ಹೊಸಪೇಟೆ: ಮಧ್ಯಕಾಲೀನ ಕರ್ನಾಟಕದ ಇತಿಹಾಸದಲ್ಲಿ ಮಹಿಳೆಯರ ಸಾಮಾಜಿಕ ಸ್ಥಿತಿಗತಿ ಒಂದು ರೋಚಕವಾದ ಮತ್ತು ಸಾರ್ವಕಾಲಿಕ ಪ್ರೇರಣೆ ನೀಡುವ ಅಧ್ಯಾಯವಾಗಿದೆ ಎಂದು ಸಂಶೋಧನಾ ವಿದ್ಯಾರ್ಥಿನಿ ಮಂಜುಳಾ ಓ. ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿಂದ ಪಾಕ್ಷಿಕ ಮಾತು-52ರ ಕಾರ್ಯಕ್ರಮದ ಭಾಗವಾಗಿ ನಳಂದ ಸಭಾಂಗಣದಲ್ಲಿ ನಡೆದ ಮಧ್ಯಕಾಲೀನ ಕರ್ನಾಟಕದ ಮಹಿಳೆಯರ ಸಾಮಾಜಿಕ ಸ್ಥಿತಿಗತಿ ಕುರಿತು ಅವರು ಮಾತನಾಡಿದರು. ಅಂದಿನ ಸಮಾಜದಲ್ಲಿದ್ದ ಪಿತೃಪ್ರಧಾನ ವ್ಯವಸ್ಥೆ, ಬಾಲ್ಯವಿವಾಹ, ಸತಿ ಪದ್ಧತಿ ಮತ್ತು ಶೋಷಣಾತ್ಮಕ ದೇವದಾಸಿ ಪದ್ಧತಿಯಂತಹ ಕಠಿಣ ಸವಾಲುಗಳು ಹೆಣ್ಣಿನ ಮುನ್ನಡೆಗೆ ಅಡ್ಡಿಯಾಗಿದ್ದವು ಎಂಬುದು ಎಷ್ಟು ಸತ್ಯವೋ; ಆ ಎಲ್ಲ ