ಸಾಧನೆಗೆ ಮಗ್ನತೆ, ಬದ್ಧತೆ ಅಗತ್ಯ: ಉಮಾಶ್ರೀ

| Published : Nov 16 2025, 02:30 AM IST

ಸಾರಾಂಶ

ಓದಿಲ್ಲದ ಎಷ್ಟೋ ಜನ ರಾಷ್ಟ್ರಕ್ಕೆ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಾಧನೆಗೆ ಮಗ್ನತೆ ಹಾಗೂ ಬದ್ಧತೆ ಬೇಕು

ಕಲಾಂಜಲಿ ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್‌ ಸದಸ್ಯೆ

ಕನ್ನಡಪ್ರಭ ವಾರ್ತೆ ಕುಮಟಾ

ಓದಿಲ್ಲದ ಎಷ್ಟೋ ಜನ ರಾಷ್ಟ್ರಕ್ಕೆ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಾಧನೆಗೆ ಮಗ್ನತೆ ಹಾಗೂ ಬದ್ಧತೆ ಬೇಕು ಎಂದು ಹಿರಿಯ ನಟಿ, ವಿಧಾನಪರಿಷತ್‌ ಸದಸ್ಯೆ ಉಮಾಶ್ರೀ ಹೇಳಿದರು.

ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್‌, ಮಂಗಳೂರು ವಿಧಾತ್ರಿ ಅಕಾಡೆಮಿ ಸಹಭಾಗಿತ್ವದಡಿ ಸರಸ್ವತಿ ಪಿಯು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಲಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ವಿದ್ಯೆ ಅತೀ ಮುಖ್ಯ. ಕಲಿಕೆಯ ಜತೆಗೆ ಮಕ್ಕಳಲ್ಲಿ ನೈತಿಕ ಸಂಸ್ಕಾರ ತುಂಬುವ ವಿದ್ಯೆಯ ಅವಶ್ಯಕತೆ ಹೆಚ್ಚುತ್ತಿದೆ. ಕೌಟುಂಬಿಕ ಸಂಸ್ಕಾರಗಳ ಜತೆಯಲ್ಲಿಯೇ ಶಿಕ್ಷಣ ಮುಂದುವರೆಯಬೇಕು.

ಆಧುನಿಕ ತಾಂತ್ರಿಕ ಜೀವನ ಶೈಲಿ ನಮ್ಮೆಲ್ಲರ ಸಂಸ್ಕಾರ, ನಂಬಿಕೆ, ಆಚರಣೆಗಳ ಮೇಲೆ ಪೂರಕ ಮತ್ತು ಮಾರಕ ಪ್ರಭಾವಗಳನ್ನು ಬೀರುತ್ತಿದೆ. ನಮ್ಮ ಸಂಸ್ಕೃತಿ ಸಂಸ್ಕಾರದ ಬೇರುಗಳನ್ನು ಉಳಿಸಿಕೊಂಡು ಸಾಗುವ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳು ತಮ್ಮ ಕನಸಿನ ಜೊತೆ ನಿಮ್ಮ ಪೋಷಕರ ಕನಸುಗಳನ್ನು ಎತ್ತಿಹಿಡಿಯಿರಿ. ಕಲೆಗಾಗಿ ತಮ್ಮ ಜೀವನಮುಡಿಪಾಗಿಟ್ಟ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕಲಾ ಸೇವಕರನ್ನು ಗುರುತಿಸಿ ಸನ್ಮಾನಿಸುತ್ತಿರುವ ಸಂಘಟಕರ ಕಾರ್ಯ ಆದರ್ಶಪ್ರಾಯವಾಗಿದೆ ಎಂದರು.

ರಂಗಕರ್ಮಿ ಕಾಸರಗೋಡು ಚಿನ್ನಾ ಮಾತನಾಡಿ, ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಸಾಧನೆ ಕಷ್ಟವಲ್ಲ, ಶಾಲಾ-ಕಾಲೇಜು ವಿದ್ಯೆಯಲ್ಲಿ ಮಾತ್ರ ಸಂಪನ್ನರಾದರೆ ಸಾಲದು, ಸಾಂಸ್ಕೃತಿಕವಾಗಿಯೂ ಗಟ್ಟಿಯಾಗಬೇಕು. ಇಂಥ ಕಲಾಂಜಲಿ ಕಾರ್ಯಕ್ರಮಗಳ ಮೂಲಕ ಕುಮಟಾ ಪ್ರತಿಭೆಗಳು ರಾಜ್ಯ-ರಾಷ್ಟ್ರಮಟ್ಟದಲ್ಲಿ ಬೆಳಗಲಿ ಎಂದರು.

