ಎಳವೆಯಲ್ಲೇ ಸಂಗೀತ ಕ್ಷೇತ್ರದಲ್ಲಿ ಗಟ್ಟಿ ಹೆಜ್ಜೆ ಇಡುತ್ತಿರುವ ಶ್ರೀ ರಾವ್ ಅವರ ಪ್ರತಿಭೆ, ಪರಿಶ್ರಮ ಮತ್ತು ಸಂಗೀತಾಸಕ್ತಿ ಶ್ಲಾಘನೀಯ.

ಕುಮಟಾ: ಸಾಹಿತ್ಯ- ಸಂಗೀತದ ಬೆಳವಣಿಗೆಗೆ ರೋಟರಿ ಸಂಸ್ಥೆಯ ಪ್ರವರ್ತಿತ ನಾದಶ್ರೀ ಕಲಾಕೇಂದ್ರ ನಿರಂತರ ಉತ್ತಮ ವೇದಿಕೆಯನ್ನು ಕಲ್ಪಿಸುತ್ತಾ ಬಂದಿದೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ರೋಟರಿ ಅಧ್ಯಕ್ಷ ಸಿ.ಎ. ವಿನಾಯಕ ಹೆಗಡೆ ಹೇಳಿದರು.

ರೋಟರಿ ಕ್ಲಬ್, ಸೀನಿಯರ್ ಚೇಂಬರ್ ಇಂಟರನ್ಯಾಷನಲ್, ಕುಮಟಾ ಲೆಜಿನ್ ಸಹಯೋಗದಲ್ಲಿ ನಾದಶ್ರೀ ಕಲಾಕೇಂದ್ರದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂಗೀತದ ಸೊಬಗಿನ ಸಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿದುಷಿ ಧಾರವಾಡದ ರಾಧಾ ದೇಸಾಯಿ, ಎಳವೆಯಲ್ಲೇ ಸಂಗೀತ ಕ್ಷೇತ್ರದಲ್ಲಿ ಗಟ್ಟಿ ಹೆಜ್ಜೆ ಇಡುತ್ತಿರುವ ಶ್ರೀ ರಾವ್ ಅವರ ಪ್ರತಿಭೆ, ಪರಿಶ್ರಮ ಮತ್ತು ಸಂಗೀತಾಸಕ್ತಿ ಶ್ಲಾಘನೀಯ. ಇಂತಹ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ದೊರೆತರೆ ಭವಿಷ್ಯದಲ್ಲಿ ಇನ್ನಷ್ಟು ಎತ್ತರದ ಸಾಧನೆ ಮಾಡಲು ಸಾಧ್ಯ ಎಂದರು.

ಎನ್.ಆರ್. ಗಜು ವಿರಚಿತ ಪ್ರೀತಿ ದಾರಕಟ್ಟಿ ಸಂಭ್ರಮಿಸು ಕವನ ಸಂಕಲನ, ಶೀರ್ಷಿಕೆ ಹಾಗೂ ಆಲ್ಬಂ ಗೀತೆಯನ್ನು ಸಾಹಿತಿ ರೋಹಿದಾಸ ನಾಯಕ ಬಿಡುಗಡೆಗೊಳಿಸಿ ಮಾತನಾಡಿ, ರೋಟರಿಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಕನ್ನಡ ಸಾಹಿತ್ಯಿಕ ಕಾರ್ಯಕ್ರಮಗಳ ಸಂಘಟನೆಯಲ್ಲಿ ಮುಂದಿರುವುದು ಮೆಚ್ಚತಕ್ಕ ಸಂಗತಿ. ಎನ್. ಆರ್. ಗಜು ಅವರ ಕೃತಿಯಲ್ಲಿ ನವ್ಯ ಮತ್ತು ನವ್ಯೋತ್ತರ ಸಾಹಿತ್ಯದ ಸೊಗಡಿದೆ ಎಂದರು.

ಕೃತಿಕಾರ ಎನ್.ಆರ್. ಗಜು ಮಾತನಾಡಿ, ಈ ಕೃತಿಗೆ ಮುನ್ನುಡಿ ಬರೆದು ಪುಸ್ತಕವನ್ನು ಪ್ರಕಟಿಸುವಂತೆ ಪ್ರೇರೇಪಿಸಿದ್ದ ಹಿರಿಯ ಸಾಹಿತಿ ಡಾ. ಬಿ.ಎ. ಸನದಿ ಇಂದು ನಮ್ಮೊಂದಿಗಿಲ್ಲ. ಅವರು ಅಗಲಿದ ಏಳು ವರ್ಷಗಳ ಬಳಿಕವಾದರೂ ಅವರ ಆಶಯವನ್ನು ಈಡೇರಿಸುವ ಅವಕಾಶ ದೊರೆತಿದೆ. ಇದಕ್ಕಾಗಿ ರೋಟರಿ ನೀಡಿದ ಸಹಕಾರ ಮತ್ತು ಪ್ರೋತ್ಸಾಹ ಸದಾ ಸ್ಮರಣೀಯ ಎಂದರು.

ಹಿರಿಯ ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ ನೀಡಿದ ವೀಡಿಯೋ ಸಂದೇಶ ಪ್ರದರ್ಶಿಸಲಾಯಿತು. ಅತಿಥಿಯಾಗಿ ಸಿವಿಎಸ್‌ಕೆ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುಮಾ ಪ್ರಭು, ಗಾಯಕಿ ಜಯಂತಿ ಭಟ್ ಮಾತನಾಡಿದರು. ರೋಟರಿ ಕಾರ್ಯದರ್ಶಿ ಗುರುರಾಜ ಶೆಟ್ಟಿ, ಸೀನಿಯರ್ ಚೇಂಬರ್ ಅಧ್ಯಕ್ಷ ವಸಂತರಾವ್, ಪ್ರಕಾಶಕ ಕಿರಣ ಮಂಜುನಾಥ, ಕವಯತ್ರಿ ಎಂ.ಕೆ. ಲಕ್ಷ್ಮಿ ಕೂಜಳ್ಳಿ, ಹೇಮಾ ರಾವ್, ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

ಕವನ ಸಂಕಲನವನ್ನು ಪ್ರಶಾಂತ ಮೂಡಲಮನೆ ಪರಿಚಯಿಸಿದರು. ಗಾಯಕಿ ಸಂಧ್ಯಾ ಹೆಗಡೆ ಪ್ರಾರ್ಥಿಸಿದರು. ರವೀಂದ್ರ ಭಟ್ ಸೂರಿ, ಗಣೇಶ ಜೋಶಿ ನಿರೂಪಿಸಿದರು.