ಮಹಿಳೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನದಿಂದ ರಾಷ್ಟ್ರ್ರಪತಿ ಸ್ಥಾನದ ವರೆಗೂ ರಾಜಕೀಯವಾಗಿ ಬೆಳೆದು ಯಶಸ್ಸು ಸಾಧಿಸಿದ್ದಾರೆ.
ಮುಂಡರಗಿ: ಮಹಿಳೆ ಇಂದು ಮನೆಯನ್ನು ಸುಂದರವಾಗಿಟ್ಟುಕೊಳ್ಳುವುದರಿಂದ ಹಿಡಿದು ವಿಮಾನ ಓಡಿಸುವ ವರೆಗೂ ಸಾಧನೆ ಮಾಡುತ್ತಿದ್ದಾಳೆ ಎಂದು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ತಿಳಿಸಿದರು.
ಪಟ್ಟಣದ ಜ.ಅ. ವಿದ್ಯಾ ಸಮಿತಿಯ ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ ಮುಂಡರಗಿ, ಸಮಾಜ ಶಾಸ್ತ್ರ, ಎನ್ಎಸ್ಎಸ್ ರೋವರ್ ಮತ್ತು ಮಹಿಳಾ ವೇದಿಕೆಗಳ ಆಶ್ರಯದಲ್ಲಿ ಮಂಗಳವಾರ ಕಾಲೇಜಿನ ಸಭಾ ಭವನದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನದಿಂದ ರಾಷ್ಟ್ರ್ರಪತಿ ಸ್ಥಾನದ ವರೆಗೂ ರಾಜಕೀಯವಾಗಿ ಬೆಳೆದು ಯಶಸ್ಸು ಸಾಧಿಸಿದ್ದಾರೆ ಎಂದರು.
ಚೈತನ್ಯ ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆಯ ನಿರ್ದೇಶಕಿ ವೀಣಾ ಪಾಟೀಲ ಮಾತನಾಡಿ, ಮಹಿಳೆ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲೀಕರಣ ಹೊಂದಿದ್ದಾರೆ. ಅನೇಕ ಮಹಿಳೆಯರು ದೊಡ್ಡ ದೊಡ್ಡ ಸ್ವಯಂ ಉದ್ಯೋಗಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿದ್ದಾರೆ ಎಂದರು.ಕಾಲೇಜು ಮೇಲ್ವಿಚಾರಣಾ ಸಮಿತಿ ಸದಸ್ಯ ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬ ಮಗು ಶಿಸ್ತು ಮತ್ತು ಸಮಯಪ್ರಜ್ಞೆ ಹಾಗೂ ಕಠಿಣ ಶ್ರಮದಿಂದ ಸಾಧನೆಯ ಮೆಟ್ಟಿಲನ್ನೇರಬೇಕು. ಅಂದಾಗ ಬದುಕನ್ನು ಉಜ್ವಲವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾ. ಡಾ. ಸಂತೋಷ ಹಿರೇಮಠ, ಡಾ. ಸಚಿನ್ ಉಪ್ಪಾರ, ಡಾ. ವನಜಾಕ್ಷಿ ಭರಮಗೌಡ್ರ, ಶಂಭುಲಿಂಗಯ್ಯ ಮುಂಡರಗಿಮಠ, ಕೋಟೆಪ್ಪ ಜಿ., ರಘುವೀರ ಕೆ., ಕೆ.ಕೆ. ಉಳ್ಳಾಗಡ್ಡಿ, ಲತಾ ಕಡ್ಡಿ, ಜ್ಯೋತಿಕಾ ಪಿ., ತೇಜಸ್ವಿನಿ ಪಾಟೀಲ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಡಾ. ಪ್ರವೀಣ್ ಕುಮಾರ್ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಕುಮಾರ್ ಜೆ. ನಿರೂಪಿಸಿದರು.