ಸಾರಾಂಶ
ಧಾರವಾಡ:
ಹಿಂದೂ ಬಾಲಕಿ ಗರ್ಭೀಣಿ ಮಾಡಿ ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿ, ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಸದ್ದಾಂ ಹುಸೇನ ಮೇಲೆ ಪೊಲೀಸರೇ ಗುಂಡೇಟು ಹೊಡೆದ ಘಟನೆ ಇಲ್ಲಿನ ಸುತಗಟ್ಟಿಯಲ್ಲಿ ನಡೆದಿದೆ. ಈ ವೇಳೆ ಆರೋಪಿಯಿಂದ ಹಲ್ಲೆಗೊಳಗಾದ ಪಿಐ ಸಂಗಮೇಶ ಹಾಗೂ ಪೊಲೀಸ್ ಪೇದೆ ಅರುಣ ಎಂಬಿಬ್ಬರು ಕೂಡ ಗಾಯಗೊಂಡಿದ್ದಾರೆ. ಮೂವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ಇನ್ನೂ ಜನಮಾನಸದಲ್ಲಿ ಉಳಿದಿರುವಾಗಲೇ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿಯನ್ನು ಸದ್ದಾಂ ಹುಸೇನ ಎಂಬಾತ ನಂಬಿಸಿ ಗರ್ಭೀಣಿ ಮಾಡಿದ್ದಾನೆ ಎಂದು ದೂರು ದಾಖಲಾಗಿತ್ತು. ಬೇರೆಯವರ ಮುಂದೆ ಹೇಳಿದರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಕೂಡ ಹಾಕಿದ್ದ. ಬಾಲಕಿಗೆ ಆರೋಗ್ಯದಲ್ಲಿ ಏರುಪೇರು ಕಂಡಿದ್ದರಿಂದ ಆಕೆಯನ್ನು ಕಿಮ್ಸ್‌ನಲ್ಲಿ ದಾಖಲಿಸಲಾಗಿತ್ತು. ಆಗ ವೈದ್ಯಕೀಯ ಪರೀಕ್ಷೆಯಿಂದ ಆಕೆ ಗರ್ಭೀಣಿಯಾಗಿರುವುದು ಗೊತ್ತಾಗಿದೆ. ಆ ಬಳಿಕ ಠಾಣೆಗೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಆಗ ಈತನ ಮೇಲೆ ಪೋಕ್ಸೋ, ಜಾತಿ ನಿಂದನೆ ಸೇರಿದಂತೆ ಹಲವು ಕಲುಮಿನನ್ವಯ ಪ್ರಕರಣವನ್ನು ನವನಗರ ಠಾಣೆ ಪೊಲೀಸರು ದಾಖಲಿಸಿದ್ದರು.
ಪೆನ್ ನೈಫ್ ಮೂಲಕ ಹಲ್ಲೆ:ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಕಮಿಷನರೇಟ್, ಇದಕ್ಕಾಗಿ ನಾಲ್ಕಾರು ತಂಡಗಳನ್ನು ರಚಿಸಿದ್ದರು. ಆತನನ್ನು ಬಂಧಿಸಿ ಕರೆತರುವಾಗ ಪೊಲೀಸರ ಮೇಲೆಯೇ ಹರಿಹಾಯ್ದಿದ್ದಾನೆ. ಈತನ ಬಳಿ ಪೆನ್ ನೈಫ್ (ಚಿಕ್ಕ ಚಾಕು) ಇತ್ತಂತೆ. ಅದರಿಂದ ಪೇದೆ ಅರುಣ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾನೆ. ಆತನ ರಕ್ಷಣೆಗೆ ತೆರಳಿದ ಪಿಐ ಸಂಗಮೇಶ ಅವರ ಮೇಲೂ ತನ್ನ ಬಳಿ ಇದ್ದ ಪೆನ್‌ನೈಫ್‌ನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಕೂಡಲೇ ಎಚ್ಚೆತ್ತ ಪೊಲೀಸರು, ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಈತನ ಆಟೋಟೋಪ ಕಡಿಮೆಯಾಗಿಲ್ಲ. ಪಿಐ ಸಂಗಮೇಶ ಅವರ ಭುಜ, ಬೆನ್ನಿಗೆ ತನ್ನ ಬಳಿ ಇದ್ದ ಪೆನ್ ನೈಫ್‌ನಿಂದ ಇರಿದಿದ್ದಾನೆ. ಆಗ ಅನಿವಾರ್ಯವಾಗಿ ಈತನ ಎಡಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆತನ ಕೈಯಲ್ಲಿದ್ದ ಪೆನ್‌ನೈಫ್‌ನ್ನು ಕಸಿದುಕೊಂಡಿದ್ದಾರೆ.ಕಿಮ್ಸ್‌ನಲ್ಲಿ ಚಿಕಿತ್ಸೆ:
