ನಗರಸಭೆಯ ಬೆಲೆ ಬಾಳುವ ಆಸ್ತಿ ಕಬಳಿಕೆ: ಆರೋಪ

| Published : Nov 17 2024, 01:17 AM IST

ಸಾರಾಂಶ

Accused of grabbing valuable municipal property

-ಸುದ್ದಿ ಗೋಷ್ಠಿಯಲ್ಲಿ ನಗರಸಭೆ ಸದಸ್ಯ ಶ್ರೀನಿವಾಸ್ ಹೇಳಿಕೆ । ಚಿತ್ರದುರ್ಗ ನಗರಸಭೆ ಆಸ್ತಿ ಉಳಿಸಲು ಅಭಿಯಾನ

--

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಚಿತ್ರದುರ್ಗ ನಗರಸಭೆಗೆ ಸೇರಿದ ಕೋಟ್ಯಂತರ ರುಪಾಯಿ ಬೆಲೆಬಾಳುವ ಆಸ್ತಿಯ ಕೆಲವರು ಕಬಳಿಸಲು ಮುಂದಾಗಿದ್ದು ಈ ಸಂಬಂಧ ಆಸ್ತಿ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಸದಸ್ಯ ಶ್ರೀನಿವಾಸ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಳ್ಳಕೆರೆ ರಸ್ತೆಯಲ್ಲಿರುವ ಆದಿಶಕ್ತಿ ಬಡಾವಣೆಯಲ್ಲಿ ನಗರಸಭೆಗೆ ಸೇರಿದ ಜಾಗದಲ್ಲಿ ವ್ಯಕ್ತಿಯೋರ್ವರು ಗುಜರಿ ಅಂಗಡಿಯಿಟ್ಟುಕೊಂಡಿದ್ದು, ಅಲ್ಲಿ ನಗರಸಭೆ ಜಾಗ ಎಂಬ ನಾಮಫಲಕ ಅಳವಡಿಸಲು ತೆರಳಿದಾಗ ನಗರಸಭೆ ಸದಸ್ಯ ದೀಪು ಅಡ್ಡಿಪಡಿಸಿ ಅಕ್ರಮಕ್ಕೆ ಕೈಜೋಡಿಸಿದ್ದಾರೆ. ನಗರಸಭೆ ಖಾಲಿ ಜಾಗವನ್ನು ಲೂಟಿ ಹೊಡೆಯಲು ಕೆಲವರು ಹುನ್ನಾರ ನಡೆಸುತ್ತಿದ್ದಾರೆ. ಆದಿಶಕ್ತಿ ನಗರ ಮೂರು ಮತ್ತು ನಾಲ್ಕನೆ ಕ್ರಾಸ್‍ನಲ್ಲಿ ಅರವತ್ತು-ನಲವತ್ತು ಅಡಿ ವಿಸ್ತೀರ್ಣವುಳ್ಳ ಎಂಟು ಖಾಲಿ ಜಾಗಗಳಿದ್ದು, ನಗರಸಭೆ ವ್ಯಾಪ್ತಿಗೆ ಸೇರಿದ ಅನೇಕ ಬಡಾವಣೆಗಳಲ್ಲಿರುವ ಜಾಗಗಳನ್ನು ನಗರಸಭೆ ಗಮನಕ್ಕೆ ತಾರದೆ ಕೆಲವರು ಅಕ್ರಮ ಅತಿಕ್ರಮಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಅಂತಹ ಜಾಗಗಳಲ್ಲಿ ನಗರಸಭೆ ಸ್ವತ್ತು ಎಂಬ ನಾಮಫಲಕ ಅಳವಡಿಸಲು ಬಿಡುತ್ತಿಲ್ಲ. ಜಾಗ ಸಂರಕ್ಷಣೆಗೆ ಹೋದರೆ ದೌರ್ಜನ್ಯವೆಸಗುತ್ತಿದ್ದಾರೆಂದು ದೂರಿದರು.

1984-85 ರಲ್ಲಿ ನಾಲ್ಕುವರೆ ಎಕರೆ ಜಾಗವನ್ನು ನಿವೇಶನಗಳನ್ನಾಗಿ ಮಾರ್ಪಡಿಸಿ ಹರಾಜು ಹಾಕಿದಾಗ ಕೆಲವರು ಬೆಲೆ ಕಟ್ಟಿ ನಿವೇಶನ ಪಡೆದಿದ್ದಾರೆ. ಹಣ ಕಟ್ಟದ ಕೆಲವರು ನಿವೇಶನ ಪಡೆದಿಲ್ಲ. ಕೆಲವು ಪ್ರಭಾವಿಗಳು ತಮ್ಮ ಹೆಸರಿನಲ್ಲಿಟ್ಟುಕೊಂಡಿದ್ದಾರೆ. ಮೂವತ್ತರಿಂದ ನಲವತ್ತು ಕೋಟಿ ರು.ಆಸ್ತಿಯಿದೆ. ನಗರಸಭೆ ಜಾಗವನ್ನು ಕಾಪಾಡುವಂತೆ ಲೋಕಾಯುಕ್ತಕ್ಕೆ ದೂರು ನೀಡಲು ಮುಂದಾಗಿದ್ದೇವೆ. ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನಗರಸಭೆ ಜಾಗಗಳನ್ನು ಉಳಿಸುವಂತೆ ನಗರಸಭೆ ಸದಸ್ಯ ಶ್ರೀನಿವಾಸ್ ಮತ್ತು ಭಾಸ್ಕರ್ ಮನವಿ ಮಾಡಿದರು.

ನಗರಸಭೆ ಮಾಜಿ ಉಪಾಧ್ಯಕ್ಷೆ ಅನುರಾಧ ರವಿಕುಮಾರ್, ಸದಸ್ಯ ಹರೀಶ್, ಗುಜರಿ ಅಂಗಡಿಯ ರಮೇಶ್, ರವಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

------------

ಪೋಟೋ:ನಗರಸಭೆ ಸದಸ್ಯ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

------- 16 ಸಿಟಿಡಿ5