ಕುಷ್ಟಗಿ: ದೌರ್ಬಲ್ಯ ಇರುವುದು ದೇಹಕ್ಕೆ, ಮನಸ್ಸಿಗಲ್ಲ. ನಮ್ಮಲ್ಲಿನ ದೌರ್ಬಲ್ಯವನ್ನು ಮೆಟ್ಟಿ ನಿಂತಾಗ ಮಾತ್ರ ಸಾಧನೆ ಸಾಧ್ಯವಾಗಲಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ತಾಪಂ ಆವರಣದಲ್ಲಿ 2024-25ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ತಾಪಂ ಅನಿರ್ಬಂಧಿತ ಅನುದಾನದಡಿಯಲ್ಲಿ ಮಂಜೂರಾದ ಉಚಿತ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಮಾನ್ಯ ವ್ಯಕ್ತಿಗಳಿಂತ ವಿಶೇಷಚೇತನರು ಒಂದು ಹೆಜ್ಜೆ ಮುಂದೆ ಬರಬೇಕು ಎಂದು ಹೇಳಿದರು.

ಅಂಗವಿಕಲರಿಗೆ ಅನುಕಂಪ ತೋರುವುದಕ್ಕಿಂತ ಅವಕಾಶ ಒದಗಿಸಬೇಕಿದ್ದು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಅಂಗವಿಕಲ ಫಲಾನುಭವಿಗಳಿಗೆ ಉಚಿತ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಿಸಲಾಗುತ್ತಿದೆ ಎಂದರು.

ಅಂಗವಿಕಲರು ಸಮಾಜದ ಮುಖ್ಯವಾಹಿನಿಯಲ್ಲಿ ಮುನ್ನಡೆಯಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಅರ್ಹರಿಗೆ ತಲುಪುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ತಾಪಂ ಅಧಿಕಾರಿಗಳು, ಎಂಆರ್‌ಡಬ್ಲ್ಯೂ ಅಧಿಕಾರಿಗಳು, ಪಟ್ಟಣದ ಮುಖಂಡರು, ಗಣ್ಯರು, ಇದ್ದರು.


ಎಂಟು ಅರ್ಹ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು.