ಕೃಷಿ ಜತೆ ವ್ಯಾಪಾರದಲ್ಲೂ ಸಾಧನೆ ಮಾಡಿ: ಬಸವರಾಜ ಬೊಮ್ಮಾಯಿ

| Published : Jan 22 2024, 02:18 AM IST / Updated: Jan 22 2024, 02:03 PM IST

ಸಾರಾಂಶ

ಒಕ್ಕಲಿಗ ಸಮುದಾಯ ಕೃಷಿಯಲ್ಲಿ ಬೆವರು ಸುರಿಸಿ ಸಾಧನೆ ಮಾಡುತ್ತಿದೆ. ಕೇವಲ ಕೃಷಿ ಮಾಡಿದರೆ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಕೃಷಿ ಜೊತೆಗೆ ವ್ಯಾಪಾರ, ಉದ್ಯೋಗದಲ್ಲೂ ಸಾಧನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಒಕ್ಕಲಿಗ ಸಮುದಾಯ ಕೃಷಿಯಲ್ಲಿ ಬೆವರು ಸುರಿಸಿ ಸಾಧನೆ ಮಾಡುತ್ತಿದೆ. ಕೇವಲ ಕೃಷಿ ಮಾಡಿದರೆ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಕೃಷಿ ಜೊತೆಗೆ ವ್ಯಾಪಾರ, ಉದ್ಯೋಗದಲ್ಲೂ ಸಾಧನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ನಗರದ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಉದ್ಯಮಿ ಒಕ್ಕಲಿಗ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಒಕ್ಕಲಿಗರು ಕೃಷಿಯ ಜೊತೆಗೆ ಇತರ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಹೊರ ಜಗತ್ತಿಗೆ ತೆರೆದುಕೊಳ್ಳುವ ಕೆಲಸ ಮಾಡಬೇಕು. 

ಒಕ್ಕಲಿಗರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಯೋಜನಾ ಬದ್ಧವಾಗಿ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.

ಕೃಷಿ ಸಹ ಒಂದು ಉದ್ಯಮವಾಗಿದೆ. ಕೃಷಿ ಇಲ್ಲದಿದ್ದರೆ ನಾವು ಬದುಕಲು ಆಗುವುದಿಲ್ಲ. ಕೃಷಿಯಲ್ಲಿ ಶೇ.1 ರಷ್ಟು ಬೆಳವಣಿಗೆಯಾದರೆ, ಉದ್ಯಮ ವಲಯದಲ್ಲಿ ಶೇ.4 ರಷ್ಟು, ಸೇವಾ ವಲಯದಲ್ಲಿ ಶೇ.10 ರಷ್ಟು ಬೆಳವಣಿಗೆಯಾಗುತ್ತದೆ. 

ಭೂಮಿ ಇದ್ದಷ್ಟೇ ಇದ್ದು ರೈತನ ಆದಾಯ ಹೆಚ್ಚಾಗುತ್ತಿಲ್ಲ. ಆದ್ದರಿಂದ ಒಕ್ಕಲಿಗರು ಕೃಷಿಯ ಜೊತೆ ಉದ್ಯಮ ಸ್ಥಾಪಿಸಲೂ ಮುಂದಾಗಬೇಕು ಎಂದು ಸಲಹೆ ನೀಡಿದರು.

ಭೂಮಿ ಮಾರಿ ಚುನಾವಣೆಗೆ ಸ್ಪರ್ಧೆ: ಭೂಮಿ ಮಾರಾಟ ಮಾಡಿ ಚುನಾವಣೆಗೆ ಸ್ಪರ್ಧಿಸುವವರ ಸಂಖ್ಯೆ ಒಕ್ಕಲಿಗರಲ್ಲಿ ಹೆಚ್ಚಾಗಿದೆ. ಬೆಂಗಳೂರಿನ ಸುತ್ತಮುತ್ತ ಭೂಮಿಗೆ ಬಹಳಷ್ಟು ಬೆಲೆ ಇದೆ. 

ಆದ್ದರಿಂದ ಭೂಮಿ ಮಾರಾಟ ಮಾಡಿ ಸಂತೃಪ್ತ ಜೀವನ ನಡೆಸಬೇಕು ಎಂದು ಚಿಂತಿಸುವವರೂ ಇದ್ದಾರೆ. ಆದರೆ ಭೂಮಿ ಮಾರಾಟ ಮಾಡುವ ಮುಂಚೆ ಸಾಧಕ-ಬಾಧಕಗಳ ಬಗ್ಗೆ ಚಿಂತಿಸಿ ಎಂದು ಮನವಿ ಮಾಡಿದರು.

ಸ್ಫಟಿಕಪುರಿ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಉಪಸ್ಥಿತರಿದ್ದರು.ಕೃಷಿ ಉದ್ಯಮವಾಗಬೇಕು: ಶಂಕರ್‌

ಕೃಷಿಕರಿಗೆ ಗೌರವ ದೊರೆಯಬೇಕು. ಕೃಷಿ ಉದ್ಯಮವಾಗಬೇಕು. ಒಕ್ಕಲಿಗರು ಹೊರ ರಾಜ್ಯದವರಿಗೆ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣಕ್ಕೆ ಭೂಮಿ ನೀಡದೆ ನೀವೇ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಬೇಕು ಎಂದು ಮಾಜಿ ಸಚಿವ ಬಿ.ಎಲ್‌.ಶಂಕರ್‌ ಆಶಿಸಿದರು.

ಸಮುದಾಯದ ಹಲವರು ರಾಜಕಾರಣದಲ್ಲಿದ್ದು, ತತ್ವ ಸಿದ್ಧಾಂತದ ಆಧಾರದ ಮೇಲೆ ಹಲವು ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇದರಲ್ಲಿ ತಪ್ಪೇನಿಲ್ಲ. ಆದರೆ ಸಮುದಾಯದವರ ವಿರುದ್ಧ ಆರೋಪ ಮಾಡುವಾಗ ವೈಯಕ್ತಿಕ ನಿಂದನೆ ಮಾಡಬಾರದು. ಸಮುದಾಯದವರು ಯಾವುದೇ ಪಕ್ಷದಲ್ಲಿರಲಿ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.