ಮುಂದೆ ಗುರಿ ಹಿಂದೆ ಗುರು ಇದ್ದರೆ ಸಾಧನೆ ಸಾಧ್ಯ: ಶಾಸಕ ಶಿವರಾಮ ಹೆಬ್ಬಾರ

| Published : Mar 19 2025, 12:33 AM IST

ಮುಂದೆ ಗುರಿ ಹಿಂದೆ ಗುರು ಇದ್ದರೆ ಸಾಧನೆ ಸಾಧ್ಯ: ಶಾಸಕ ಶಿವರಾಮ ಹೆಬ್ಬಾರ
Share this Article
  • FB
  • TW
  • Linkdin
  • Email

ಸಾರಾಂಶ

ಗುರುವಿನ ಮಾರ್ಗದರ್ಶನವಿಲ್ಲದೇ ಏನನ್ನೂ ಸಾಧಿಸಲಾಗುವುದಿಲ್ಲ.

ಮುಂಡಗೋಡ: ಗುರುವಿನ ಮಾರ್ಗದರ್ಶನವಿಲ್ಲದೇ ಏನನ್ನೂ ಸಾಧಿಸಲಾಗುವುದಿಲ್ಲ. ಜೀವನದಲ್ಲಿ ಮುಂದೆ ಗುರಿ ಹಿಂದೆ ಗುರು ಇದ್ದರೆ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಭಾನುವಾರ ಇಲ್ಲಿಯ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಸದ್ಗುರು ಸೇವಾಲಾಲ್ ಅವರ ೨೮೬ ಜಯಂತಿ ಪ್ರಯುಕ್ತ ಬೃಹತ್ ಬಂಜಾರ ಸಮಾವೇಶ ಹಾಗೂ ಶೋಭಾಯಾತ್ರೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಂಜಾರ ಸಮಾಜಕ್ಕೆ ಸೇವಾಲಾಲ್ ರಂತಹ ಒಬ್ಬ ಶ್ರೇಷ್ಠ ಗುರು ಇರುವುದರಿಂದ ಲಂಬಾಣಿ ಸಮಾಜ ಮುಂದುವರೆದ ಸಮಾಜವಾಗಿ ಹೊರಹೊಮ್ಮುತ್ತಿದೆ. ಹಾಗಾಗಿ ಮನುಷ್ಯ ಜೀವನದ ಮೌಲ್ಯ ಹೆಚ್ಚಿಸಿಕೊಳ್ಳಬೇಕಾದರೆ ಜೀವನದಲ್ಲಿ ಗುರುವಿನ ದಾಸ ಹಾಗೂ ಗುಲಾಮನಾಗಬೇಕು. ನಾವು ಯಾವ ಉದ್ದೇಶದಿಂದ ಭೂಮಿಗೆ ಬಂದಿದ್ದೇವೆ ಎಂಬ ಅರಿವು ನಮಗಿರಬೇಕು. ಶಿಶುನಾಳ ಶರೀಫ ಹಾಗೂ ಗುರು ಗೋವಿಂದ ಭಟ್ಟರ ಆಶಯ ಮುಂಡಗೋಡ ತಾಲೂಕಿನಲ್ಲಿ ಮಾತ್ರ ಈಡೇರಲು ಸಾಧ್ಯ. ಇಲ್ಲಿ ಬಡತನವಿರಬಹುದು ಆದರೆ ಹೃದಯ ಶ್ರೀಮಂತಿಕೆಯ ಕೊರತೆ ಇಲ್ಲ. ಮುಂಡಗೋಡ ತಾಲೂಕು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದರು.

