ಸಾರಾಂಶ
ಶ್ರೀರಂಗಪಟ್ಟಣ: ಕಾವೇರಿ ನದಿ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಹಾಗೂ ನೀರಾವರಿ ನಿಗಮದ ಅಧಿಕಾರಿಗಳ ನೇತೃತ್ವದ ತಾಲೂಕು ಮಟ್ಟದ ಅಧಿಕಾರಿಗಳು ಸರ್ವೇ ನಡೆಸಿ ಹದ್ದುಬಸ್ತು ಗುರುತಿಸಿದರು. ಪಟ್ಟಣ ಸಮೀಪದ ಬಂಗಾರದೊಡ್ಡಿ ನಾಲೆ ಬಳಿ ಕಾವೇರಿ ನದಿಯನ್ನು ಒತ್ತುವರಿ ಮಾಡಿ ಅನ್ಯಕ್ರಾಂತ ಮಾಡಿಸದೆ ಹಾಗೂ ನದಿ, ನಾಲೆ ಬಫರ್‌ಜೋನ್ ಬಿಡದೆ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವುದು ಜೊತೆಗೆ ಈಗಾಗಲೇ ಕಟ್ಟಡಗಳು ತಲೆಯತ್ತಿ ರೆಸಾರ್ಟ್, ಹೋಂ ಸ್ಟೇ ಯಂತಹ ಚಟುವಟಿಕೆಗಳು ನಡೆಯುತ್ತಿವೆ. ನದಿ ಒತ್ತುವರಿ ತಡೆಯುವಂತೆ ಸಾರ್ವಜನಿಕರ ದೂರು ನೀಡಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ, ಕಾವೇರಿ ನೀರಾವರಿ ನಿಗಮದ ಎಇಇ ಕಿಶೋರ್, ಕಂದಾಯ, ಸರ್ವೇ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರಳಿ ಕಾವೇರಿ ನದಿ ಗಡಿ ಗುರುತಿಸಿದ್ದಾರೆ. ತಹಸೀಲ್ದಾರ್ ಮಾತನಾಡಿ, ಈ ಹಿಂದೆಯೂ ಸಹ ಜಂಟಿ ಸರ್ವೇ ನಡೆಸಿ, ನದಿ ಪಾತ್ರದ ಜಾಗದ ಹದ್ದುಬಸ್ತು ಗುರುತಿಸಿ ಟ್ರಂಚ್ ಸಹ ಮಾಡಲಾಗಿತ್ತು. ಆದರೆ, ಆ ಟ್ರಂಚ್ ಮುಚ್ಚಿಕೊಂಡು ನದಿ ಸಮೀಪದಲ್ಲಿನ ಜಾಗವನ್ನು ಸಮತಟ್ಟು ಮಾಡಿ ಮತ್ತೆ ಒತ್ತುವರಿಗೆ ಮಾಡಿರುವುದು ಕಂಡು ಬಂದಿದೆ. ಒಂದೆರಡು ದಿನಗಳ ಗಡುವು ನೀಡಿ, ಸ್ವಂತ ಖರ್ಚಿನಿಂದ ಒತ್ತುವರಿಯಾಗಿರುವುದನ್ನು ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಕೂಡಲೇ ನೋಟಿಸ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.