ಸಂಖ್ಯಾ ಶಾಸ್ತ್ರ ಬಳಕೆಯಿಂದ ನಿಖರವಾದ ಮಾಹಿತಿ: ಸುಕೀರ್ತಿ

| Published : Jan 19 2024, 01:48 AM IST

ಸಾರಾಂಶ

ಸಂಖ್ಯಾಶಾಸ್ತ್ರದ ಬಳಕೆಯಿಂದ ಸಮಾಜಶಾಸ್ತ್ರೀಯ ಅಧ್ಯಯನಗಳು ಹೆಚ್ಚು ನಿಖರವಾದ ಮತ್ತು ನಂಬಲರ್ಹವಾದ ಮಾಹಿತಿ ಒದಗಿಸಲು ಸಹಾಯಕವಾಗುತ್ತದೆ ಎಂದು ಶಿವಮೊಗ್ಗ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಸುಕೀರ್ತಿ ಹೇಳಿದರು.

- ಸರ್ಕಾರಿ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ವೇದಿಕೆಯಿಂದ ವಿಶೇಷ ಉಪನ್ಯಾಸ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸಂಖ್ಯಾಶಾಸ್ತ್ರದ ಬಳಕೆಯಿಂದ ಸಮಾಜಶಾಸ್ತ್ರೀಯ ಅಧ್ಯಯನಗಳು ಹೆಚ್ಚು ನಿಖರವಾದ ಮತ್ತು ನಂಬಲರ್ಹವಾದ ಮಾಹಿತಿ ಒದಗಿಸಲು ಸಹಾಯಕವಾಗುತ್ತದೆ ಎಂದು ಶಿವಮೊಗ್ಗ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಸುಕೀರ್ತಿ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಸಮಾಜಶಾಸ್ತ್ರ ವೇದಿಕೆಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರದ ಬಳಕೆ ಬಗ್ಗೆ ಮಾತನಾಡಿದರು.

ಸಮಾಜಶಾಸ್ತ್ರೀಯ ಅಧ್ಯಯನದಲ್ಲಿ ಸಂಖ್ಯಾಶಾಸ್ತ್ರ ಬಳಕೆಯಿಂದ ನಿಖರ ಮಾಹಿತಿ ಲಭ್ಯವಾಗುವುದರಿಂದ‌ ಸಮಾಜದ ವಾಸ್ತವ ಮಾಹಿತಿ ಲಭ್ಯವಾಗಿ ಸಾಮಾಜಿಕ ಬದುಕಿನ ವೈಜ್ಞಾನಿಕ ಅಧ್ಯಯನಗಳು ಹೆಚ್ಚು ಫಲಕಾರಿಯಾಗುತ್ತವೆ ಎಂದ ಅವರು ಸಮಾಜಶಾಸ್ತ್ರದಲ್ಲಿ ಬಳಸುವ ಸಂಖ್ಯಾಶಾಸ್ತ್ರದ ವಿವಿಧ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಎಚ್.ಲಕ್ಷ್ಮಣನಾಯಕ್ ಮಾತನಾಡಿ, ಸಮಾಜಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರದ ಬಳಕೆಯಿಂದ ಸಮಾಜದ ಯಾವುದೇ ಕ್ಲಿಷ್ಟಕರ ವಿಷಯವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.

ಅಧ್ಯಕ್ಷತೆಯನ್ನು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಜೆ. ಮಂಜುನಾಥ್ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಿ.ನಾಗೇಶ್ ಗೌಡ, ಆಂತರಿಕ ಗುಣಮಟ್ಟದ ಭರವಸೆ ಕೋಶದ ಸಂಚಾಲಕ ಆರ್.ಕೆ.ಪ್ರಸಾದ್, ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ದಿನಕರ್, ಸಮಾಜಶಾಸ್ತ್ರ ಉಪನ್ಯಾಸಕ ಐ.ಎಂ.ರಾಜೀವ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.