ಶನಿವಾರ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ರಾಜಾಂಗಣದಲ್ಲಿ ವಿಶ್ವಶಾಂತಿ ಸಮ್ಮೇಳನ ನಡೆಯಿತು.
ಉಡುಪಿ ಕೃಷ್ಣ ಮಠ ರಾಜಾಂಗಣದಲ್ಲಿ ವಿಶ್ವಶಾಂತಿ ಸಮ್ಮೇಳನ ಉದ್ಘಾಟನೆ
ಉಡುಪಿ: ಶಾಂತಿ ಸ್ಥಾಪನೆಗೆ ಪರಸ್ಪರ ಮಾತುಕತೆಯೊಂದೇ ದಾರಿ, ಸಂವಹನ ವಿಫಲವಾದಾಗ ಸಂಘರ್ಷ ಹುಟ್ಟುತ್ತದೆ. ಬಲ ಪ್ರಯೋಗದಿಂದ ಶಾಂತಿ ಸ್ಥಾಪನೆ ಸಾಧ್ಯವಿಲ್ಲ, ಸಂವಹನ, ಸಹಾನುಭೂತಿ ಮತ್ತು ಸಹಕಾರದಿಂದ ಮಾತ್ರ ಶಾಂತಿ ಸ್ಥಾಪನೆ ಸಾಧ್ಯ ಎಂದು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ, ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟೀಸ್ ಅಬ್ದುಲ್ ಎಸ್. ನಜೀರ್ ಹೇಳಿದ್ದಾರೆ.ಶನಿವಾರ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ರಾಜಾಂಗಣದಲ್ಲಿ ನಡೆದ ವಿಶ್ವಶಾಂತಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಸಂಘರ್ಷ ಇಲ್ಲದಿದ್ದಲ್ಲಿ ಮಾತ್ರ ಶಾಂತಿ ಸ್ಥಾಪನೆಯಾಗುವುದಿಲ್ಲ, ಶಾಂತಿ ಪರಸ್ಪರ ಗೌರವ, ಜವಾಬ್ದಾರಿ ಮತ್ತು ಸಹಕಾರಗಳಿದ್ದಲ್ಲಿ ಮಾತ್ರ ಸ್ಥಾಪನೆಯಾಗುತ್ತದೆ, ಅದು ಮನೆಯೇ ಇರಲಿ, ಸಮಾಜವೇ ಇರಲಿ ಅಥವಾ ದೇಶಗಳ ನಡುವೆಯೇ ಇರಲಿ, ಶಾಂತಿ ಪರಸ್ಪರ ಮಾತುಕತೆಯಿಂದಷ್ಟೇ ಸಾಧ್ಯವಾಗುತ್ತದೆ ಎಂದವರು ಹೇಳಿದರು.ದೇಶದ ಆಧ್ಯಾತ್ಮಿಕ ಸಂಪತ್ತು, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮಾನವ ಘನತೆಯ ಬಗೆಗಿನ ಬದ್ದತೆಗಳು, ಭಾರತಕ್ಕೆ ದೇಶದೊಳಗೆ ಮತ್ತು ಜಗತ್ತಿಗೆ ಶಾಂತಿಯ ಸಂದೇಶ ನೀಡುವ ವಿಶೇಷ ಶಕ್ತಿ ನೀಡಿದೆ ಎಂದು ಅವರು ನುಡಿದರು.ಚಿಕ್ಕಬಳ್ಳಾಪುರದ ಶ್ರೀ ಸತ್ಯಸಾಯಿ ಯುನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸ್‌ಲೆನ್ಸ್ ನ ಸ್ಥಾಪಕ ಕುಲಸಚಿವ, ಒನ್ ವರ್ಲ್ಡ್ ಒನ್ ಫ್ಯಾಮಿಲಿ ಸಂಸ್ಥೆಯ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, ಭಗವದ್ಗೀತೆಯ ಶಾಂತಿಯ ಸಂದೇಶ ನೀಡುತ್ತದೆ, ಆದ್ದರಿಂದ ಶಾಲೆಗಳಲ್ಲಿ ಗೀತೆಯನ್ನು ಪಠ್ಯವಾಗಿ ಬೋದಿಸಬೇಕು, ಶಾಸ್ತ್ರಗಳಿಂದ ಶಸ್ತ್ರವನ್ನು ನಾಶ ಮಾಡಬಹುದು ಎಂದರು.