ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ ಕಡಿಮೆ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಕಾಲೇಜು, ಈಗ ವಿದ್ಯಾರ್ಥಿಗಳು ಒಂದು ಸಾವಿರಕ್ಕಿಂತ ಹೆಚ್ಚಾಗಿರುವುದು ಕಾಲೇಜಿನ ಅಭಿವೃದ್ಧಿಯ ಪಥವನ್ನು ತೋರಿಸುತ್ತದೆ ಎಂದು ದಾವಿವಿ ನಿರ್ವಹಣಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎ. ಅಸೀಫುಲ್ಲಾ ಹೇಳಿದರು.ನಗರದ ಶ್ರೀ ಗುರು ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್ ಘಟಕ, ಯುವ ರೆಡ್ ಕ್ರಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವ-ಅರಿವು, ಆತ್ಮವಿಶ್ವಾಸ ಇದ್ದು, ನಿರಂತರ ಶ್ರಮವಿದ್ದರೆ ಸಾಧನೆಗಳು ನಿಮ್ಮ ಜೊತೆ ಇರುತ್ತವೆ ಎಂದರು. ನಾವು ಕಾಲೇಜಿನಲ್ಲಿ ಓದುತ್ತಿದ್ದಾಗ ಪಠ್ಯೇತರ ಚಟುವಟಿಕೆಗಳಿಗೂ ಅಷ್ಟೇ ಮಹತ್ವ ಕೊಟ್ಟು ಕಾಲೇಜು ನಮ್ಮನ್ನು ಬೆಳೆಸಿತು. ಹಾಗಾಗಿಯೇ ಇಂದು ನಾನು ಉನ್ನತ ಹುದ್ದೆಯಲ್ಲಿದ್ದೇನೆ. ಕರ್ನಾಟಕದಲ್ಲಿಎಲ್ಲಾ ಸಂಪನ್ಮೂಲ ಇವೆ. ಸರಿಯಾಗಿ ಬಳಸಿಕೊಳ್ಳುವ ಪ್ರತಿಭೆಗಳು ಬೇಕು. ಕಂಪನಿಗಳು ಉದ್ಯೋಗದಾತರಿಂದ ಏನನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಂಡು ಕಲಿಯಬೇಕು ಎಂದು ತಿಳಿಸಿದರು.
ಶಿಕ್ಷಣದಲ್ಲಿ ಆಸಕ್ತಿಯನ್ನು ಇಟ್ಟುಕೊಳ್ಳಿ. ಅದಕ್ಕೆ ತಕ್ಕಂತ ಫಲವೂ ನಿಮಗೆ ಸಿಗುತ್ತದೆ. ಪದವಿಗಳು ಹೆಚ್ಚು ಕೌಶಲ್ಯವನ್ನು ನಿರೀಕ್ಷಿಸುತ್ತವೆ. ನಿಮ್ಮ ಶಿಸ್ತುನಡವಳಿಕೆಗಳು ನಿಮ್ಮ ಸ್ಥಾನಮಾನವನ್ನು ಹೆಚ್ಚಿಸುತ್ತವೆ. ಹಾಗಿದ್ದಲ್ಲಿ ಮಾತ್ರ ನೀವು ಎಲ್ಲೆಡೆಯೂ ಗೌರವಕ್ಕೆ ಒಳಗಾಗುತ್ತೀರಿ. ಕ್ರಿಯಾತ್ಮಕ ಚಿಂತನೆಗಳು ನಿಮ್ಮಲ್ಲಿ ಇರಲಿ ಎಂದು ಕಿವಿ ಮಾತು ಹೇಳಿದರು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ, ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ.ಕೆ. ಷಣ್ಮುಖ, ಕಾಲೇಜಿನ ಪ್ರಾಚಾರ್ಯ ಎಂ.ಸಿ. ಗುರು, ಪಿಇಎಸ್ ಶಾಲೆ ಅಧ್ಯಕ್ಷ ಆರ್. ವೆಂಕಟರೆಡ್ಡಿ, ಅಥಣಿ ಸಂಯುಕ್ತ ಪಪೂ ಕಾಲೇಜಿನ ಪ್ರಾಚಾರ್ಯೆ ಡಯಾನ ದಿವ್ಯ, ಉಪನ್ಯಾಸಕು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆಯಾದ ಕಾಲೇಜಿನ ಡಿ.ಯು. ಪಲ್ಲವಿಯವರನ್ನು ಸನ್ಮಾನಿಸಲಾಯಿತು ಹಾಗೂ ವಿವಿಧ ತರಗತಿಗಳಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.