ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವಿರುದ್ಧ ಹಣ ವಂಚನೆ ಆರೋಪ!

| Published : Dec 12 2023, 12:45 AM IST

ಸಾರಾಂಶ

ಚನ್ನಪಟ್ಟಣ: ನಿರಂತರ ಜ್ಯೋತಿ ಕಾಮಗಾರಿಯ ಉಪಗುತ್ತಿಗೆ ಪಡೆದು ಕೆಲಸ ಮುಗಿಸಿ ಮೂರು ವರ್ಷ ಕಳೆದಿದ್ದರೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ಕಾಮಗಾರಿ ಹಣ ನೀಡದೇ ವಂಚಿಸಿದ್ದು, ಹಣ ಕೇಳಿದ್ದಕ್ಕೆ ಬೆಂಬಲಿಗರಿಂದ ಬೆದರಿಕೆ ಹಾಕಿಸಿದ್ದಾರೆ ಎಂದು ಗುತ್ತಿಗೆದಾರ ಸುರೇಶ್ ಬಾಬು ಗಂಭೀರ ಆರೋಪ ಮಾಡಿದರು.

ಚನ್ನಪಟ್ಟಣ: ನಿರಂತರ ಜ್ಯೋತಿ ಕಾಮಗಾರಿಯ ಉಪಗುತ್ತಿಗೆ ಪಡೆದು ಕೆಲಸ ಮುಗಿಸಿ ಮೂರು ವರ್ಷ ಕಳೆದಿದ್ದರೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ಕಾಮಗಾರಿ ಹಣ ನೀಡದೇ ವಂಚಿಸಿದ್ದು, ಹಣ ಕೇಳಿದ್ದಕ್ಕೆ ಬೆಂಬಲಿಗರಿಂದ ಬೆದರಿಕೆ ಹಾಕಿಸಿದ್ದಾರೆ ಎಂದು ಗುತ್ತಿಗೆದಾರ ಸುರೇಶ್ ಬಾಬು ಗಂಭೀರ ಆರೋಪ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ಅವರ ಎಂ.ಇ. ಎಲೆಕ್ಟ್ರಿಕಲ್ಸ್‌ ಕಂಪನಿ ನಿರಂತರ ಜ್ಯೋತಿಯ ವಿದ್ಯುತ್ ಕಾಮಗಾರಿ ನಿರ್ವಹಿಸುತ್ತಿದ್ದು, ಅವರಿಂದ ಉಪಗುತ್ತಿಗೆ ಪಡೆದು ಕಾಮಗಾರಿ ನಡೆಸಿದ್ದ ನನಗೆ ಹಣ ನೀಡದೇ ವಂಚಿಸಲಾಗಿದೆ ಎಂದು ಆರೋಪಿಸಿದರು.

49 ಲಕ್ಷ ವಂಚನೆ!: ಹುಬ್ಬಳ್ಳಿ-ಧಾರವಾಡ, ಹೊಸಕೋಟೆ, ಚಿತ್ರದುರ್ಗ ಸೇರಿದಂತೆ ಹಲವು ಕಡೆ ಕಂಪನಿ ಕಾಮಗಾರಿ ನಡೆಸಿದ್ದು, ಅವರ ಕಂಪನಿ ಪೋಲ್ ಸಿಮೆಂಟ್ ಕಾಂಕ್ರೀಟ್ ಕಾಮಗಾರಿಯನ್ನು ನನಗೆ ಉಪಗುತ್ತಿಗೆ ನೀಡಿತ್ತು. ಒಂದು ಪೋಲ್‌ಗೆ 2,863 ರು.ಗಳಂತೆ ನನಗೆ ಕಾಮಗಾರಿ ನೀಡಲಾಗಿತ್ತು. ಕಾಮಗಾರಿ ನಡೆಸಿದ ನಾನು ಹಂತಹಂತವಾಗಿ ಬಿಲ್ ಸಲ್ಲಿಸಿದ್ದೆ, ಅವರು ಸಹ ಒಂದು ಲಕ್ಷ, ಒಂದೂವರೆ ಲಕ್ಷದಂತೆ ಹಂತಹಂತವಾಗಿ ಹಣ ಸಂದಾಯ ಮಾಡಿದರು. ನನಗೆ ಒಟ್ಟಾರೆ 20 ಲಕ್ಷ ಹಣ ನೀಡಲಾಗಿದೆ ಎಂದು ಅವರು ಹೇಳುತ್ತಾರೆ. ಆದರೆ, ಬೇರೆಯವರಿಗೆ ನೀಡುವಂತೆ ನನಗೆ ನೀಡಿದ್ದ 3.16 ಲಕ್ಷ ರು. ಹಣ ಸಹ ನನ್ನ ಲೆಕ್ಕಕ್ಕೆ ಸೇರಿಸಲಾಗಿದೆ ಎಂದರು.

2017ರಲ್ಲಿ ಕಾಮಗಾರಿ ಆರಂಭಗೊಂಡಿದ್ದು, 2020ರಲ್ಲಿ ನಾನು ಕಡೆಯ ಬಿಲ್ ಅನ್ನು ಗಂಗಾಧರ್ ಅವರ ಕಂಪನಿಗೆ ಸಲ್ಲಿಸಿದ್ದೇನೆ. 2018ರಲ್ಲಿ ಒಂದು ದೊಡ್ಡ ಕಾಮಗಾರಿ ನಡೆಸಿದ್ದು 49 ಲಕ್ಷ ರು.ಗಳ ಫೈನಲ್ ಬಿಲ್ ಸಲ್ಲಿಸಿದ್ದೇನೆ. ಎಲ್ಲ ಕಾಮಗಾರಿ ಸೇರಿಸಿ ನನಗೆ ಒಟ್ಟು 18 ಲಕ್ಷ ಹಣ ಸಂದಾಯವಾಗಿದ್ದು, ಇನ್ನು 49 ಲಕ್ಷ ಹಣ ಬರಬೇಕಿದೆ ಎಂದು ತಿಳಿಸಿದರು.