ಗಾಯಗೊಂಡ ಸದ್ದಾಂಹುಸೇನನ್ನು ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹುಬ್ಬಳ್ಳಿ ಕಿಮ್ಸ್‌ಗೆ ರವಾನೆ ಮಾಡಲಾಗಿದೆ. ಕಿಮ್ಸ್‌ನ ಬಂಧಿಖಾನೆ (ಪ್ರತ್ಯೇಕ ವಾರ್ಡ್) ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಿಮ್ಸ್ ಸಿಬ್ಬಂದಿ ಬಿಟ್ಟರೆ ಯಾರ ಭೇಟಿಗೂ ಅವಕಾಶ ಕೊಡುತ್ತಿಲ್ಲ. ಪೊಲೀಸ್ ಸರ್ಪಗಾವಲಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಸದ್ದಾಂಹುಸೇನ ಹಲ್ಲೆಯಿಂದ ಗಾಯಗೊಂಡಿರುವ ಪಿಐ ಸಂಗಮೇಶ ಹಾಗೂ ಪೇದೆ ಅರುಣ ಇಬ್ಬರಿಗೂ ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ವಿದ್ಯಾಗಿರಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.ಕಮಿಷನರ್ ಭೇಟಿ:
ಶನಿವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಆರೋಪಿ ಸದ್ದಾಂಗೆ ಗುಂಡೇಟು ಪ್ರಕರಣ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಆರೋಪಿ ಸದ್ದಾಂ ಹುಬ್ಬಳ್ಳಿಯ ಎಪಿಎಂಸಿ ಬಳಿಯ ಐದಾರು ಕಿಮೀ ವ್ಯಾಪ್ತಿಯಲ್ಲಿರುವ ಬಗ್ಗೆ ನಮಗೆ ಮಾಹಿತಿ ಇತ್ತು. ವಿದ್ಯಾಗಿರಿ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ಅಲ್ಲಿ ಹೋಗಿತ್ತು. ಆತನನ್ನು ಬಂಧಿಸಿ ಮುಂದಿನ ತನಿಖೆಗೆ ಠಾಣೆಗೆ ಕರೆತರಲು ಮುಂದಾದಾಗ ಸುತಗಟ್ಟಿಯ ಬಳಿ ಈ ಘಟನೆ ನಡೆದಿದೆ ಎಂದು ತಿಳಿಸಿದರು.ಆರೋಪಿಯನ್ನು ಜೀಪ್ ಹತ್ತಿಸುವಾಗ ತನ್ನ ಬಳಿಯಿದ್ದ ಪೆನ್ ನೈಫ್‌ನಿಂದ ಇನ್‌ಸ್ಪೆಕ್ಟರ್ ಸಂಗಮೇಶ ಅವರ ಎಡ ಭುಜಕ್ಕೆ ಚುಚ್ಚಿದ್ದಾನೆ. ಕಾನ್ಸಟೇಬಲ್ ಅರುಣ ಮೇಲೆ ಮೊದಲು ಹಲ್ಲೆ ಮಾಡಿದ್ದಾನೆ. ಆತನನ್ನು ನಿಯಂತ್ರಿಸಲು ಪೊಲೀಸರು ನೆಲಕ್ಕೆ ತಳ್ಳಿದ್ದಾರೆ. ಆದರೂ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಅವನನ್ನು ನಿಯಂತ್ರಿಸಲು ಮೊದಲು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಲಾಗಿದೆ. ಇಷ್ಟಾಗಿಯೂ ತಪ್ಪಿಸಿಕೊಳ್ಳಲು ಮುಂದಾಗಿದಾಗ ಆತನ ಎಡಗಾಲಿಗೆ ಫೈರ್ ಮಾಡಲಾಗಿದೆ. ಸದ್ಯ ಆರೋಪಿಗೆ ಚಿಕಿತ್ಸೆ ನೀಡಿದ್ದು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.