ಸಿಕ್ಕ ಕೆಲಸ ಶ್ರದ್ಧೆಯಿಂದ ಮಾಡಿದರೆ ಸಾಧನೆ ಸಾಧ್ಯ

| Published : Feb 19 2024, 01:32 AM IST

ಸಾರಾಂಶ

ಎಲ್ಲೆಡೆ ನಿರುದ್ಯೋಗ ಸಮಸ್ಯೆ ದಿನದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಅದೇ ಕೆಲಸ ಸಿಗಬೇಕು, ಇದೇ ಉದ್ಯೋಗ ಬೇಕು ಎಂದು ಯುವಕರು ಗಂಟು ಬೀಳದೇ ಸಿಕ್ಕ ಉದ್ಯೋಗವನ್ನು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿ. ಇದರಿಂದ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧ್ಯಕ್ಷ ಹಾಗೂ ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಎಲ್ಲೆಡೆ ನಿರುದ್ಯೋಗ ಸಮಸ್ಯೆ ದಿನದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಅದೇ ಕೆಲಸ ಸಿಗಬೇಕು, ಇದೇ ಉದ್ಯೋಗ ಬೇಕು ಎಂದು ಯುವಕರು ಗಂಟು ಬೀಳದೇ ಸಿಕ್ಕ ಉದ್ಯೋಗವನ್ನು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿ. ಇದರಿಂದ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧ್ಯಕ್ಷ ಹಾಗೂ ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು.

ಪಟ್ಟಣದ ವಿಬಿಸಿ ಹೈಸ್ಕೂಲ್‌ ಆವರಣದಲ್ಲಿ ದೇವಿಕಾ ಸುಬ್ಬರಾವ್ ಫೌಂಡೇಶನ್ ಮುಖ್ಯಸ್ಥೆ ಪಲ್ಲವಿ ನಾಡಗೌಡ ನೇತೃತ್ವದಲ್ಲಿ ನಡೆದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಕೌಶಲ ಇರುತ್ತದೆ. ಅದನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ನಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು. ಸದ್ಯ ಆದಾನಿ ಎನ್ನುವ ಉದ್ಯಮಿಯೊಬ್ಬರು ತಾವು ಮೊದಲು ₹300 ಸಂಬಳ ಪಡೆದು ಕೆಲಸ ಮಾಡುತ್ತಿದ್ದರು. ಆದರೆ ಇಂದು ದೇಶಕ್ಕೆ ಅಗತ್ಯವಿರುವ ವಸ್ತುಗಳನ್ನು ಅದಾನಿ ಕಂಪನಿಯಿಂದಲೇ ತಯಾರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಇದಕ್ಕೆ ಅವರ ಪರಿಶ್ರಮ ಮತ್ತು ಪ್ರಾಮಾಣಿಕತೆಯೇ ಕಾರಣ ಎಂದರು.

ಸಹಕಾರ ಇರುತ್ತದೆ:

ಸದ್ಯ ಪಲ್ಲವಿ ನಾಡಗೌಡ ಹಾಗೂ ರಾಹುಲ್‌ ಸೇರಿದಂತೆ ಅವರ ಬಳಗ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸುವ ಮೂಲಕ ಕ್ಷೇತ್ರದಲ್ಲಿನ ನಿರುದ್ಯೋಗ ಯುವಕ-ಯುವತಿಯರಿಗೆ ಉದ್ಯೋಗ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಸಾಮಾಜಿಕ ಕಳಕಳಿ ನಿಜಕ್ಕೂ ಶ್ಲಾಘನೀಯ. ಪ್ರತಿವರ್ಷ ಉದ್ಯೋಗ ಮೇಳಗಳನ್ನು ಆಯೋಜಿಸಿ ಉದ್ಯೋಗ ಕೊಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಅದಕ್ಕೆ ನನ್ನ ಸಲಹೆ, ಸಹಕಾರ ಸದಾ ಇರುತ್ತದೆ ಎಂದರು.

ಮುಂದೇಯೂ ಸಾಮಾಜಿಕ ಕೆಲಸ:

ಫೌಂಡೇಶನ್ ಮುಖ್ಯಸ್ಥೆ ಪಲ್ಲವಿ ನಾಡಗೌಡ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನಮ್ಮ ತಂದೆ ಶಾಸಕ ಸಿ ಎಸ್ ನಾಡಗೌಡರನ್ನು ಗೆಲ್ಲಿಸಿದರೇ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ ಎಂದು ಭರವಸೆ ಕೊಟ್ಟಿದ್ದೆ. ಸದ್ಯ ತಂದೆಯವರನ್ನು ಅಭೂತಪೂರ್ವವಾಗಿ ಗೆಲುವು ಸಾಧಿಸುವಂತೆ ಆಶೀರ್ವದಿಸಿದ್ದೀರಿ. ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ನನ್ನ ಕರ್ತವ್ಯ. ಈ ಹಿನ್ನಲೆಯಲ್ಲಿ ಪ್ರಥಮ ಬಾರಿಗೆ ನಮ್ಮ ಸಂಸ್ಥೆಯಿಂದ ಉದ್ಯೋಗ ಮೇಳೆ ಆಯೋಜಿಸಿ, ಉದ್ಯೋಗ ಒದಗಿಸುವ ಜವಾಬ್ದಾರಿಯಾಗಿರುವ ಹೊಸ ಪ್ರಯತ್ನಕ್ಕೆ ಕೈ ಹಾಕಿರುವೆ. ನಾನು ನುಡಿದಂತೆ ನಡೆದಿದ್ದೇನೆ. ಇದು ಇಲ್ಲಿಗೆ ಮುಗಿಯುವುದಿಲ್ಲ. ತಂದೆಯವರ ಆಶೀರ್ವಾದ ಹಾಗೂ ಸಲಹೆ, ಸೂಚನೆಗಳು ಇರುವವರೆಗೂ ಮುಂದಿನ ದಿನಗಳಲ್ಲೂ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಎಂ ಬಿ ನಾವದಗಿ, ಶಿವಶಂಕರಗೌಡ ಹಿರೇಗೌಡರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ ಕೆ ಬಿರಾದಾರ, ನ್ಯಾಯವಾದಿ ಎಸ್ ಎಸ್ ಮಾಲಗತ್ತಿ, ಅಸ್ಕಿ ಫೌಂಡೇಷನ್ ಮುಖ್ಯಸ್ಥ ಸಿ ಬಿ ಅಸ್ಕಿ, ಸಂಗಮೇಶ ಬಿರಾದಾರ(ಜಿಟಿಸಿ) ಸಾಧನಾ ಮಹಿಳಾ ಒಕ್ಕೂಟದ ಗಿರಿಜಾ ಕಡಿ, ತಾಲೂಕಿ ಕಾಂಗ್ರೆಸ್ ಅಧ್ಯಕ್ಷೆ ಶೋಭಾ ಶಳ್ಳಗಿ, ಅಕ್ಷತಾ ಚಲವಾದಿ ಸೇರಿದಂತೆ ಹಲವರು ಇದ್ದರು.

1033 ಉದ್ಯೋಗಾಕಾಂಕ್ಷಿಗಳು ಭಾಗಿಉದ್ಯೋಗ ಮೇಳದಲ್ಲಿ ಸುಮಾರು 25ಕ್ಕೂ ಹೆಚ್ಚಿನ ಕಂಪನಿ ಹಾಗೂ ಸಂಸ್ಥೆಗಳು ಭಾಗವಹಿಸಿದ್ದವು. ಅಲ್ಲದೇ ಸುಮಾರು 1033 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಇದರಲ್ಲಿ 70 ಜನರಿಗೆ ನೇರ ನೇಮಕಾತಿಯಾಗಿ ಸ್ಥಳದಲ್ಲೇ ನೇಮಕಾತಿ ಪತ್ರ ವಿತರಿಸಲಾಯಿತು. ಅಲ್ಲದೇ 200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳನ್ನು ವಿವಿಧ ಉದ್ಯೋಗಗಳಿಗೆ ಆಯ್ಕೆ ಮಾಡಲಾಗಿದ್ದು, ಹಂತ ಹಂತವಾಗಿ ನೇಮಕಾತಿ ಪತ್ರವನ್ನು ವಿತರಿಸಲು ಕಂಪನಿಗಳು ತಯಾರಾಗಿವೆ.