ಪದವಿ ಪೂರ್ವ ಕಾಲೇಜಿನ ಅವಧಿಯು ನಮ್ಮ ಜೀವಮಾನದ ಸುವರ್ಣ ಯುಗವೆಂದೇ ಕರೆಯಬಹುದು. ನಮ್ಮ ಬದುಕಿನ ಗುರಿ, ಉದ್ದೇಶಗಳನ್ನು ರೂಪಿಸಲು ಇದೊಂದು ವೇದಿಕೆ ಇದ್ದಂತೆ.
ಹಳಿಯಾಳ ಕೆಎಲ್‌ಎಸ್ ಪಪೂ ಕಾಲೇಜು ವಾರ್ಷಿಕ ಸ್ನೇಹ ಸಮ್ಮೇಳನ
ಕನ್ನಡಪ್ರಭ ವಾರ್ತೆ ಹಳಿಯಾಳಸಾಧನೆ, ಕಠಿಣ ಪರಿಶ್ರಮ ಹಾಗೂ ಛಲದಿಂದ ಮಾತ್ರ ಸಾಧನೆ ಸಾಧ್ಯ. ಅದಕ್ಕೆ ನಾನೇ ಜೀವಂತ ಸಾಕ್ಷಿಯಾಗಿದ್ದೇನೆ ಎಂದು ಕಾಲೇಜಿನ ಹಳೆಯ ವಿದ್ಯಾರ್ಥಿನಿ, ಎಲ್.ಎಲ್.ಎಂ. ಪದವಿಯಲ್ಲಿ ಚಿನ್ನದ ಪದಕ ವಿಜೇತೆ, ವಕೀಲೆ ಅನಿಕಾ ಎಂ. ಕಾಗದ ಹೇಳಿದರು.
ಪಟ್ಟಣದ ಕೆ.ಎಲ್.ಎಸ್. ಸಂಸ್ಥೆಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ 2025-26ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಸಾಧನಾ 2025ರಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಪದವಿ ಪೂರ್ವ ಕಾಲೇಜಿನ ಅವಧಿಯು ನಮ್ಮ ಜೀವಮಾನದ ಸುವರ್ಣ ಯುಗವೆಂದೇ ಕರೆಯಬಹುದು. ನಮ್ಮ ಬದುಕಿನ ಗುರಿ, ಉದ್ದೇಶಗಳನ್ನು ರೂಪಿಸಲು ಇದೊಂದು ವೇದಿಕೆ ಇದ್ದಂತೆ. ಹಿಂದಿನ ಹತ್ತು ವರ್ಷಗಳ ಶೈಕ್ಷಣಿಕ ಕಾಲಾವಧಿಯನ್ನು ನಾವು ಹೇಗೆ ಕ್ರಮಿಸಿದೆವು ಎಂಬ ಅವಲೋಕದೊಂದಿಗೆ, ಮುಂದಿನ ಕಾಲವಧಿಯನ್ನು ಹೇಗೆ ಕ್ರಮಿಸಬೇಕೆಂದು ಯೋಜಿಸಲು ನಮಗೆ ದೊರೆತಿರುವ ನಿಲ್ದಾಣವೆಂದೇ ಭಾವಿಸಬೇಕು. ಈ ಅವಧಿಯಲ್ಲಿ ನಿಮ್ಮ ಗುರುಗಳು ಹಾಗೂ ಪಾಲಕರು ಹೇಳುವ ಹಿತನುಡಿಗಳನ್ನು, ಮಾರ್ಗದರ್ಶನವನ್ನು ಪೂರ್ಣ ನಂಬಿಕೆಯಿಂದ ಪಾಲಿಸಿ, ಅದನ್ನು ಸಾಧಿಸಲು ಕಠಿಣ, ನಿರಂತರ ಶ್ರಮ ಹಾಕಿ ಎಂದರು.ಸಾಧನೆಯೇ ಗುರಿಯಾಗಲಿ:
ಹವಗಿಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಸಂಗೀತಾ ಕಟ್ಟಿಮನಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಪದವಿಪೂರ್ವ ಹಂತವು ಅತ್ಯಂತ ಮಹತ್ವದ್ದು. ಸಾಧನೆ ವಿದ್ಯಾರ್ಥಿಗಳ ಜೀವನದ ಪರಮ ಗುರಿಯಾಗಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ ಪ್ರಭು ಮಾತನಾಡಿ, ವಿದ್ಯಾರ್ಥಿ ಜೀವನ ಶೈಕ್ಷಣಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಹೀಗೆ ಈ ತ್ರಿಕೋನ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಬೇಕು ಎಂದರು.
ಶೈಕ್ಷಣಿಕ ಸಂಯೋಜಕಿ ಸುಜಾತಾ ಹಂಡಿ ವಾರ್ಷಿಕ ವರದಿ ಮಂಡಿಸಿದರು.ಸನ್ಮಾನ:
ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಬಾಜನರಾದ ತನಿಷ್ಕಾ ದಡ್ಡಿ ಹಾಗೂ ಶ್ರೀವಾಣಿ ತರಕೋಡ ಅವರನ್ನು ಹಾಗೂ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಮತ್ತು ಕಾಲೇಜಿನ ಹಳೆಯ ವಿದ್ಯಾರ್ಥಿನಿ, ಎಲ್.ಎಲ್.ಎಂ. ಪದವಿಯಲ್ಲಿ ಚಿನ್ನದ ಪದಕ ಪಡೆದ ಅನಿಕಾ ಎಂ. ಕಾಗದ ಅವರನ್ನು ಗೌರವಿಸಲಾಯಿತು.ಸಾಂಸ್ಕೃತಿಕ ವಿಭಾಗದ ಸಂಯೋಜಕಿ ಸಪ್ನಾ ಸಾಳುಂಕೆ, ಉಪನ್ಯಾಸಕರಾದ ಶಾಂತಾರಾಮ ಚಿಬುಲಕರ, ನಿಫಾ ಮಸ್ಕರೆನ್ಸ್ , ಉದಯ ರೇವಣಕರ, ಪ್ರೀತಿ ತೇಲಿ, ಮಂಜನಾಥ ಭೋವಿ, ಸಂಗಮೇಶ ಎನ್. ಶಣ್ಮುಖ್ ದಂಡಿನ್, ಹೊಳೆವ್ವ ಟಿ., ಚೈತ್ರಾ ಆಲೂರ, ರೋಹಿಣಿ ಮಡಿವಾಳರ ರಾಜೇಶ ಹೆಗಡೆ, ಸರ್ವದಾ ಕೆಸೇಕರ, ನಿರಂಜನ ಕೆ., ಅಲ್ಬರ್ಟಿನ್ ಮೆಂಡಿಸ್, ಅರ್ಚನಾ ರಗಟೆ, ಪೂಜಾ ಪೆಡ್ನೇಕರ, ಸಿಬ್ಬಂದಿಗಳಾದ ಜ್ಯೋತಿ ಲಕ್ಷ್ಮಿ, ಸಂಜಯ ಕುಲಕರ್ಣಿ, ಪರಶುರಾಮ ಬಾಶೆಟ್ಟಿ, ಯಲ್ಲಪ್ಪಾ ಮಾದರ ಇದ್ದರು.
ಉಪನ್ಯಾಸಕಿ ವಂದನಾ ಗೌಡಾ, ಕೆ.ಆರ್. ವೈಷ್ಣವಿ, ವೈಷ್ಣವಿ ಕಾಂಬ್ರೇಕರ ಕಾರ್ಯಕ್ರಮ ನಿರೂಪಿಸಿದರು.