ಕಳೆದ ವರ್ಷದ ಫಲಿತಾಂಶಕ್ಕಿಂತ ಈ ವರ್ಷ ನಮ್ಮ ಶಾಲೆಯ ಮಕ್ಕಳಿಂದ ಹೆಚ್ಚಿನ ಫಲಿತಾಂಶ ನಿರೀಕ್ಷಿಸಲಾಗಿದೆ
ಕುಷ್ಟಗಿ: ಜೀವನದಲ್ಲಿ ಸಾಧಿಸಲು ಕಠಿಣ ಪರಿಶ್ರಮ ಅಗತ್ಯವಾಗಿದ್ದು, ಮುಂದಿನ ವಾರದಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮವಾಗಿ ಪರೀಕ್ಷೆ ಎದುರಿಸುವ ಮೂಲಕ ಉತ್ತಮ ಅಂಕ ಗಳಿಸಿ ಸಾಧನೆಗೈಯಬೇಕು ಎಂದು ಮುಖ್ಯಶಿಕ್ಷಕ ಬಸವರಾಜ ಮಡಿವಾಳರ ಹೇಳಿದರು.
ತಾಲೂಕಿನ ಅಡವಿಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುಗೆಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಇಲ್ಲಿಯವರೆಗೆ ಶಿಕ್ಷಕರು ಹೇಳಿಕೊಟ್ಟಿರುವ ಪಾಠ ಹಾಗೂ ಪರೀಕ್ಷೆಗೆ ಸಂಬಂಧಿಸಿದ ಚಟುವಟಿಕೆ ಮನನ ಮಾಡಿಕೊಂಡು ಉತ್ತಮವಾಗಿ ಪರೀಕ್ಷೆ ಎದುರಿಸಿ ಕಲಿಸಿದ ಶಿಕ್ಷಕರಿಗೆ ಹಾಗೂ ಹೆತ್ತ ತಂದೆ ತಾಯಿಗಳಿಗೆ ಉತ್ತಮ ಹೆಸರು ತಂದುಕೊಡುವಲ್ಲಿ ಮುಂದಾಗಬೇಕು ಎಂದ ಅವರು, ಕಳೆದ ವರ್ಷದ ಫಲಿತಾಂಶಕ್ಕಿಂತ ಈ ವರ್ಷ ನಮ್ಮ ಶಾಲೆಯ ಮಕ್ಕಳಿಂದ ಹೆಚ್ಚಿನ ಫಲಿತಾಂಶ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಶಿವಪ್ಪ ಭಜಂತ್ರಿ, ಯಮನೂರಪ್ಪ ಚೂರಿ ಸೇರಿದಂತೆ ಇತರರು ಮಾತನಾಡಿದರು.ಈ ಸಂದರ್ಭದಲ್ಲಿ ಚಳಗೇರಿ ಶಾಲೆಯ ಮುಖ್ಯಶಿಕ್ಷಕ ರಾಯಪ್ಪ ಹೂಗಾರ, ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಪಂ ಮಾಜಿ ಸದಸ್ಯರು, ಗ್ರಾಮದ ಗಣ್ಯರು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು. ಶಿಕ್ಷಕ ಬಸವರಾಜ ಗುರಿಕಾರ ಸ್ವಾಗತಿಸಿದರು, ದೈಹಿಕ ಶಿಕ್ಷಕ ಸಂಗನಗೌಡ ನಿರೂಪಿಸಿದರು. ಇದೆ ಸಂದರ್ಭದಲ್ಲಿ ಸರಸ್ವತಿದೇವಿ ಪೂಜೆ ನಡೆಸಲಾಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.