ಶಿರಸಿ ಸಹಾಯಕ ಆಯುಕ್ತೆ ಕಾವ್ಯರಾಣಿ ಮಾತನಾಡಿ, ಬಂಜಾರ ಸಮಾಜ ಇದೀಗ ಬೆಳೆಯುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಮಾತ್ರ ಮುಂದುವರೆಯಲು ಸಾಧ್ಯ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಸಮಾಜಮುಖಿಯಾಗಿ ಬೆಳೆಯಬಹುದು. ಸರ್ಕಾರ ಉಚಿತ ಶಿಕ್ಷಣ ಮತ್ತು ಮೀಸಲಾತಿ ನೀಡಿದೆ. ಅದರ ಸದುಪಯೋಗಪಡೆದುಕೊಂಡು ಮುಂದೆ ಬರಬೇಕು. ಬುಡಕಟ್ಟು ಜನಾಂಗದಲ್ಲಿ ಜನಿಸಿದ ತಾವು ಶಿಕ್ಷಣ ಪಡೆದಿದ್ದರಿಂದ ಸಹಾಯಕ ಆಯುಕ್ತೆ ಹುದ್ದೆಗೇರಲು ಕಾರಣವಾಯಿತು ಎಂದು ಹೇಳಿದ ಅವರು, ಯಾರು ಕೂಡ ದುಷ್ಚಟಗಳಿಗೆ ಬಲಿಯಾಗದೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ ಪಾಟೀಲ ಮಾತನಾಡಿ, ಸೇವಾಲಾಲರನ್ನು ಯಾವುದೇ ಒಂದು ಸಮಾಜಕ್ಕೆ ಸೀಮಿತಗೊಳಿಸದೆ ಎಲ್ಲ ವರ್ಗದವರು ಸೇರಿ ಜಯಂತಿಯನ್ನು ಆಚರಿಸಿ ಅವರ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಿದರೆ ಅವರಿಗೆ ನಿಜವಾದ ಗೌರವ ಅರ್ಪಿಸಿದಂತಾಗುತ್ತದೆ. ಲಂಬಾಣಿ ಸಮಾಜ ಸಾಕಷ್ಟು ಬದಲಾಗಿದ್ದು, ಇತರ ಸಮಾಜಗಳಿಗೆ ಆದರ್ಶವಾಗಿ ಬೆಳೆಯುತ್ತದೆ ಎಂದರು.

ಗುಂಡೂರ ನಿರಂಜನ ತಿಪ್ಪೇಶ್ವರ ಶ್ರೀ, ಸಿದ್ದಲಿಂಗ ಶ್ರೀ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಂಜಾರ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಶಾಸಕ ವಿ.ಎಸ್ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ತಾಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ, ಆಲ್ ಇಂಡಿಯಾ ಬಂಜಾರ ಸಂಘದ ಅಧ್ಯಕ್ಷ ಪಾಂಡುರಂಗ ಪಮ್ಮಾರ, ತಾಂಡಾ ನಿಗಮದ ಬಾಲು ಚವ್ಹಾಣ, ಮುಂಡಗೋಡ ಸರ್ಕಲ್ ಇನ್‌ಸ್ಪೆಕ್ಟರ್ ರಂಗನಾಥ ನೀಲಮ್ಮನವರ, ಪಿಎಸ್‌ಐ ಪರಶುರಾಮ ಮಿರ್ಜಗಿ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ, ಪಪಂ ಸದಸ್ಯ ಶೇಖರ ಲಮಾಣಿ, ಅನಿಲ ಚವ್ಹಾಣ, ಉತ್ತಮಸಿಂಗ ರಾಠೋಡ, ಶಾರದಾ ರಾಠೋಡ, ಅಣ್ಣಪ್ಪ ಲಮಾಣಿ, ವಾಸು ಲಮಾಣಿ, ಸುರೇಶ ಚಂದಾಪುರ, ರಾಜು ಚವ್ಹಾಣ, ವಿನೋದ ರಾಠೋಡ, ಡಾ. ಕೃಷ್ಣಮೂರ್ತಿ, ಶಂಕರ ಲಮಾಣಿ, ಪ್ರದೀಪ ಚವ್ಹಾಣ, ಸುನೀಲ ಲಮಾಣಿ ಮುಂತಾದವರು ಉಪಸ್ಥಿತರಿದ್ದರು. ಭಾಸ್ಕರ ನಾಯಕ ಸ್ವಾಗತಿಸಿದರು. ಈಶ್ವರ ರಾಠೋಡ, ಡಿ.ಟಿ ಲಮಾಣಿ ನಿರೂಪಿಸಿದರು.