ವಿಧಾತ್ರಿ ಸಂಮಾನ ಸ್ವೀಕರಿಸಿದ ಯಕ್ಷಗಾನದ ಹಿರಿಯ ಭಾಗವತ ಸುಬ್ರಾಯ ಹೆಗಡೆ ಕಪ್ಪೆಕೆರೆ ಮಾತನಾಡಿ, ಯಕ್ಷಗಾನ ನಮ್ಮ ಹಕ್ಕು ಹಾಗೂ ನಮ್ಮದೇ ಸೊತ್ತು. ಇದನ್ನು ಬಿಡಬಾರದು. ಯಕ್ಷಗಾನ ಕಲಿಯಲು ಈಗ ಹಿಂದಿನಷ್ಟು ಕಷ್ಟಪಡಬೇಕಿಲ್ಲ. ಇಂದಿನ ಪೀಳಿಗೆ ಶಾಲಾ ಕಲಿಕೆಯ ಜತೆಗೆ ಯಕ್ಷಗಾನವನ್ನೂ ಕಲಿತರೆ ವ್ಯಕ್ತಿತ್ವಕ್ಕೆ ವಿಶೇಷ ಮೆರುಗು ಹಾಗೂ ಯಕ್ಷಗಾನ ಪರಂಪರೆ ಮುಂದುವರೆಯುತ್ತದೆ. ಹಿಂದೆ ನಾನು ಮನೆಯಿಂದ ೧೪-೧೫ ಕಿಮೀ ದೂರ ಕಾಲ್ನಡಿಗೆಯಲ್ಲಿ ಪ್ರತಿನಿತ್ಯ ತೆರಳಿ ಕೆರೆಮನೆ ಮಹಾಬಲ ಹೆಗಡೆಯವರಲ್ಲಿ ಕಲಿತ ಯಕ್ಷಗಾನ ನನ್ನ ಜೀವನಕ್ಕೆ ಹೆಮ್ಮೆ ತಂದಿದೆ. ಈಗ ನನ್ನಿಂದ ಕಲಿತವರು ಸರ್ಕಾರ ಹಾಗೂ ಇತರ ಕಡೆಗಳಿಂದ ಪಡೆಯುತ್ತಿರುವ ಪ್ರಶಸ್ತಿ-ಪುರಸ್ಕಾರಗಳು ನನಗೇ ಸಿಕ್ಕಿದಂತೆ ಸಂತಸ ಕೊಟ್ಟಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ವಿಧಾತ್ರಿ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ವಿಧಾತ್ರಿ ಅಕಾಡೆಮಿಯು ಕೊಂಕಣ ಎಜುಕೇಶನ್ ಟ್ರಸ್ಟಿನೊಂದಿಗೆ ಸಂಯೋಜಿತವಾಗಿ ೨೦೨೦ರಿಂದ ಸರಸ್ವತಿ ಪಿಯು ಕಾಲೇಜು ನಡೆಸುತ್ತಾ ಮಕ್ಕಳ ದಿನಾಚರಣೆಯನ್ನು ಕಲಾಂಜಲಿ ಕಾರ್ಯಕ್ರಮವಾಗಿ ಆಚರಿಸುತ್ತಿದೆ. ಕಾಲೇಜು ಆರಂಭಗೊಂಡು ೫ ವರ್ಷ ಸಂದ ವಿಶೇಷತೆಗಾಗಿ ಈ ವರ್ಷದಿಂದ ವಿಧಾತ್ರಿ ಸಮ್ಮಾನ ಪ್ರಶಸ್ತಿಯನ್ನು ಆರಂಭಿಸಲಾಗಿದೆ ಎಂದರು.

ಕಲಾಂಜಲಿ ಗೌರವವನ್ನು ಸಂಗೀತ ವಾದ್ಯ ತಯಾರಕ ವಿ.ಎಸ್. ಭಟ್ ಹಾಗೂ ನಾಟಕ ಪ್ರಸಾಧನ ತಯಾರಕ ದಾಮೋದರ ನಾಯ್ಕ ಅವರಿಗೆ ಸಮರ್ಪಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕೊಂಕಣ ಎಜುಕೇಶನ್ ಟ್ರಸ್ಟಿನ ಉಪಾಧ್ಯಕ್ಷ ರಮೇಶ ಪ್ರಭು, ಟ್ರಸ್ಟಿ ಡಿ.ಡಿ. ಕಾಮತ, ರಾಮಕೃಷ್ಣ ಗೋಳಿ, ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ಉಪಪ್ರಾಚಾರ್ಯೆ ಸುಜಾತಾ ಹೆಗಡೆ, ಪ್ರಸನ್ನ ಹೆಗಡೆ, ಸತೀಶ ಭಟ್, ಚಿದಾನಂದ ಭಂಡಾರಿ, ಅಕ್ಷಯ ಇತರರು ಇದ್ದರು. ವಿದ್ಯಾರ್ಥಿನಿ ಆರಾಧನಾ ಅವರಿಂದ ಭರತನಾಟ್ಯ ಪ್ರದರ್ಶನದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕಿರಣ ಭಟ್ ಹುತ್ಗಾರ ಸ್ವಾಗತಿಸಿದರು. ಸರಸ್ವತಿ ಪ್ರಾಥಮಿಕದ ಮುಖ್ಯ ಶಿಕ್ಷಕ ಗಣೇಶ ಜೋಶಿ ನಿರೂಪಿಸಿದರು. ಬಳಿಕ ಕಲಾಂಜಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಿತು.