ಮಹದೇಶ್ವರ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

| Published : Jun 04 2024, 12:32 AM IST

ಸಾರಾಂಶ

ಕೊಳ್ಳೇಗಾಲ ಪಟ್ಟಣದ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ವಿವಿಧ ಕ್ರೀಡೆ ಮತ್ತು ಆಟೋಟ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಜಂಟಿ ನಿರ್ದೇಶಕರು ಮತ್ತು ಪ್ರಾಂಶುಪಾಲರು ಪ್ರಶಂಸಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕೊಳ್ಳೇಗಾಲ ಪಟ್ಟಣದ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ವಿವಿಧ ಕ್ರೀಡೆ ಮತ್ತು ಆಟೋಟ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಜಂಟಿ ನಿರ್ದೇಶಕರು ಮತ್ತು ಪ್ರಾಂಶುಪಾಲರು ಪ್ರಶಂಸಿಸಿದರು.

ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಣಾ ವೇಳೆ ವಿದ್ಯಾರ್ಥಿಗಳ ಸಾಧನೆಗೆ ಜಂಟಿ ನಿರ್ದೇಶಕಿ ಡಾ. ವಿಜಯಲಕ್ಷ್ಮಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದರು.

ಪ್ರಶಸ್ತಿಗಳ ಸುರಿಮಳೆ: ಇತ್ತೀಚೆಗೆ ನಡೆದ ಮೈಸೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜುಗಳ 62ಕೆಜಿ ತೂಗುವ ಉತ್ತಮ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮಹದೇಶ್ವರ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿ ಎಲ್.ಅಭಿ ದ್ವಿತೀಯ ಸ್ಥಾನಗಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೈಸೂರು ವಿವಿ ಅಂತರ ಕಾಲೇಜುಗಳ 20ಕಿಮೀ ನಡಿಗೆ ಸ್ಪರ್ಧೆಯಲ್ಲಿ ಕು.ಸೋನಿಯಾ ತೃತೀಯ ಬಿಎ ವಿದ್ಯಾರ್ಥಿನಿ ಹಾಗೂ ಕುಮಾರಿ ದಿವ್ಯಶ್ರೀ ನಾಲ್ಕು ಮತ್ತು ಐದನೇ ಸ್ಥಾನವನ್ನು ಗಳಿಸಿದ್ದಾರೆ.

ಮೈಸೂರು ವಿವಿ ವಲಯ ಮಟ್ಟದ ಪುರುಷರ ಪಂದ್ಯಾವಳಿಗಳಾದ ಖೋ ಖೋ, ಕಬಡ್ಡಿ, ಬಾಸ್ಕೆಟ್ ಬಾಲ್, ಮತ್ತು ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಅಲ್ಲದೆ ಬ್ಯಾಡ್ಮಿಟನ್, ಟೇಬಲ್ ಟೆನ್ನಿಸ್ ಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಹಾಗೂ ಥ್ರೋ ಬಾಲ್ ನಲ್ಲಿ ತೃತೀಯ ಸ್ಥಾನಗಳಿಸಿದ್ದಾರೆ. ಅದೇ ರೀತಿಯಲ್ಲಿ ಮಹಿಳಾ ಕ್ರೀಡಾಕೂಟಗಳಲ್ಲೂ ಸಹ ಬಾಲ್ ಬ್ಯಾಡ್ಮಿಟನ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳಿಸಿದ್ದಾರೆ. ದಸರಾ ಕ್ರೀಡಾಕೂಟ ತಾಲೂಕು ಮಟ್ಟದಲ್ಲಿ ಪ್ರಥಮ ಹಾಗೂ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ.

ತೃತೀಯ ಬಿಕಾಂ ವಿದ್ಯಾರ್ಥಿ ಶಶಿಕುಮಾರ್ ತಾಲೂಕು ಮಟ್ಟದ 5 ಮತ್ತು 10 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಿಟ್ಟಿಸಿದ್ದಾರೆ. ಇಂತಹ ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಶಿಕ್ಷಣ ಇಲಾಖೆಯ ಮೈಸೂರು ಜಂಟಿ ನಿರ್ದೇಶಕಿ ಡಾ. ವಿಜಯಲಕ್ಷ್ಮಿ, ಪ್ರಾಂಶುಪಾಲೆ ಪ್ರೊ.ಜಯಲಕ್ಷ್ಮಿ ಶ್ಲಾಘಿಸಿದ್ದಾರೆ.

ಶನಿವಾರ ಮದ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಜಂಟಿ ನಿರ್ದೇಶಕರು ಅಭಿನಂದಿಸಿದರು. ಕೊಳ್ಳೇಗಾಲದ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು ಇತಿಹಾಸ ಪ್ರಸಿದ್ಧಿ ಪಡೆದ ದೊಡ್ಡ ಕಾಲೇಜು, ಇಲ್ಲಿಗೆ ಆಗಮಿಸಿದ್ದು ಹಾಗೂ ಮಕ್ಕಳ ಪ್ರಗತಿ ಬಗ್ಗೆ ನನಗೆ ತುಂಬ ಸಂತಸವಾಗಿದೆ, ವಿದ್ಯಾರ್ಥಿಗಳು ಬಣ್ಣ ಬಣ್ಣದ ಚಿಟ್ಟೆಗಳಂತೆ ನಿಮ್ಮ ಬದುಕನ್ನು ಸಾಧನೆ ಎಂಬ ಮೈಲುಗಲ್ಲು ದಾಟುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಿ ಎಂದು ಇದೆ ವೇಳೆ ಕಿವಿಮಾತು ಹೇಳಿದರು.

ಈ ವೇಳೆ ಪ್ರಾಂಶುಪಾಲೆ ಶ್ರೀಮತಿ ಪ್ರೊ.ಜಯಲಕ್ಷ್ಮಿ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ನಾಗೇಂದ್ರಪ್ರಸಾದ್, ಡಾ.ಹೇಮಕುಮಾರ್, ಅರುಣ್ ಕುಮಾರ್, ಡಾ.ಸುಧಾ, ಪ್ರೊ.ಎಸ್ .ಸುಂದರಮೂರ್ತಿ, ಪ್ರೊ.ಪ್ರೇಮಕುಮಾರಿ, ಜಯಶಂಕರ್, ಡಾ.ವೇಣುಗೋಪಾಲ್ ಇದ್ದರು.