ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುವ 66/11 ಕೆವಿ ವಿದ್ಯುತ್ ಉಪಕೇಂದ್ರದ ನಿರ್ಮಾಣ ಕಾಮಗಾರಿಗೆ 20 ಕೋಟಿ ರು. ವೆಚ್ಚದಲ್ಲಿ ಶಂಕುಸ್ಥಾಪನೆ ಮತ್ತು ಗುದ್ದಲಿ ಪೂಜೆ ನೆರವೇರಿಸಲಾಯಿತು. ಚೆಸ್ಕಾಂ ಸಹಯೋಗದೊಂದಿಗೆ ಒಟ್ಟು 25.57 ಕೋಟಿ ರು. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕೃತ ಚಾಲನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಅರ್ಥಿಕತೆಯಲ್ಲಿ ಸದೃಢರಾಗುವ ಮೂಲಕ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಮೋಟಾರ್ ಪಂಪ್ ವಿತರಣೆ, ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ವಿತರಣೆ, ಕೃಷಿ ಇಲಾಖೆಯಿಂದ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಉಪಕರಣಗಳನ್ನು ವಿತರಿಸಿ ಮಾತನಾಡಿದರು.

ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುವ 66/11 ಕೆವಿ ವಿದ್ಯುತ್ ಉಪಕೇಂದ್ರದ ನಿರ್ಮಾಣ ಕಾಮಗಾರಿಗೆ 20 ಕೋಟಿ ರು. ವೆಚ್ಚದಲ್ಲಿ ಶಂಕುಸ್ಥಾಪನೆ ಮತ್ತು ಗುದ್ದಲಿ ಪೂಜೆ ನೆರವೇರಿಸಲಾಯಿತು. ಚೆಸ್ಕಾಂ ಸಹಯೋಗದೊಂದಿಗೆ ಒಟ್ಟು 25.57 ಕೋಟಿ ರು. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕೃತ ಚಾಲನೆ ನೀಡಲಾಗಿದೆ ಎಂದರು.

ಕೃಷಿ ಇಲಾಖೆಯಿಂದ ತಾಲೂಕಿನ ಒಟ್ಟು 98 ಅರ್ಹ ರೈತರಿಗೆ 37.30 ಲಕ್ಷ ರು. ಅನುದಾನದಡಿ ಕೃಷಿ ಉಪಕರಣಗಳು ಹಾಗೂ ಯಂತ್ರೋಪಕರಣ ವಿತರಿಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ 2023-24ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ 10 ಜನ ಫಲಾನುಭವಿಗಳಿಗೆ ಪಂಪ್‌ಸೆಟ್ ಹಾಗೂ ಮೋಟಾರ್‌ಗಳನ್ನು ನೀಡಲಾಗಿದೆ. ಪ್ರತಿ ಫಲಾನುಭವಿಗೆ 3.5 ಲಕ್ಷದಂತೆ ಒಟ್ಟು 35 ಲಕ್ಷರು ಸಹಾಯಧನ ಸಿಕ್ಕಿದೆ ಎಂದರು.

2024-25ನೇ ಸಾಲಿನ ಸಾರಥಿ ಯೋಜನೆಯಡಿ ಆಯ್ಕೆಯಾದ 4 ಜನ ಫಲಾನುಭವಿಗಳಿಗೆ ತಲಾ 4 ಲಕ್ಷ ಸಬ್ಸಿಡಿಯಂತೆ ಒಟ್ಟು 16 ಲಕ್ಷ ರು. ವೆಚ್ಚದಲ್ಲಿ ಕಾರುಗಳನ್ನು ವಿತರಿಸಲಾಗಿದೆ. ನಿರುದ್ಯೋಗದಲ್ಲಿ ಬಳಲುತ್ತಿರುವ ಯುವಕರು ಹಾಗೂ ಮಹಿಳೆಯರಿಗೆ ಸ್ವಂತ ಬದುಕು ಕಟ್ಟಿಕೊಳ್ಳಲು ಸರ್ಕಾರದ ಸೌಲಭ್ಯಗಳು ಸಹಕಾರಿಯಾಗಿದೆ ಎಂದು ಆಶಯವ್ಯಕ್ತಪಡಿಸಿದರು.

ಮೋಡ ಬಿತ್ತನೆ ಹಾಗೂ ಪ್ರಕೃತಿಯ ವಿಕೋಪಗಳಿಗೆ ಉತ್ತರಿಸುವುದು ಕೇವಲ ಸರ್ಕಾರದ ಕೈಯಲ್ಲಿಲ್ಲ. ಕೃಷಿ, ಕುಡಿಯುವ ನೀರು ಮತ್ತು ಮೇವಿನ ಅಭಾವ ಉಂಟಾಗದಂತೆ ಸರ್ಕಾರ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ, ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಬರ ಪೀಡಿತ ಪ್ರದೇಶಗಳನ್ನು ಗುರುತಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಚಂದ್ರ, ಉಪ ನಿರ್ದೇಶಕಿ ಮಾಲತಿ, ಸಹಾಯಕ ನಿರ್ದೇಶಕ ಸಂದೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮನ್ಮುಲ್ ಮಾಜಿ ನಿರ್ದೇಶಕ ಆರ್.ಎನ್.ವಿಶ್ವಾಸ್, ತಾಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ನಿರ್ದೇಶಕರಾದ ದೇವರಾಜು, ದಿಲೀಪ್ ಸೇರಿದಂತೆ ಇತರರು ಇದ್ದರು.