ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಯುವಜನತೆ ಸ್ಥಿರವಾದ ಮನಸ್ಸು ಹಾಗೂ ಆಸಕ್ತಿಯಿಂದ ಎಲ್ಲಾ ಕ್ಷೇತ್ರದಲ್ಲಿಯೂ ಪರಿಣಿತಿ ಸಾಧಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಸಾಧನೆ ಮಾಡುವ ಮೂಲಕ ಸಾಮಾಜಿಕ ಬೆಳವಣಿಗೆಗೆ ಅಡಿಪಾಯ ಹಾಕಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು ತಿಳಿಸಿದರು.ಬುಧವಾರ ಮಂಡ್ಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಡ್ಯ ಜಿಲ್ಲಾಡಳಿತದ ವತಿಯಿಂದ ನಡೆದ ಜಿಲ್ಲಾಮಟ್ಟದ ಯುವಜನೋತ್ಸವ ಉದ್ಘಾಟಿಸಿ, ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ನಮ್ಮ ರಾಷ್ಟ್ರದ ನಿಜವಾದ ಸತ್ವವನ್ನು ಜಗತ್ತಿಗೆ ಸಾರಿ ಭಾರತೀಯ ಸಂಸ್ಕೃತಿಯ ಹೆಗ್ಗುರುತನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿಹಿಡಿದ ಮಹಾನ್ ಚೇತನ. ಅವರ ಧ್ಯೇಯ, ಗುರಿ, ಉದ್ದೇಶಗಳನ್ನು ಅನುಸರಿಸಬೇಕು ಎಂದು ನುಡಿದರು.ವಿವಿಧ ಸ್ಪರ್ಧೆಗಳಲ್ಲಿ ಜಿಲ್ಲೆಯ ಯುವಜನರ ಭಾಗವಹಿಸುವಿಕೆಯೂ ಕಡಿಮೆಯಾಗುತ್ತಿದೆ. ಸಮಾಜದಲ್ಲಿ ಅಭಿವೃದ್ಧಿ ಕೆಲಸ ಮಾಡಲು ನಿರಾಸಕ್ತಿ ಇರುವುದು ಕಂಡುಬಂದಿದೆ. ಈ ಬಗ್ಗೆ ನನಗೆ ವಿಷಾದವಿದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತಂದ ಸಾಕಷ್ಟು ಯುವಜನರಿದ್ದು, ಅವರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು. ಜೊತೆಗೆ ಯುವ ಜನರು ಶ್ರಮದಾನ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ, ಚಿಂತನ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಯುವ ಮನಸ್ಸುಗಳಿಗೆ ಎಳೆಯ ವಯಸ್ಸಿನಲ್ಲಿಯೇ ಸಮಾಜದ ಅರಿವನ್ನು ಉಂಟುಮಾಡಬೇಕು. ಸಮಾಜದ ಗುರಿ, ನೋವು, ಆಶಯವನ್ನು ತಿಳಿಸಬೇಕು. ಯಾವುದೇ ಸಮುದಾಯವನ್ನು ಹಾಗೂ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸುವ ಸಾಮರ್ಥ್ಯ ವೃದ್ಧಿಯಾಗುವುದು ಯುವ ಜನೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮಾತ್ರ ಸಾಧ್ಯ. ಯುವ ಜನರಿಗೆ ಅನೇಕ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಒಳ್ಳೆಯ ವಿಚಾರಗಳನ್ನು ಬಿತ್ತುವ ಅವಶ್ಯಕತೆ ಇದೆ. ಕೇವಲ ನಾಲ್ಕು ಗೋಡೆಗಳ ಮಧ್ಯೆ ಔಪಚಾರಿಕ ಶಿಕ್ಷಣವನ್ನು ಪಡೆದುಕೊಂಡರೆ ಸಾಲದು ಎಂದು ಹೇಳಿದರು.ಪ್ರತಿಯೊಬ್ಬರೂ ತಮ್ಮ ಊರಿನ ಇತಿಹಾಸ, ಪೂರ್ವಿಕರು, ತಂದೆ- ತಾಯಿಯ ಕಷ್ಟ- ಸುಖ, ಮನೆಯ ಪರಿಸ್ಥಿತಿ, ಊರಿನ ಹಿರಿಯರ ಬಗ್ಗೆ ತಿಳಿದುಕೊಂಡು, ವರ್ತಮಾನದಲ್ಲಿ ಯೋಚನೆ ಮಾಡಿ ಭವಿಷ್ಯಕ್ಕೆ ಧ್ಯೇಯಗಳನ್ನು ರೂಪಿಸಲು ತಿಳಿಸಿದರು.
ಜೀವನದಲ್ಲಿ ಸ್ಪರ್ಧೆ ಒಡ್ದುವಂತಹವರು ಇರಬೇಕು. ಸ್ಪರ್ಧಿಗಳು ಇದ್ದಾಗ ಮಾತ್ರ ಭಾಗವಹಿಸಿ ಬೆಳೆಯಲು ಸಾಧ್ಯ. ಇಂದು ಯುವಜನೋತ್ಸವ ಕಾರ್ಯಕ್ರಮದಲ್ಲಿ ನಡೆಯುತ್ತಿರುವ ಸ್ಪರ್ಧೆಗಳಲ್ಲಿ ಎಲ್ಲರಿಗೂ ಯಶಸ್ಸು ಸಿಗಲಿ ಎಂದು ಹಾರೈಸಿದರು.ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಮಾತನಾಡಿ, ಹಿಂದಿನ ದಿನಗಳಲ್ಲಿ ಯುವಜನೋತ್ಸವ ಕಾರ್ಯಕ್ರಮವನ್ನು ಆಚರಿಸುವಾಗ ಯುವಕರು ಕೂಡ ಬಹಳ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿದ್ದರು. ಕಾರ್ಯಕ್ರಮದ ಒಂದು ವಾರದ ಮುಂಚೆಯೇ ಎಲ್ಲಾ ತಯಾರಿ ನಡೆಸಿ ಬಾಳೆ ಕಂಬ, ಮಾವಿನ ತೋರಣ ಕಟ್ಟಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಜೊತೆಗೆ ಊರಿನ ಎಲ್ಲಾ ಜನರು ಯುವಜನೋತ್ಸವ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ತಮ್ಮ ಮನೆಯಿಂದ ಚಾಪೆಗಳನ್ನು ತಂದು ಕಾತುರದಿಂದ ಕುಳಿತು ಕಾಯುತ್ತಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಯುವಜನತೆಯಲ್ಲಿ ಭಾಗವಹಿಸುವಿಕೆ ಕಡಿಮೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಈ ತಿಮ್ಮಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ನೆಹರು ಯುವ ಕೇಂದ್ರದ ಮುಖ್ಯ ಲೆಕ್ಕಾಧಿಕಾರಿ ರವಿಚಂದ್ರನ್, ಮಹಿಳಾ ಸರ್ಕಾರಿ ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಡಾ.ಎಚ್.ಎಸ್.ಶಿವರಾಜು, ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲೋಕೇಶ್ ಸೇರಿದಂತೆ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾಮಟ್ಟದ ಯುವ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.