ನಮ್ಮ ಕ್ಲಿನಿಕ್‌ಗೆ ಜಾಗ ಗುರುತಿಸದೇ ದ್ವೇಷದ ರಾಜಕಾರಣ ಆರೋಪ

| Published : Oct 31 2025, 02:30 AM IST

ಸಾರಾಂಶ

ನಮ್ಮ ಕ್ಲಿನಿಕ್‌ನ್ನು ದನದ ಮಾರುಕಟ್ಟೆ ಹತ್ತಿರ ಸ್ಥಾಪಿಸುವ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕೆಂದು 2 ತಿಂಗಳಿಂದ ಪಾಲಿಕೆಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಗಣನೆಗೆ ತೆಗೆದುಕೊಳ್ಳದೇ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಪ್ಕತಿಪಕ್ಷ ಆರೋಪಿಸಿತು.

ಹುಬ್ಬಳ್ಳಿ: ರಾಜ್ಯ ಸರ್ಕಾರದಿಂದ ಧಾರವಾಡ ಗ್ರಾಮೀಣ ಕ್ಷೇತ್ರದ ಮಾಳಾಪೂರಕ್ಕೆ ಮಂಜೂರಾಗಿದ್ದ ನಮ್ಮ ಕ್ಲಿನಿಕ್‌ನ್ನು ದನದ ಮಾರುಕಟ್ಟೆ ಹತ್ತಿರ ಸ್ಥಾಪಿಸುವ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕೆಂದು 2 ತಿಂಗಳಿಂದ ಪಾಲಿಕೆಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಗಣನೆಗೆ ತೆಗೆದುಕೊಳ್ಳದೇ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಮೇಯರ್‌ ವಿರುದ್ಧ ಪಾಲಿಕೆ ಪ್ರತಿಪಕ್ಷದ ನಾಯಕ ಇಮ್ರಾನ್‌ ಯಲಿಗಾರ ಅಸಮಾಧಾನ ವ್ಯಕ್ತಪಡಿಸಿದರು.

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅವರು ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಆಡಳಿತ- ವಿರೋಧ ಪಕ್ಷಗಳ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು. ಬಳಿಕ ಮಧ್ಯಸ್ಥಿಕೆ ವಹಿಸಿದ ಸದಸ್ಯ ತಿಪ್ಪಣ್ಣ ಮಜ್ಜಗಿ, ಜಾಗೆ ಮಂಜೂರು ಮಾಡುವ ಅಧಿಕಾರ ಸಭೆಗೆ ಇಲ್ಲ. ಹೀಗಾಗಿ, ಅರ್ಜಿ ಬಂದಾಗಲೇ ಸೂಕ್ತ ಕಾರಣ ನೀಡಿ ಹಿಂಬರಹ ನೀಡುವುದನ್ನು ಬಿಟ್ಟು ಸಭೆಯಲ್ಲಿ ಗೊಂದಲ ಸೃಷ್ಟಿಸದಂತೆ ಆಯುಕ್ತರಿಗೆ ತಾಕೀತು ಮಾಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.

ಆರೋಪ-ಪ್ರತ್ಯಾರೋಪ

ರಾಜ್ಯ ಸರ್ಕಾರದಿಂದ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಮಂಜೂರಾದ ₹10 ಕೋಟಿಗಳ ವಿಶೇಷ ಅನುದಾನ ಅನುಮೋದನೆಯ ವಿಷಯವನ್ನು ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡು, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿತ್ತು. ಆದರೆ, ಈ ವಿಷಯವನ್ನು ಆಡಳಿತ ಪಕ್ಷದವರು ತೆಗೆದುಕೊಳ್ಳದೇ ಮುಂದಿನ ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದಾಗ ಕಾಂಗ್ರೆಸ್ ಸದಸ್ಯರು ವಿಷಯವನ್ನು ಈಗಲೇ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಆಗ ಆಡಳಿತ- ವಿರೋಧ ಪಕ್ಷದ ಸದಸ್ಯರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಂತೆ ಸಭೆ ಮುಕ್ತಾಯಗೊಳಿಸಲಾಯಿತು.

