ಕೇಂದ್ರ ಪುರಸ್ಕೃತ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು. ಉದಾಸೀನ ಮಾಡಿದರೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಚ್ಚರಿಕೆ ನೀಡಿದ್ದಾರೆ.
ಮಡಿಕೇರಿ: ಕೇಂದ್ರ ಪುರಸ್ಕೃತ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು. ಉದಾಸೀನ ಮಾಡಿದರೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಚ್ಚರಿಕೆ ನೀಡಿದ್ದಾರೆ. ನಗರದ ಜಿ.ಪಂ.ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಆವಾಜ್, ಪ್ರಧಾನಮಂತ್ರಿ ಗ್ರಾಮ ಸಡಕ್, ವಿಬಿ-ಜಿ ರಾಂ ಜಿ, ಜಲಜೀವನ್ ಮಿಷನ್, ರಾಷ್ಟ್ರೀಯ ತೋಟಗಾರಿಕಾ ಮಿಷನ್, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳಿದ್ದು, ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಸಕಾಲದಲ್ಲಿ ಕಾರ್ಯಗತಗೊಳಿಸುವಂತೆ ಅಧಿಕಾರಿಗಳಿಗೆ ಸಂಸದರು ಸ್ಪಷ್ಟ ನಿರ್ದೇಶನ ನೀಡಿದರು.ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಮೂಲ ಸೌಲಭ್ಯ ಸೇರಿದಂತೆ ಹಲವು ಕಾರ್ಯಕ್ರಮ ಜಾರಿಗೊಳಿಸಿದೆ. ಅದನ್ನು ತಲುಪಿಸುವುದು ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಹೊಣೆಗಾರಿಕೆ ಅರಿತು ಪ್ರಗತಿ ಸಾಧಿಸಬೇಕು ಎಂದು ಸಂಸದರು ತಾಕೀತು ಮಾಡಿದರು.
ಅಮೃತ 2.0 ಯೋಜನೆಯಡಿ ನಗರದ ಎರಡು ಕಡೆ ಉದ್ಯಾನವನ ನಿರ್ಮಿಸಲಾಗಿದ್ದು, ಕೂಡಲೇ ಲೋಕಾರ್ಪಣೆ ಮಾಡಬೇಕು ಎಂದು ನಾಗೇಶ್ ಕುಂದಲ್ಪಾಡಿ ಅವರು ಒತ್ತಾಯಿಸಿದರು.ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಅವರು ಅಮೃತ 2.0 ಯೋಜನೆಯಡಿ ಶೇಕಡಾವಾರು ಪ್ರಗತಿ ಸಾಧಿಸಬೇಕು. ನಗರ, ಪಟ್ಟಣ ಪ್ರದೇಶಗಳಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಆಗಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಇದೇ ಅ. 23 ರಂದು ಪಾಲುದಾರರ ಸಭೆಯು (ಸ್ಟೇಕ್ ಹೋಲ್ಡರ್) ನಗರದಲ್ಲಿ ನಡೆಯಲಿದ್ದು, ಆಸಕ್ತರು ಆಗಮಿಸಬೇಕಾಗಿ ಕೋರಿದರು.ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಬಡವರ ಬೇಡಿಕೆಗೆ ತಕ್ಕಂತೆ ಮನೆ ನಿರ್ಮಿಸಿಕೊಡಬೇಕು. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪ್ರಗತಿ ಸಾಧಿಸುವಂತೆ ಸಂಸದರು ಸೂಚಿಸಿದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ಜಿಲ್ಲೆಯಲ್ಲಿ ಮಾನವ ಹಾಗೂ ವನ್ಯಪ್ರಾಣಿ ಸಂಘರ್ಷ ತಡೆಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸಮಸ್ಯೆ ಇರುವ ಕಾಡಾನೆಗಳನ್ನು ಸ್ಥಳಾಂತರಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೂ ಸಹ ಒತ್ತು ನೀಡಬೇಕು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು ಮಾತನಾಡಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವಲ್ಲಿ ‘ಯೋಜನಾ ವರದಿ’ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಎಲ್-ನಿನೊ ಪರಿಣಾಮದಿಂದ ಮಳೆಯಾಗದೆ 60 ವರ್ಷದ ನಂತರ ಬರ ಪರಿಸ್ಥಿತಿ ನಿರ್ಮಾಣವಾಗಿ, ಭತ್ತ ಬೆಳೆ ಒಣಗುತ್ತಿದೆ. ಆದ್ದರಿಂದ ಸೂಕ್ತ ಪರಿಹಾರ ನೀಡಬೇಕು. ಆ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಜಿಲ್ಲೆಯಲ್ಲಿ ಬರ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸಬೇಕು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರು ಸೂಚಿಸಿದರು. ನಾಗೇಶ್ ಕುಂದಲ್ಪಾಡಿ ಅವರು ಮಾತನಾಡಿ ಈ ಬಾರಿ ಬರ ಪರಿಸ್ಥಿತಿ ನಿರ್ಮಾಣ ಆಗಿರುವುದರಿಂದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸಬೇಕು ಎಂದು ಹೇಳಿದರು.ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೆಆರ್‌ಐಡಿಎಲ್ ಸಂಸ್ಥೆ ಹಾಗೂ ನಿರ್ಮಿತಿ ಕೇಂದ್ರಕ್ಕೆ ಹಲವು ಕಾಮಗಾರಿ ನೀಡಲಾಗಿದ್ದು, ತ್ವರಿತವಾಗಿ ಪ್ರಗತಿ ಸಾಧಿಸುವಂತೆ ಸಂಸದರು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಹೆಚ್ಚುವರಿ ಜಿಲ್ಲಾಧಿಕಾರಿ ನಿರಂಜನ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬಿ, ಜಲಜೀವನ್ ಮಿಷನ್ ಎಂಜಿನಿಯರ್ ಭಾಸ್ಕರ, ಸಮಗ್ರ ಗಿರಿಜನ ಕಲ್ಯಾಣಾಧಿಕಾರಿ ಭಾಗೀರಥಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ ರಾಮಣ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಇತರರು ತಮ್ಮ ಇಲಾಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು. ಸಮಿತಿ ಸದಸ್ಯರಾದ ಡಾ.ನವೀನ್ ಕುಮಾರ್ ಮಾತನಾಡಿದರು. ಆರ್.ಕೆ.ಚಂದ್ರು, ವಸತಿ ಯೋಜನೆ ಅನುಷ್ಠಾನ ಅಧಿಕಾರಿ ಇದ್ದರು.ಕೇಂದ್ರ ಸರ್ಕಾರದ ಕೃಷಿ ಮತ್ತು ತೋಟಗಾರಿಕಾ ಕಾರ್ಯಕ್ರಮದ ಭಿತ್ತಿ ಪತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.ವಂದೇ ಮಾತರಂ ಸಂಪೂರ್ಣ ಹಾಡಲು ಸೂಚನೆ:
ಕೇಂದ್ರ ಸರ್ಕಾರ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಲು ಆದೇಶಿಸಿದೆ. ಆ ನಿಟ್ಟಿನಲ್ಲಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಬೇಕು. ಕೇಂದ್ರ ಸರ್ಕಾರದ ಸಭೆ ಸಮಾರಂಭಗಳಲ್ಲಿ ಕಡ್ಡಾಯವಾಗಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಬೇಕು ಎಂದು ಇದೇ ಸಂದರ್ಭ ಸಂಸದರು ಸೂಚಿಸಿದರು. ಸಂಸದರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ವಂದೇ ಮಾತರಂ ಗೀತೆಗೆ ಕತ್ತರಿ ಹಾಕಲಾಗಿತ್ತು. ಕೊಡಗು ಜಿಲ್ಲಾ ಪಂಚಾಯತ್ ಭವನದಲ್ಲಿ ನಡೆದ ದಿಶಾ ಸಭೆಯಲ್ಲಿ ಕೊಡಗು ಜಿಲ್ಲಾಡಳಿತ ಮೊದಲ 2 ಚರಣ ಮಾತ್ರ ಹಾಡಿ ಕಾರ್ಯಕ್ರಮ ಆರಂಭಿಸಲಾಗಿತ್ತು.