ಸಮಾಜದ ಹಿರಿಯ ಮುಖಂಡರಾದ ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ ಸದಾಭಿಪ್ರಾಯ ಮತ್ತು ಸೂಚನೆ ಮೇರೆಗೆ ಹರಿಹರ ಪೀಠದ ಟ್ರಸ್ಟ್‌ನವರ ದಬ್ಬಾಳಿಕೆ ಮತ್ತು ಹಿರಿಯಣ್ಣ ಧೋರಣೆಯ ನಿಲುವನ್ನು ಖಂಡಿಸಿ ಲೆಕ್ಕ ಕೊಡಿ ಚಳವಳಿಯನ್ನು ಮೇ ೨೫ರಿಂದ ಕೊಟ್ಟೂರಿನಿಂದ ಆರಂಭಿಸಲು ಯೋಚನೆ ಮಾಡಿದ್ದೆವು ಎಂದರು.ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಮಾತನಾಡಿ, ಟ್ರಸ್ಟ್‌ನವರು ಸುಮಾರು ₹೪೦ರಿಂದ ₹೫೦ ಕೋಟಿ ಅವ್ಯವಹಾರ ಮಾಡಿರುವ ಶಂಕೆ ಇದೆ. ಸಮಾಜದವರು ನೀಡಿದ ಪ್ರತಿ ಹಣಕ್ಕೆ ಸೂಕ್ತ ರೀತಿಯಲ್ಲಿ ಲೆಕ್ಕವನ್ನು ಪಾರದರ್ಶಕವಾಗಿ ನೀಡಬೇಕು ಎಂದರು.
ಬೆಟ್ಟಪ್ಪನ ಕಾಣಿಕೆ ಶೂನ್ಯ:ಹರಿಹರ ಪೀಠಕ್ಕೆ ನಿವೇಶನ ನೀಡಿದ ನಮ್ಮ ತಂದೆ ಮಾಜಿ ಸಚಿವ ದಿ.ಎಚ್.ಶಿವಪ್ಪನವರ ಬಗ್ಗೆ ಹಗುರವಾಗಿ ಮಾತನಾಡಿರುವ ಟ್ರಸ್ಟ್‌ನ ಮತ್ತೊಬ್ಬ ಸದಸ್ಯ ಭಾವಿ ಬೆಟ್ಟಪ್ಪ ಇದುವರೆಗೆ ಸಮಾಜಕ್ಕೆ ಕಿಂಚಿತ್ತೂ ಕಾಣಿಕೆಯಾಗಲಿ, ಸಮಾಜ ಸಂಘಟನೆಗೆ ಈತನ ಶ್ರಮವಾಗಲಿ ಇಲ್ಲವೇ ಇಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ವಕೀಲ ಪ್ರಕಾಶ, ಹನುಮಂತಪ್ಪ, ಪಂಪಾಪತಿ ಅಂಗಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ಎನ್.ಬಸವರಾಜ ಇದ್ದರು.