ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಿ: ಹೆಗ್ಡೆ

| Published : Mar 10 2025, 01:31 AM IST

ಸಾರಾಂಶ

ಜೀವನದಲ್ಲಿ ಸಾಧನೆ ಮಾಡಿ ಉನ್ನತ ಸ್ಥಾನಕ್ಕೆ ಏರಿದ ಬಳಿಕ ಸಮಾಜಕ್ಕೆ ವಾಪಸ್ ಕೊಡುಗೆ ನೀಡುವ ಮಾದರಿ ವ್ಯಕ್ತಿತ್ವಕ್ಕೆ ರಾಜ್ಯಸಭಾ ಸದಸ್ಯೆ ಡಾ.ಸುಧಾ ಮೂರ್ತಿ ಅವರು ಪ್ರತೀಕವಾಗಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜೀವನದಲ್ಲಿ ಸಾಧನೆ ಮಾಡಿ ಉನ್ನತ ಸ್ಥಾನಕ್ಕೆ ಏರಿದ ಬಳಿಕ ಸಮಾಜಕ್ಕೆ ವಾಪಸ್ ಕೊಡುಗೆ ನೀಡುವ ಮಾದರಿ ವ್ಯಕ್ತಿತ್ವಕ್ಕೆ ರಾಜ್ಯಸಭಾ ಸದಸ್ಯೆ ಡಾ.ಸುಧಾ ಮೂರ್ತಿ ಅವರು ಪ್ರತೀಕವಾಗಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದ್ದಾರೆ.

ನಗರದ ಬಿ.ಎಂ.ಶ್ರೀ ಸಭಾಂಗಣದಲ್ಲಿ ಭಾನುವಾರ ಕೆ.ಪಿ. ಪಬ್ಲಿಕೇಷನ್ಸ್ ಪ್ರಕಟಣೆಯ ‘ಸಾಧನೆಯ ಶಿಖರ ಡಾ.ಸುಧಾ ಮೂರ್ತಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎಲ್ಲರಿಗೂ ಸಹಾಯಹಸ್ತ ಚಾಚುವ ವಿಶಾಲ ಮನಸ್ಸು ಮತ್ತು ಗುಣವನ್ನು ಸುಧಾ ಮೂರ್ತಿ ಬೆಳೆಸಿಕೊಂಡಿದ್ದಾರೆ. ತಾವು ಎಲ್ಲಾದರೂ ಹೋದಾಗ ಕೊರತೆ ಕಾಣಿಸಿದರೆ ಅದನ್ನು ತಮ್ಮ ವ್ಯಾಪ್ತಿಯಲ್ಲಿ ಕೊರತೆ ನೀಗಿಸಲು ಪ್ರಯತ್ನಿಸುತ್ತಾರೆ. ದಾರಿ ಹೋಕನಿಗೆ ಸಣ್ಣ ನೆರವು ನೀಡುವುದರಿಂದ ಹಿಡಿದು ದೊಡ್ಡ ಯೋಜನೆ, ಮಹತ್ವದ ಉದ್ದೇಶಗಳಿಗೆ ನೆರವು, ಸಹಾಯ ಮಾಡುತ್ತಾರೆ. ಉನ್ನತ ಹುದ್ದೆಗೇರಿ ಸಮಾಜಕ್ಕೆ ಕೊಡುಗೆ ನೀಡುವ ಇಂತಹ ವ್ಯಕ್ತಿಗಳೇ ಸಮಾಜಕ್ಕೆ ಮಾದರಿ ಎಂದರು.

ಪುಸ್ತಕದ ಬಗ್ಗೆ ಮಾತನಾಡಿದ ಲೇಖಕಿ ಪ್ರೊ.ವನಮಾಲಾ ವಿಶ್ವನಾಥ್, ಮಧ್ಯಮ ವರ್ಗದ ಮನೆಯಲ್ಲಿ ಹುಟ್ಟಿ, ಪ್ರೀತಿ, ವಿಶ್ವಾಸದಲ್ಲಿ ನಗು ನಗುತ್ತಾ ಬೆಳೆದ ಸುಧಾ ಮೂರ್ತಿ ತಮ್ಮ ಗುರಿಯನ್ನು ಬೆನ್ನತ್ತಿದವರು. ಪಿಯು ಬಳಿಕ ತಂದೆ ಮೆಡಿಕಲ್ ಕೋರ್ಸ್ ಮಾಡುವಂತೆ ಸಲಹೆ ನೀಡಿದ್ದರು. ಆದರೆ, ಸುಧಾ ಮೂರ್ತಿ ತಮಗಿಷ್ಟದ ಎಂಜಿನಿಯರಿಂಗ್ ಆಯ್ಕೆ ಮಾಡಿಕೊಂಡರು. ಹುದ್ದೆಯೊಂದರ ನೇಮಕಾತಿಗೆ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದ ಖಾಸಗಿ ಕಂಪನಿ, ಹೆಣ್ಣು ಮಕ್ಕಳು ಅರ್ಜಿ ಸಲ್ಲಿಸುವುದು ಬೇಡ ಎಂದು ನಮೂದಿಸಿತ್ತು. ಇದರಿಂದ ಅಸಮಾಧಾನಗೊಂಡ ಸುಧಾಮೂರ್ತಿ, ಕಂಪನಿಗೆ ಪತ್ರ ಬರೆದು ಲಿಂಗ ತಾರತಮ್ಯದ ವಿರುದ್ಧ ಕಿಡಿಕಾರಿದ್ದರು. ನಂತರ ಅದೇ ಕಂಪನಿಯ ಸಂದರ್ಶನಕ್ಕೆ ಹಾಜರಾಗಿ ಅಲ್ಲೇ ಕೆಲಸ ಗಿಟ್ಟಿಸಿಕೊಂಡಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಹಂಪ ನಾಗರಾಜಯ್ಯ, ಪುಸ್ತಕದ ಲೇಖಕರಾದ ಡಾ.ಎಚ್.ಎಸ್.ಎಂ ಪ್ರಕಾಶ ಮತ್ತು ಡಾ. ಕೆ.ಎನ್. ಕೇಶವ ಮೂರ್ತಿ ಇದ್ದರು.