ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಮ್ಮ ಪರಿಮಿತಿಗಳನ್ನು ಮೀರುವ ಪ್ರಯತ್ನ ಮಾಡಿದಾಗ ಮಾತ್ರ ನಾವು ಏನನ್ನಾದರೂ ಸಾಧನೆ ಮಾಡಲು ಸಾಧ್ಯ. ನಾವೇ ಚೌಕಟ್ಟನ್ನು ವಿಧಿಸಿಕೊಂಡು ಮಿತಿಯ ಬಂಧನದೊಳಗೆ ಸಿಲುಕಿದರೆ ಸಾಧನೆ ಮಾಡಲಾಗುವುದಿಲ್ಲ ಎಂದು ನಟ, ರಂಗಕರ್ಮಿ ಶ್ರೀನಿವಾಸ ಪ್ರಭು ಅಭಿಪ್ರಾಯಪಟ್ಟರು.ನಗರದ ಗಾಂಧಿ ಭವನದಲ್ಲಿ ಚಿರಂತ ಪ್ರಕಾಶನದ ವತಿಯಿಂದ ಕೆ.ಪ್ರಭಾಕರ್ ಬರೆದಿರುವ ಜಡ್ಜ್‌ಮೆಂಟ್ ಹಾಗೂ ಡಾ.ಸುಮಾರಾಣಿ ಶಂಭುರವರ ದೇವರ ಹುಡುಕಾಟದಲ್ಲಿ ಕೃತಿಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ಮಿತಿಗಳು ಅರ್ಥವಾದ ತಕ್ಷಣವೇ ನಮ್ಮ ಮಿತಿಗಳನ್ನು ನಾವೇ ಅರ್ಥೈಸಿಕೊಳ್ಳಲು ಸಾಧ್ಯ. ಕಣ್ಣಲ್ಲಿ ನೀರು ಬರುವುದು ಸಹಜ. ಆ ಕಣ್ಣಿನಿಂದ ಬರುವ ನೀರು ಕಣ್ಣಿನ ಕಾಡಿಗೆಯನ್ನು ಅಳಿಸಬೇಕೇ ವಿನಃ ಕಣ್ಣೊಳಗೆ ಹುದುಗಿರುವ ಕನಸುಗಳನ್ನು ಅಳಿಸಬಾರದು. ನಮ್ಮ ಕನಸುಗಳನ್ನು ಕಾಪಾಡಿಕೊಳ್ಳಬೇಕು. ಕನಸುಗಳನ್ನು ಕಳೆದುಕೊಂಡರೆ ಭವಿಷ್ಯವೂ ಇಲ್ಲ, ಬೆಳವಣಿಗೆಯೂ ಇಲ್ಲ ಎಂದು ಅರ್ಥವತ್ತಾಗಿ ನುಡಿದರು.ಕನಸುಗಳಿಂದ ನಮ್ಮ ವ್ಯಕ್ತಿತ್ವಕ್ಕ ಮೆರುಗು ಬರುತ್ತದೆ. ಕನಸುಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ಹೊರಟಾಗ ನಾವು ಆಯ್ದುಕೊಳ್ಳುವ ಮಾರ್ಗ ನಮ್ಮ ವ್ಯಕ್ತಿತ್ವಕ್ಕ ಮೆರುಗು ಮತ್ತು ಹೊಳಪನ್ನು ನೀಡುತ್ತದೆ. ಅದಕ್ಕಾಗಿ ಎಲ್ಲರೂ ನಮ್ಮ ಪರಿಮಿತಿಗಳನ್ನು ದಾಟುವ ಪ್ರಯತ್ನ ಮಾಡುವ ಮೂಲಕ ಹೊಸದೇನನ್ನಾದರೂ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಪತಿಯು ನಿನ್ನ ಪರಿಮಿತಿಯನ್ನು ದಾಟದಂತೆ ಎಚ್ಚರ ವಹಿಸುವಂತೆ ಕವಿಯತ್ರಿಯಾದ ಪತ್ನಿಗೆ ಹೇಳುವಾಗ, ಆಕೆಯೂ ಕೂಡ ನಾನು ನನ್ನ ಪರಿಮಿತಿಯಲ್ಲಿರಬೇಕೆಂದುಕೊಳ್ಳುತ್ತೇನೆ. ಆದರೆ, ನನಗೂ ಕನಸುಗಳಿವೆ. ಅವುಗಳ ಸಾಕಾರಕ್ಕೆ ಹಪಹಪಿಸಿದ್ದೇನೆ. ಆ ಸಮಯದಲ್ಲಿ ಪರಿಮಿತಿಯನ್ನು ಬಿಟ್ಟು ಹಾರಾಡಿದ್ದೇನೆ. ಆಗ ನನ್ನ ಆಪ್ತೇಷ್ಟರು ಸಂತೋಷವನ್ನೂ ನೀಡಿದ್ದಾರೆ. ದುಃಖವನ್ನೂ ಕರುಣಿಸಿದ್ದಾರೆ. ಆಗ ನನ್ನ ಪತಿಯ ಹೆಗಲು ನನಗೆ ಆಸರೆಯಾಗಿದೆ ಎಂಬ ಪತಿಯಾಗಿ ಪತ್ನಿಗೆ ಹೇಳಬೇಕಾದ ಜವಾಬ್ದಾರಿ ಒಬ್ಬ ಕವಿಯಾಗಿ ಪತ್ನಿ ವ್ಯಕ್ತಪಡಿಸಿರುವ ಭಾವನೆಗಳು ಬಹಳ ಸೊಗಸಾಗಿ ಮೂಡಿಬಂದಿದೆ ಎಂದರು.ಜಡ್ಜ್‌ಮೆಂಟ್ ಕೃತಿ ಕುರಿತು ಮಾತನಾಡಿದ ರಾಜ್ಯ ಉಚ್ಛ ನ್ಯಾಯಾಲಯದ ವಕೀಲ ಲೋಹಿತ್ ಹಂಪಾಪುರ, ನ್ಯಾಯಾಲಯಗಳಲ್ಲಿ ಪ್ರಕರಣಗಳು ವಿಳಂಬವಾಗುವ ಬಗ್ಗೆ ಹಲವರಲ್ಲಿ ಅಪಸ್ವರವಿದೆ. ಯಾರೂ ಉದ್ದೇಶಪೂರ್ವಕವಾಗಿ ಪ್ರಕರಣಗಳ ವಿಚಾರಣೆಯನ್ನು ವಿಳಂಬ ಮಾಡುವುದಿಲ್ಲ. ಕಾನೂನು ಪ್ರಕ್ರಿಯೆ ಇರುವುದೇ ಹಾಗೇ. ಆರೋಪಿ ಸ್ಥಾನದಲ್ಲಿರುವವರು ಸತ್ಯವಂತರೋ, ಸುಳ್ಳುಗಾರರೋ ಎಂಬುದನ್ನು ವಿವೇಚನೆಗೊಳಪಡಿಸುವುದಕ್ಕೆ ಕಾಲಾವಕಾಶ ಬೇಕಾಗುತ್ತದೆ. ವಿಳಂಬವಾದರೂ ಸತ್ಯಕ್ಕೇ ಜಯವಿರುತ್ತದೆ ಎಂದರು.