ಫೈನಲ್ ಬಿಲ್ ನೀಡಿದ ನಂತರ ಹಣಕ್ಕಾಗಿ ಅವರ ಬಳಿ ಎಷ್ಟೋ ಬಾರಿ ಎಡೆತಾಕಿದ್ದೇನೆ. ಹೋದಾಗಲೆಲ್ಲ ಮುಂದಿನ ಬಿಲ್‌ನಲ್ಲಿ ಹಣ ಸಂದಾಯ ಮಾಡುವುದಾಗಿ ಸಬೂಬು ಹೇಳುತ್ತಿದ್ದರು. ಕೊನೆಗೆ ಕಡೆಯ ಬಿಲ್‌ನಲ್ಲಿ ಹಣ ನೀಡುವುದಾಗಿ ತಿಳಿಸಿದರು. ಆದರೆ, ಅವರು 100% ಹಣ ಗುತ್ತಿಗೆ ಪಡೆದಿದ್ದರೂ ಸಹ ನನಗೆ ಹಣ ನೀಡಲಿಲ್ಲ. ಕೊನೆಗೆ ನೀನು ಸರಿಯಾಗಿ ಕೆಲಸ ಮಾಡಿಲ್ಲ ಆದ ಕಾರಣ ಕೇವಲ ಅರ್ಧ ಹಣ ಮಾತ್ರ ಪಾವತಿಸುತ್ತೇನೆ, ಏನು ಬೇಕಾದರೂ ಮಾಡಿಕೋ ಎಂದರು ಎಂದು ಅಳಲು ತೋಡಿಕೊಂಡರು.

ಸಾಲ ಮಾಡಿ, ಮನೆಯಲ್ಲಿನ ಒಡೆವೆ ಒತ್ತೆ ಇಟ್ಟು ಕಾಮಗಾರಿ ನಡೆಸಿದ್ದೇನೆ. ಇತ್ತೀಚೆಗೆ ಬ್ಯಾಂಕ್‌ಗಳಿಂದ ಹಣಕ್ಕಾಗಿ ನನಗೆ ನೋಟಿಸ್ ಬರುತ್ತಿದೆ. ಹಣ ನೀಡುವಂತೆ ಕೇಳಿದರೆ ಅವರು ಸ್ಪಂದಿಸುತ್ತಿಲ್ಲ. ಇತ್ತೀಚೆಗೆ ಅವರ ಕಡೆಯ ನಾಲ್ಕೈದು ಮಂದಿ ಬಂದು ಗಂಗಾಧರ್ ಯಾವ ಹಣ ನೀಡುವಂತಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಅತ್ಮಹತ್ಯೆಯೊಂದೇ ದಾರಿಬ್ಯಾಂಕ್‌ಗಳಿಂದ ಹಣ ಕಟ್ಟುವಂತೆ ನೋಟಿಸ್ ಬರುತ್ತಿದೆ. ಈ ಹಂತದಲ್ಲೂ ನನಗೆ ಬರಬೇಕಾದ ಹಣ ಬರದಿದ್ದರೆ, ಆತ್ಮಹತ್ಯೆ ಬಿಟ್ಟು ನನಗೆ ಬೇರೆ ದಾರಿಯೇ ಉಳಿದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳವ ಉದ್ದೇಶದಿಂದ ಈಗಾಗಲೇ ಸುಸೈಡ್ ಲೆಟರ್ ಅನ್ನು ಸಿದ್ದಪಡಿಸಿದ್ದೇನೆ ಎಂದು ಸುಸೈಡ್ ಲೆಟರ್ ಪ್ರದರ್ಶಿಸಿದರು.

ಚಕ್ಕೆರೆಯ ಯಲ್ಲಪ್ಪ ಮಾತನಾಡಿ, ಗಂಗಾಧರ್ ಅವರ ಕಂಪನಿಯ ವಿದ್ಯುತ್ ಕಾಮಗಾರಿ ಕೆಲಸ ಮಾಡುವಾಗ ಕಂಬದ ಮೇಲಿನಿಂದ ಬಿದ್ದು, ನನ್ನ ಕೈ ಮುರಿದಿದೆ. ಶಾಶ್ವತ ಅಂಗವೈಖಲ್ಯನಾಗಿದ್ದೇನೆ. ಈ ವೇಳೆ ಪ್ರಕರಣ ದಾಖಲಿಸುವುದು ಬೇಡ 7 ಲಕ್ಷ ಹಣ ನೀಡುತ್ತೇವೆ ಎಂದು ಭರವಸೆ ನೀಡಿದವರು, 3.5ಲಕ್ಷ ಹಣ ನೀಡಿ ಉಳಿಕೆ ಹಣ ನೀಡಿಲ್ಲ. 8 ವರ್ಷಗಳಿಂದ ಹಣ ನೀಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.ಪೊಟೋ೧೧ಸಿಪಿಟಿ೧: ಚನ್ನಪಟ್ಟಣದಲ್ಲಿ ಗುತ್ತಿಗೆದಾರ ಸುರೇಶ್ ಬಾಬು ಪತ್ರಿಕಾಗೋಷ್ಠಿಯಲ್ಲಿ ವರ್ಕ್ ಆರ್ಡರ್ ಪ್ರದರ್ಶಿಸಿ ಮಾತನಾಡಿದರು.