ಆರೋಗ್ಯವಾಗಿದ್ದರೆ ಮಾತ್ರ ಸಾಧನೆ ಸಾಧ್ಯ: ಪ್ರಸೂತಿ, ಸ್ತ್ರೀ ರೋಗ ತಜ್ಞೆ ಡಾ.ಸಾವಿತ್ರಿ

| Published : Mar 31 2024, 02:06 AM IST

ಆರೋಗ್ಯವಾಗಿದ್ದರೆ ಮಾತ್ರ ಸಾಧನೆ ಸಾಧ್ಯ: ಪ್ರಸೂತಿ, ಸ್ತ್ರೀ ರೋಗ ತಜ್ಞೆ ಡಾ.ಸಾವಿತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಎ.ವಿ. ಕಾಂತಮ್ಮ ಕಾಲೇಜು ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಸಾವಿತ್ರಿ ಉದ್ಘಾಟಿಸಿದರು.

ವಿದ್ಯಾರ್ಥಿಗಳು, ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕನ್ನಡಪ್ರಭ ವಾರ್ತೆ ಹಾಸನ

ಆರೋಗ್ಯ ಇಲ್ಲದಿದ್ದರೆ ಯಾವ ಗುರಿ ಮುಟ್ಟಲೂ ಸಾಧ್ಯವಿಲ್ಲ. ಆದರೆ ಆರೋಗ್ಯವಾಗಿ ಇದ್ದವರು ಏನಾದರೂ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ಕೊಡಬಹುದು ಎಂದು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಸಾವಿತ್ರಿ ಕಿವಿಮಾತು ಹೇಳಿದರು.

ನಗರದ ಎ.ವಿ. ಕಾಂತಮ್ಮ ಕಾಲೇಜು ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಕ್ಯಾನ್ಸರ್‌ನಿಂದ ಹೆಣ್ಣು ಮಕ್ಕಳು ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದೆ ಬೇಜವಾಬ್ಧಾರಿಯಿಂದ ಇರುವುದು. ಸರಿಯಾದ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಮನುಷ್ಯನಿಗೆ ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ಹೆಚ್ಚು ಇದ್ದರೆ ಸಮಾಜದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎಂದು ಸಲಹೆ ನೀಡಿದರು.

ಗಂಡಸರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಮಾನಸಿಕ ಹಾಗೂ ದೈಹಿಕ ಅನಾರೋಗ್ಯ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಯಾವುದೇ ಹಿಂಜರಿಕೆ ಪಡದೆ ತಪಾಸಣೆ ಮಾಡಿಸಿಕೊಳ್ಳಬೇಕು. ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ, ಗರ್ಭಕೋಶದ ಸಮಸ್ಯೆ, ಸ್ತನ ಕ್ಯಾನ್ಸರ್, ನಿದ್ರಾಹೀನತೆ, ಹೆಚ್ಚು ರಕ್ತಸ್ರಾವ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಅಗತ್ಯವಾಗಿದೆ. ಆದುದರಿಂದ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ನುರಿತ ವೈದ್ಯರಿಂದ ಉಚಿತ ಸಮಾಲೋಚನೆ ಚರ್ಮರೋಗ ಸಂಬಂಧಪಟ್ಟಂತಹ ತಪಾಸಣೆ, ಸ್ತ್ರೀರೋಗ ಸಂಬಂಧಪಟ್ಟ ತಪಾಸಣೆ, ಗರ್ಭಕೋಶ ಮತ್ತು ಗರ್ಭ ಕೊರಳ ಕ್ಯಾನ್ಸರ್ ತಪಾಸಣೆ, ದಂತ ಸಂಬಂಧಪಟ್ಟ ತಪಾಸಣೆ, ಬಿಪಿ ಮತ್ತು ಶುಗರ್‌ನಂತಹ ಸಾಮಾನ್ಯ ಕಾಯಿಲೆಗಳ ತಪಾಸಣೆ, ಮೂಳೆ ಸಂಬಂಧಿತ ತಪಾಸಣೆ, ಕಣ್ಣಿಗೆ ಸಂಬಂಧಪಟ್ಟಂತಹ ತಪಾಸಣೆಗಳನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಎವಿಕೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಭಾರತ ಸೇವಾದಳದ ವಲಯ ಸಂಘಟಕಿ ವಿ.ಎಸ್. ರಾಣಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ವಿದ್ಯಾ ಪ್ರಾರ್ಥಿಸಿದರು. ಇದೇ ವೇಳೆ ಎವಿಕೆ ಕಾಲೇಜಿನ ಪ್ರಾಂಶುಪಾಲರಾದ ಆರ್.ಟಿ. ಪ್ರತಿಮಾ ದೇವಿ, ದಂತ ವೈದ್ಯರಾದ ಡಾ. ಪ್ರೀತಿ ಮೋಹನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಹಮ್ಮದ್ ಶಬ್ಬೀರ್, ಜಯೆಂದ್ರ ಕುಮಾರ್, ಸಮಾಜ ಸೇವಕ ಕಾರ್ಲೆ ತೇಜಸ್ವಿ, ಡಾ. ಚೈತ್ರಾ ತೇಜಸ್ವಿ, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಮನೋಜ್ ಕುಮಾರ್, ಅಲ್ಯೂಮಿನಿಯಂ ಕ್ಲಬ್‌ನ ಡಾ.ವಾನೀಜಾ, ಕೀಲು ತಜ್ಞ ಡಾ. ಉಮೇಶ್, ಮಂಜುಳ, ಡಾ.ನಿಖಿತಾ ಇತರರು ಉಪಸ್ಥಿತರಿದ್ದರು.

ಹಾಸನದ ಎವಿಕೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆಯನ್ನು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ಸಾವಿತ್ರಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಆರ್.ಟಿ. ಪ್ರತಿಮಾ ದೇವಿ, ದಂತ ವೈದ್ಯರಾದ ಡಾ. ಪ್ರೀತಿ ಮೋಹನ್, ಇತರರು ಹಾಜರಿದ್ದರು.