ಪರ್ಯಾಯ ಶ್ರೀಗಳು ಜ. ಅಬ್ದುಲ್ ನಜೀರ್ ಮತ್ತು ಮಧುಸೂದನ ಸಾಯಿ ಅವರನ್ನು ಸನ್ಮಾನಿಸಿದರು. ಪುತ್ತಿಗೆ ಮಠದ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಲೇಖನಗಳ ಸಂಗ್ರಹ ‘ಸರ್ವಮೂಲಭಾವಪರಿಚಯ’, ಶ್ರಿ ಸುಜ್ಞಾನ ತೀರ್ಥ ಶ್ರೀಪಾದ ವಿರಚಿತ ‘ಗೀತಾಮೃತ ಸಾರ’ ಡಾ.ಚೂಡಾಮಣಿ ನಂದಗೋಪಾಲ್ ಮತ್ತು ಡಾ.ಅರುಣಾ ಕೆ.ಆರ್. ವಿರಚಿತ ‘ಉಡುಪಿ ಶ್ರೀಕೃಷ್ಣ ಮಠ ದೇವಾಲಯದ ಸಂಸ್ಕೃತಿ ಸಿರಿ’ ಕೃತಿಗಳನ್ನು ಅನಾವರಣಗೊಳಿಸಲಾಯಿತು. ಕೃತಿಕಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಿಲಿಜನ್ ಫಾರ್ ಪೀಸ್‌ನ ಪ್ರಧಾನ ಕಾರ್ಯದರ್ಶಿ ಡಾ. ವಿಲಿಯಂ ಎಫ್. ವಂಡ್ಲೆ, ಚಿಕ್ಕಬಳ್ಳಾಪುರದ ಸತ್ಯಸಾಯಿ ಲೋಕಸೇವಾ ಗುರುಕುಲಂನ ಕುಲಪತಿ ಬಿ. ಎನ್. ನರಸಿಂಹಮೂರ್ತಿ, ಗೋಮತಿ ನಾದನ್, ಸುರೇಶ್ ಪುತ್ತಿಗೆ ವೇದಿಕೆಯಲ್ಲಿದ್ದರು.ಬರಹಗಾರ ರೋಹಿತ್ ಚಕ್ರತೀರ್ಥ ಮತ್ತು ನಿಟ್ಟೆ ವಿ.ವಿ.ಯ ಪ್ರಾಧ್ಯಾಪಕ ಸುಧೀರ್‌ರಾಜ್ ಶೆಟ್ಟಿ ನಿರೂಪಿಸಿದರು.
ಕೃಷ್ಣ ಮೊದಲ ಶಾಂತಿ ಸ್ಥಾಪಕ: ಪುತ್ತಿಗೆ ಶ್ರೀಆಶೀರ್ವಚನ ನೀಡಿದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು, ಸಜ್ಜನರ ರಕ್ಷಣೆಯಾಗಬೇಕು, ಅದಕ್ಕೆ ದುರ್ಜನರ ಶಿಕ್ಷೆಯಾಗಬೇಕು ಎನ್ನುವುದು ಶ್ರೀ ಕೃಷ್ಣನ ಮೊತ್ತಮೊದಲ ಘೋಷಣೆಯಾಗಿದೆ. ಸಜ್ಜನರ ರಕ್ಷಣೆಯಾದರೇ ಮಾತ್ರ ಜಗತ್ತಿನಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ, ಅದಕ್ಕಾಗಿ ಕೃಷ್ಣ ಮಹಾಭಾರತ ಯುದ್ಧ ಮಾಡಿಸಿದ ಮತ್ತು ದುರ್ಜನರನ್ನು ನಾಶ ಮಾಡಿದ. ಆದ್ದರಿಂದ ಕೃಷ್ಣ ಜಗತ್ತಿನ ಮೊದಲ ಶಾಂತಿ ಸ್ಥಾಪಕ. ಕೃಷ್ಣನ ಈ ಶಾಂತಿ ಸಂದೇಶವನ್ನು ಜಗತ್ತಿಗೆ ತಲುಪಿಸುವುದಕ್ಕಾಗಿ ಈ ಸಮ್ಮೇಳನವನ್ನು ಆಯೋಜಿಸಿದ್ದೇವೆ ಎಂದರು.
ವೇದಗಳು ವಿಶ್ವದ ಸಂಪತ್ತು: ಜ. ನಜೀರ್
ಭಾರತೀಯರು ವೇದಗಳ ಬೇರುಗಳ ಅಧಾರದಲ್ಲಿ ಒಂದಾಗಿ ನಿಂತಿದ್ದೇವೆ, ವೇದಗಳು ಎಂದರೆ ಕೇವಲ ಧಾರ್ಮಿಕ ಗ್ರಂಥಗಳಲ್ಲ, ಅವು ಭಾರತೀಯ ನಾಗರಿಕತೆಯ ಬೌದ್ಧಿಕ, ಸಾಂಸ್ಕೃತಿಕ ಮತ್ತು ತಾತ್ವಿಕ ಅಡಿಪಾಯಗಳಾಗಿವೆ, ವೇದಗಳು ನಮ್ಮ ಆತ್ಮಗಳಾಗಿವೆ, ನಮ್ಮನ್ನು ಒಂದಾಗಿ ಹಿಡಿದಿಟ್ಟಿವೆ, ಭಾರತೀಯ ಸಾಹಿತ್ಯ, ಕಲೆ, ವಿಜ್ಞಾನ, ಸಂಸ್ಕೃತಿ, ಪರಂಪರೆ, ತತ್ವಜ್ಞಾನಗಳು ವೇದದಿಂದಲೇ ಹುಟ್ಟಿವೆ. ವೇದಗಳು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ಅವು ವಿಶ್ವದ ಸಂಪತ್ತಾಗಿವೆ ಎಂದು ಜ. ಅಬ್ದುಲ್ ನಜೀರ್ ವಿಶ್ಲೇಷಿಸಿದರು.