ಬಳ್ಳಾರಿ ಮೂಲದ, ಸದ್ಯ ಬೆಂಗಳೂರಿನ ಮಲ್ಲೇಶ್ವರಂ ವಾಸಿ ಶಿವಶಂಕರ್ ಬಂಧಿತ ಆರೋಪಿಯಾಗಿದ್ದಾನೆ. ಯುವತಿಯರಿಗೆ ವರ್ಕ್‌ ಫ್ರಮ್‌ ಹೋಮ್‌ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದನು.

ರಾಮನಗರ:

ಆ್ಯಪ್​​ ಒಂದರ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು, ಬಳಿಕ ಅವರನ್ನು ಬ್ಲ್ಯಾಕ್​ಮೇಲ್​​ ಮಾಡುತ್ತಿದ್ದ ಆರೋಪಿಯನ್ನು ಕಗ್ಗಲಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಮೂಲದ, ಸದ್ಯ ಬೆಂಗಳೂರಿನ ಮಲ್ಲೇಶ್ವರಂ ವಾಸಿ ಶಿವಶಂಕರ್ ಬಂಧಿತ ಆರೋಪಿಯಾಗಿದ್ದಾನೆ. ಯುವತಿಯರಿಗೆ ವರ್ಕ್‌ ಫ್ರಮ್‌ ಹೋಮ್‌ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದನು. ಈತ ಅವರಿಂದ ಫೋಟೋ ಪಡೆದುಕೊಂಡು ಅದನ್ನು ಅಶ್ಲೀಲವಾಗಿ ಎಡಿಟ್​​ ಮಾಡಿ ಬೆದರಿಸುತ್ತಿದ್ದ ಎನ್ನಲಾಗಿದೆ.

ಕಗ್ಗಲಿಪುರ ಮೂಲದ ಯುವತಿಗೆ ಬ್ಲ್ಯಾಕ್​​ಮೇಲ್​​ :

ಕೆಲ ದಿನಗಳ ಹಿಂದೆ ಬೆಂಗಳೂರು ಹೊರವಲಯದ ಕಗ್ಗಲಿಪುರ ಮೂಲದ ಯುವತಿಯೊಬ್ಬಳಿಗೆ ಆರೋಪಿ ಶಿವಶಂಕರ್ ಎಂಬಾತನ ಪರಿಚಯ ಆಗಿತ್ತು. ಈಕೆಗೂ ಈತ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಅಲ್ಲದೆ ಆಕೆಯಿಂದ 500 ರುಪಾಯಿ ಹಣ ಮತ್ತು ಫೋಟೋ ಸೇರಿ ಕೆಲ ದಾಖಲೆಗಳನ್ನು ಪಡೆದುಕೊಂಡಿದ್ದನು.

ಯುವತಿ ನೀಡಿದ್ದ ಫೋಟೋವನ್ನು ಅಶ್ಲೀಲವಾಗಿ ಎಡಿಟ್​​ ಮಾಡಿದ್ದ ಆರೋಪಿ ಶಿವಶಂಕರ್ ಅದನ್ನು ಆಕೆಯ ಪರಿಚಯಸ್ಥರಿಗೆ ಕಳುಹಿಸಿ ಕಿರುಕುಳ ನೀಡುತ್ತಿದ್ದನು. ಈ ಬಗ್ಗೆ ನೊಂದ ಯುವತಿ ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಯುವತಿಯ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಹಲವರಿಗೆ ಕಿರುಕುಳ ನೀಡಿರುವ ಆರೋಪ :

ಬಳ್ಳಾರಿ ಮೂಲದ ಶಿವಶಂಕರ್ ಬೆಂಗಳೂರಿನಲ್ಲಿ ಕೊರಿಯರ್ ಹಾಗೂ ಓಲಾ ಬೈಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಆ್ಯಪ್ ಮೂಲಕ ಸಾಕಷ್ಟು ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಈತ ಹಲವರಿಗೆ ಕಿರುಕುಳ ನೀಡಿರುವ ಆರೋಪವೂ ಕೇಳಿಬಂದಿದೆ. ಮನೆಯಿಂದಲೇ ಮಾಡುವ ಕೆಲಸ ಕೊಡಿಸುವುದಾಗಿ ಹೇಳುವ ಈತನನ್ನು ನಂಬಿ ಮೋಸ ಹೋದವರು ಹಲವರಿದ್ದಾರೆ.

10ಕೆಆರ್ ಎಂಎನ್ 4.ಜೆಪಿಜಿ

ಆರೋಪಿ ಶಿವಶಂಕರ್