ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದೇವಮ್ಮ ಯಡಹಳ್ಳಿ ಸವಾಲುಗಳನ್ನು ಮೆಟ್ಟಿ ನಿಂತು ಶ್ರದ್ಧೆ ಹಾಗೂ ಪರಿಶ್ರಮದಿಂದ ಅಧ್ಯಯನ ಮಾಡಿ ಸದ್ದಿಲ್ಲದೇ ಸಾಧನೆ ಮಾಡಿದ್ದಾಳೆ. ಈಗ ಅವಳ ಈ ಸಾಧನೆ ಸದ್ದು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಮೀನಾ ಚಂದಾವರಕರ ಮೆಚ್ಚುಗೆ ವ್ಯಕ್ತಪಡಿಸಿದರು.ಪಿಯುಸಿ ದ್ವಿತೀಯ ವರ್ಷದ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ್‍ಯಾಂಕ್ ಪಡೆದಿರುವ ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಡಿ.ಹೆರಂಜಲ ಕಲಾ, ಶಂಕ್ರಪ್ಪ ಸಕ್ರಿ ವಾಣಿಜ್ಯ ಹಾಗೂ ಆರ್.ದೊಡ್ಡಿಹಾಳ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ದೇವಮ್ಮ ಯಡಹಳ್ಳಿಗೆ ಸಂಸ್ಥೆ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜ್ಞಾನ ವಿಭಾಗಕ್ಕೆ ಹೋಲಿಸಿದರೇ ಕಲಾ ವಿಭಾಗದಲ್ಲಿ ಶೇ.99 ರಷ್ಟು ಅಂಕಗಳನ್ನು ಪಡೆಯುವುದು ಕಷ್ಟ ಸಾಧ್ಯ. ಅದನ್ನು ಕೆಲವೇ ಕೆಲವು ವಿದ್ಯಾರ್ಥಿಗಳು ಸಾಧಿಸಬಲ್ಲರು. ದೇವಮ್ಮ ಯಡಹಳ್ಳಿ ಈ ಅಪರೂಪದ ಸಾಧನೆ ಮಾಡಿದ್ದಾಳೆ ಎಂದು ಶ್ಲಾಘಿಸಿದರು. ಗೌರವ ಕಾರ್ಯದರ್ಶಿ ಡಾ.ಗಿರೀಶ ಮಸೂರಕರ ಮಾತನಾಡಿ, ಸಂಸ್ಥೆ ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನೂ ನೀಡುತ್ತ ಬಂದಿದೆ. ವಿದ್ಯಾರ್ಥಿಗಳ ಮೇಲೆ ಹೆಚ್ಚ್ಚಿನ ಹೊರೆಯನ್ನು ಹಾಕದೇ ಶಿಕ್ಷಣ ನೀಡಲಾಗುತ್ತಿದೆ ಎಂದರು. ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಈ ಸಾಧನೆಯ ಪರಂಪರೆ ಮುಂದುವರೆಯಬೇಕು. ಅದಕ್ಕೆ ಸಂಸ್ಥೆ ಅವಶ್ಯಕ ನೆರವು ನೀಡಲಿದೆ. ದೇವಮ್ಮಳ ಪದವಿ ಶಿಕ್ಷಣದ ವೆಚ್ಚವನ್ನು ವೈಯಕ್ತಿಕವಾಗಿ ತಾವು ಭರಿಸುವುದಾಗಿ ತಿಳಿಸಿದರು. 3ನೇ ರ್‍ಯಾಂಕ್ ಪಡೆದ ದೇವಮ್ಮ ಯಡಹಳ್ಳಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾಲೇಜಿನಲ್ಲಿ ನಡೆಸುತ್ತಿದ್ದ ವಿವಿಧ ಪರೀಕ್ಷೆಗಳು, ಮಾದರಿ ಪ್ರಶ್ನೆಪತ್ರಿಕೆಗಳು, ಅವುಗಳಿಗೆ ಶಿಕ್ಷಕರು ನೀಡುತ್ತಿದ್ದ ಪರಿಹಾರ ಇವೆಲ್ಲವೂ ತನ್ನ ಈ ಸಾಧನೆಗೆ ಸಹಕಾರಿಯಾಯಿತು. ಮೊಬೈಲ್ ಬಳಸದೇ ಕೇವಲ ಪಠ್ಯ ಪುಸ್ತಕಗಳನ್ನು ಓದಿ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದೆ. ಭವಿಷ್ಯದಲ್ಲಿ ಕೆಎಎಸ್, ಐಎಎಸ್ ಮಾಡುವ ಗುರಿ ತನ್ನದಾಗಿದೆ ಎಂದಳು.ಲಕ್ಷೀ ಚವ್ಹಾಣ ಪ್ರಾರ್ಥಿಸಿದರು. ಪ್ರಾಚಾರ್ಯ ಅಶೋಕ ಕಂದಗಲ್ ಸ್ವಾಗತಿಸಿದರು. ಉಪನ್ಯಾಸಕ ಆರ್.ಜೆ.ಬೊಮ್ಮಣಗಿ ನಿರೂಪಿಸಿದರು. ಉಪನ್ಯಾಸಕ ಜಿ.ಬಿ.ಕುಲಕರ್ಣಿ ವಂದಿಸಿದರು. ಉಪಾಧ್ಯಕ್ಷ ಜಿ.ಎನ್.ಕುಲಕರ್ಣಿ, ಜಂಟಿ ಕಾರ್ಯದರ್ಶಿ ಡಾ.ಎಸ್.ಬಿ.ಪರ್ವತೀಕರ, ಸದಸ್ಯರಾದ ಡಾ.ಪಿ.ಆರ್.ಜೋಶಿ, ಡಾ.ಜೆ.ಎಸ್.ದೇಶಪಾಂಡೆ, ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ ನರಗುಂದ, ದೇವಮ್ಮಳ ತಂದೆ ಹಣಮಂತರಾಯ, ತಾಯಿ ನಾಗಮ್ಮ ಮತ್ತಿತರರು ಇದ್ದರು.