ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದಲ್ಲಿ ಜೇನುಕಲ್ ಬೆಟ್ಟದ ಜಾತ್ರೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ದಂಪತಿಯೊಂದಿಗೆ ಮಾತಿನ ಚಕಮಕಿಯ ಹಿನ್ನೆಲೆ ಯುವಕನ ಮೇಲೆ ಹಲ್ಲೆ ನಡೆದಿರುವ ಆರೋಪಕ್ಕೆ ಸಂಬಂಧಿಸಿ ಅರಸೀಕೆರೆಯಲ್ಲಿ ಶುಕ್ರವಾರ ರಾತ್ರಿ ತೀವ್ರ ಉದ್ವಿಗ್ನತೆ ಉಂಟಾಗಿ, ಶನಿವಾರ ಬೆಳಗ್ಗೆ ಅದೇ ವಿಚಾರ ದೊಡ್ಡ ಮಟ್ಟದ ಪ್ರತಿಭಟನೆಯಾಗಿ ಮಾರ್ಪಟ್ಟಿತು. ಆರೋಪಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಹಿಂದೂಪರ ಸಂಘಟನೆಗಳು ಹಾಗೂ ಸ್ಥಳೀಯ ಮುಖಂಡರು ಮೊದಲು ನಗರ ಪೊಲೀಸ್ ಠಾಣೆ ಮುಂಭಾಗ ರಾತ್ರಿ ಪ್ರತಿಭಟನೆ ನಡೆಸಿ, ನಂತರ ಪಿ.ಪಿ. ವೃತ್ತದಿಂದ ಟ್ರೇಂಡ್ಸ್ ತನಕ ಜಾಥಾ ನಡೆಸಿ ಟ್ರೆಂಡ್ಸ್ ಬಳಿ ಮಾನವ ಸರಪಳಿ ಹಾಗೂ ರಸ್ತೆ ತಡೆ ನಡೆಸಿದರು.ಜಾತ್ರೆಯಿಂದ ವಾಪಸ್ಸಾಗುತ್ತಿದ್ದ ವೇಳೆ ಮಾತಿನ ಚಕಮಕಿ:
ಲಭಿಸಿದ ಮಾಹಿತಿಯಂತೆ, ಶುಕ್ರವಾರ ಮಧ್ಯಾಹ್ನ ಜೇನುಕಲ್ ಬೆಟ್ಟದ ಜಾತ್ರೆಯಿಂದ ವಾಪಸ್ಸಾಗುತ್ತಿದ್ದ ದಂಪತಿಗೆ “ನಿಧಾನವಾಗಿ ಹೋಗಿ” ಎಂದು ಹೇಳಿದ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಯುವಕನ ಮೇಲೆ ನಡುರಸ್ತೆಯಲ್ಲೇ ಹಲ್ಲೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ಯುವಕನ ಪರವಾಗಿ ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು.
ಬಿ. ಎಚ್ ರೋಡ್ ರಸ್ತೆಯಲ್ಲಿ ಇಷ್ಟೆಲ್ಲ ಗೊಂದಲಗಳಾದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಅಸಮಾಧಾನಗೊಂಡ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಶುಕ್ರವಾರ ರಾತ್ರಿ ಸುಮಾರು 11.30ರ ವೇಳೆಗೆ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಗೋಪಿ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ಶನಿವಾರ ಬೆಳಗ್ಗಿನೊಳಗೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ, ಪ್ರತಿಭಟನಾಕಾರರು ತಾತ್ಕಾಲಿಕವಾಗಿ ಹಿಂಪಡೆಯಲು ಒಪ್ಪಿಕೊಂಡರು.ಬೆಳಗ್ಗೆಯೂ ಕ್ರಮವಿಲ್ಲ ಎಂದು ಆಕ್ರೋಶ:
ಶನಿವಾರ ಬೆಳಿಗ್ಗೆ 10 ಗಂಟೆಯಾದರೂ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಪ್ರತಿಭಟನಾಕಾರರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತು. ಇದರಿಂದ ಬೇಸತ್ತ ಹಿಂದೂ ಸಮಾಜದವರು ಸ್ವಯಂ ಪ್ರೇರಿತ ನಗರ ಬಂದ್‌ಗೆ ಕರೆ ನೀಡಿ, ನಗರ ಪಿ.ಪಿ. ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದರು. ನಂತರ ಪಿಪಿ ವೃತ್ತದಿಂದ ನೂರಾರು ಹಿಂದೂ ಬಾಂಧವರು ಮೆರವಣಿಗೆ ನಡೆಸಿ, ಟ್ರೆಂಡ್ಸ್ ಬಳಿಯಲ್ಲಿ ಮಾನವ ಸರಪಳಿ ನಿರ್ಮಿಸಿ, ಆರೋಪಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವೇಳೆ ನಗರದ ಪ್ರಮುಖ ಬಿ. ಎಚ್ ರಸ್ತೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ರಸ್ತೆ ಬಂದ್ ಸ್ಥಿತಿ ನಿರ್ಮಾಣವಾಯಿತು.
‘ಎಫ್‌ಐಆರ್ ದಾಖಲಾಗಿದೆ, ಬಂಧನವಾಗುತ್ತದೆ’ : ಪೊಲೀಸ್ ಇಲಾಖೆ
ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲು ಅಗತ್ಯ ಕ್ರಮ ಪ್ರಗತಿಯಲ್ಲಿದೆ. ಸ್ವಲ್ಪ ಸಮಯ ನೀಡಿದರೆ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈ ಭರವಸೆಯ ನಂತರ ಪ್ರತಿಭಟನಾಕಾರರು ತಾತ್ಕಾಲಿಕವಾಗಿ ಹಿಂಜರಿದರೂ, ಭಾನುವಾರ ಬೆಳಗ್ಗಿನವರೆಗೆ ಸಮಯ ನೀಡುತ್ತೇವೆ. ಆಗಲೂ ಬಂಧನವಾಗದಿದ್ದರೆ ಸೋಮವಾರ ತಾಲೂಕು ಮಟ್ಟದ ಸ್ವಯಂಪ್ರೇರಿತ ಬಂದ್ ನಡೆಸಿ ಇನ್ನೂ ದೊಡ್ಡ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ಥಳೀಯ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಈ ವೇಳೆ ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ಸದಸ್ಯ ಹರ್ಷವರ್ಧನ್, ವಿವೇಕ್ ಲಾಯರ್ ಹಿಂದೂ ಜಾಗರಣ ವೇದಿಕೆಯ ಕೃಷ್ಣ, ಶಿವಶಂಕರ್, ಅರುಣಕುಮಾರ್, ವಸಂತ್, ಶಿವರಾಜ್,, ದರ್ಶನ್, ಚಂದ್ರು, ಪುರುಷೋತ್ತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಘಟನೆಗೆ ಸಂಬಂಧಿಸಿದಂತೆ ನಗರದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಇಲಾಖೆ ಎಚ್ಚರಿಕೆ ಕ್ರಮವಾಗಿ ಪ್ರಮುಖ ಪ್ರದೇಶಗಳಲ್ಲಿ ನಿಗಾ ವಹಿಸಿತು. ಸಾರ್ವಜನಿಕ ಶಾಂತಿ ಕಾಪಾಡಲು ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
* ಬಾಕ್ಸ್:: ಆರೋಪಿ ಬಂಧನ: ಡಿವೈಎಸ್ಪಿ ಗೋಪಿಕನ್ನಡಪ್ರಭ ಪತ್ರಿಕೆಯೊಂದಿಗೆ ಮಾತನಾಡಿದ , ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಈಗಾಗಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾನೂನು ಪ್ರಕ್ರಿಯೆಯಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ಎಲ್ಲಾ ಆಯಾಮಗಳನ್ನೂ ಗಮನದಲ್ಲಿಟ್ಟುಕೊಂಡು ತನಿಖೆ ಮುಂದುವರಿಸಲಾಗುತ್ತಿದೆ ಎಂದು ಅವರು ಹೇಳಿದರು.