ವಕೀಲ ವೃತ್ತಿ ಎನ್ನುವುದು ಸವಾಲಿನ ಕ್ಷೇತ್ರ. ಇತ್ತೀಚಿನ ದಿನಗಳಲ್ಲಿ ವಕೀಲ ವೃತ್ತಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ನ್ಯಾಯಾಲಯದಿಂದ ಹೊರಬೀಳುತ್ತಿರುವ ತೀರ್ಪುಗಳೂ ಸತ್ಯವನ್ನು ಎತ್ತಿ ಹಿಡಿಯುತ್ತಿವೆ. ನ್ಯಾಯಾಲಯದ ಬಗ್ಗೆ ನಂಬಿಕೆ ಇಡಬೇಕು ಎಂದು ವಕೀಲರು ತಿಳಿಸಿದರು.ದೇವರ ಹುಡುಕಾಟದಲ್ಲಿ ಕೃತಿಯ ಕುರಿತು ಮಾತನಾಡಿದ ಪಾಂಡವಪುರ ವಿಜಯ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಕೆ.ಸೋಮಶೇಖರ್, ಹೊಸ ಹೊಸ ಭಾವನೆಗಳನ್ನು ಸತತವಾಗಿ ಕಾಣುವ ಮತ್ತು ಕಟ್ಟುವ ಪ್ರತಿಭೆ ಕವಿಯಲ್ಲಿರುತ್ತದೆ. ಕವಿತೆಗೆ ಜೀವ ತುಂಬಿ ವರ್ಣಿಸಬಲ್ಲ ನೈಪುಣ್ಯತೆ ಕವಿಯಲ್ಲಿರುತ್ತದೆ. ಎಲ್ಲರೂ ಕವಿತೆ, ಕಾವ್ಯ, ಪ್ರಬಂಧವನ್ನು ಬರೆಯಲಾಗುವುದಿಲ್ಲ. ಬರವಣಿಗೆಯಲ್ಲಿ ಭಾವನೆಗಳನ್ನು ಮೆರವಣಿಗೆ ಮಾಡುವ ಕೌಶಲ್ಯವನ್ನು ಕವಿಯಾದವರು ಸಂಪಾದಿಸಬೇಕು ಎಂದರು.
ಸುಮಾರಾಣಿ ಬರೆದಿರುವ ೩೧ ಲೇಖನಗಳು ಸುಂದರವಾಗಿ ಮೂಡಿಬಂದಿವೆ. ಕಾವ್ಯ ಮತ್ತು ಪ್ರೀತಿ ಬಿಸಿಯಾಗಿರುವಾಗಲೇ ರುಚಿ ಹೆಚ್ಚಾಗಿರುತ್ತದೆ. ಅದನ್ನು ಬಿಸಿಯಿರುವಾಗಲೇ ಸವಿದರೆ ಚೆನ್ನ. ಕೆದರಿದ ಕೂದಲನ್ನು ಆಗಾಗ ಬಾಚುವುದರೊಂದಿಗೆ ಸರಿಪಡಿಸಿಕೊಳ್ಳಬೇಕು. ಹಾಗೆಯೇ ಮುನಿಸಿಕೊಂಡ ಹೆಂಡತಿಯನ್ನು ಆಗಾಗ ಪ್ರೀತಿಯ ಬಾಹುಗಳಿಂದ ಬಾಚಿಕೊಳ್ಳುತ್ತಿರಬೇಕು. ಮುಖಕ್ಕೆ ಬಣ್ಣ, ತಲೆಗೆ ಬಣ್ಣ, ಮನಸ್ಸಿಗೆ ಬಣ್ಣ ಹಚ್ಚಿ ಮುಖವಾಡ ಹಾಕುವ ಜನರಿದ್ದಾರೆಂಬ ಅನೇಕ ಸಂಗತಿಗಳನ್ನು ತಮ್ಮ ಕೃತಿಯಲ್ಲಿ ಎಚ್ಚರಿಸುವ ಮೂಲಕ ಸುಂದರವಾದ ಕೃತಿಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ವಿಶ್ಲೇಷಿಸಿದರು.ಅಧ್ಯಕ್ಷತಯನ್ನು ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ವಹಿಸಿದ್ದರು. ಲೇಖಕಿ ರಂಜನಿ ಪ್ರಭು, ಶಮಂತಕ ಪ್ರಭಾಕರ್, ಲೇಖಕರಾದ ಕೆ.ಪ್ರಭಾಕರ್, ಕೆ.ಸುಮಾರಾಣಿ, ನಮ್ಮ ಸ್ವರ್ಣ ಟೀವಿ ಮುಖ್ಯಸ್ಥ ಕಬ್ಬನಹಳ್ಳಿ ಶಂಭು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))