ಇರದ ಕಂಟೇನರ್‌ಗಳಿಗೆ ಶುಲ್ಕ ಏಕೆ?

ಪಾಲಿಕೆ ವ್ಯಾಪ್ತಿಯಲ್ಲಿ ಮನೆಗೆ ತೆರಳಿ ಕಸ ಸಂಗ್ರಹಿಸುವ ಬಗ್ಗೆ ಕಂಟೇನರ್ ಚಾರ್ಜ್‌ ವಸೂಲಿ ಮಾಡುವ ಕುರಿತು ಕಳೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ಠರಾವಿನ ಬಗ್ಗೆ ಚರ್ಚೆ ನಡೆಯಿತು. ಸದಸ್ಯ ಉಮೇಶ ಕೌಜಗೇರಿ ಮಾತನಾಡಿ, ಕಂಟೇನರ್‌ ಬಳಕೆ ಇಲ್ಲದಿದ್ದರೂ, ಅದಕ್ಕೆ ಕರ ವಸೂಲಿ ಮಾಡುವ ನಿರ್ಧಾರ ಅವೈಜ್ಞಾನಿಕವಾಗಿದೆ. ಕೂಡಲೇ ಠರಾವು ರದ್ದುಗೊಳಿಸುವಂತೆ ಒತ್ತಾಯಿಸಿದರು.

315 ಆಟೋ ಟಿಪ್ಪರ್‌ ಕಸ ಸಂಗ್ರಹಿಸುತ್ತಿದ್ದು, ಅವುಗಳ ನಿರ್ವಹಣೆಗೆ ಚಾರ್ಜ್‌ ವಿಧಿಸಲಾಗುತ್ತಿದೆ. ಕಂಟೇನರ ಪದ ತೆಗೆದು, ಆಟೋ ಟಿಪ್ಪರ್ ಚಾರ್ಜ್‌ ಎಂದು ಮಾಡಲಾಗುವುದು ಎಂದು ಆಯುಕ್ತ ರುದ್ರೇಶ ಘಾಳಿ ಸದಸ್ಯರ ಗಮನಕ್ಕೆ ತಂದರು. ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ತಿಪ್ಪಣ್ಣ ಮಜ್ಜಗಿ, ಕಸ ಸಂಗ್ರಹ ಹಾಗೂ ಸ್ವಚ್ಛತೆಗೆ ಘನತ್ಯಾಜ್ಯ ವಿಭಾಗವಿದ್ದು, ಅದಕ್ಕಾಗಿಯೇ ಒಂದು ಸಮಿತಿಯೂ ಇದೆ. ಅದರ ಮೂಲಕ ಪ್ರಸ್ತಾವನೆ ಸಲ್ಲಿಕೆಯಾದರೆ, ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು. ಮೂಲದಿಂದಲೇ ಪ್ರಸ್ತಾವನೆ ಬಂದು ಠರಾವು ಪಾಸಾದರೆ ಕಾಯ್ದೆಯಾಗುತ್ತದೆ. ತಮ್ಮಷ್ಟಕ್ಕೆ ವಿಷಯ ಮಂಡಿಸಿ ಠರಾವು ಪಾಸು ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಉಮೇಶ ಕೌಜಗೇರಿ ಮಾತನಾಡಿ, ಈಚೆಗೆ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿ ನಡೆಸಿದ ಸಭೆಯಲ್ಲಿ ಕಂಟೇನರ್‌ಗೆ ಪ್ರತ್ಯೇಕ ಚಾರ್ಚ್‌ ವಿಧಿಸುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಈಗ ಟಿಪ್ಪರ್‌ ಹೆಸರಲ್ಲಿ ಜನರಿಂದ ಹಣ ವಸೂಲಿ ಮಾಡಲು ನಿರ್ಧರಿಸಿ ಠರಾವು ಪಾಸ್‌ ಮಾಡಿರುವುದು ಎಷ್ಟು ಸರಿ? ಎಂದರು.

ಈ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಯರ್‌ ಆಯುಕ್ತರಿಗೆ ಸೂಚನೆ ನೀಡಿದರು.ಸ್ಟೀಲ್‌ ಗ್ಲಾಸಿನ ಸದ್ದು

ಪ್ಲಾಸ್ಟಿಕ್‌ ಬಳಕೆ ನಿಷೇಧಿಸುವ ನಿಟ್ಟಿನಲ್ಲಿ ಗುರುವಾರ ನಡೆದ ಸಭೆಯಲ್ಲಿ ಸರ್ವ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಕುಡಿಯಲು ಈ ಬಾರಿ ಪ್ಲಾಸ್ಟಿಕ್‌ ಬಾಟಲ್‌ ಬದಲಾಗಿ ಸ್ಟೀಲ್‌ ಗ್ಲಾಸ್‌ಗಳಲ್ಲಿ ನೀರನ್ನು ಕೊಡಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಸದಸ್ಯ ಇಕ್ಬಾಲ್‌ ಅಹ್ಮದ ನವಲೂರ, ಇದು ಕೇವಲ ಈ ಸಭೆಗೆ ಮಾತ್ರ ಸೀಮಿತವಾ ಅಥವಾ ಎಲ್ಲ ಕಡೆ ಪಾಲಿಕೆಯಿಂದ ಪ್ಲಾಸ್ಟಿಕ್‌ ಬಾಟಲ್‌ ಬಳಕೆ ನಿಷೇಧ ಮಾಡಲಾಗುತ್ತದೆಯಾ ಎಂದು ಪ್ರಶ್ನಿಸಿದರು. ಹಾಗೊಂದು ವೇಳೆ ನಿಷೇಧ ಇದ್ದರೆ ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.

ಆಗ ಪಾಲಿಕೆಯ ಪರಿಸರ ಮತ್ತು ಆರೋಗ್ಯ ಅಧಿಕಾರಿ ಮಾತನಾಡಿ, ನಾವು ನಿಷೇಧಿತ ಪ್ಲಾಸ್ಟಿಕ್‌ ಬಳಕೆಯ ಬಗ್ಗೆ ಎಲ್ಲೆಡೆ ಕಾರ್ಯಾಚರಣೆ ನಡೆಸಿ ಸೀಜ್‌ ಮಾಡುತ್ತಿದ್ದೇವೆ. ಈಗ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪ್ಲಾಸ್ಟಿಕ್‌ ಬಾಟಲ್‌ ಬಳಕೆ ಮಾಡದೇ ಜಾಗೃತಿ ಮೂಡಿಸಲು ಈ ನಿರ್ಧಾರ ಕೈಗೊಂಡಿದ್ದೇವೆ. ಹಂತ- ಹಂತವಾಗಿ ಪ್ಲಾಸ್ಟಿಕ್‌ ಬಳಕೆಗೆ ನಿಷೇಧ ಹೇರಲಾಗುವುದು ಎಂದರು.ಒಂದೇ ಗಂಟೆಯಲ್ಲಿ ಮುಗಿದ ಸಭೆ:

ಪಾಲಿಕೆ ಸಾಮಾನ್ಯ ಸಭೆಯು 11.30ಕ್ಕೆ ಆರಂಭಗೊಂಡು ಈಚೆಗೆ ನಿಧನರಾದ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಹಾಗೂ ಯಶವಂತ ಸರದೇಶಪಾಂಡೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಸೇರಿದಂತೆ ವಿಷಯಪಟ್ಟಿ, ಚಿಕ್ಕೆ ಗುರುತಿನ ಪ್ರಶ್ನೆಗಳು ಸೇರಿ ಎಲ್ಲವೂ ಕೇವಲ ಒಂದೇ ಗಂಟೆಯಲ್ಲಿ ಚರ್ಚಿಸಿ ಸಭೆ ಮುಕ್ತಾಯಗೊಳಿಸಲಾಯಿತು.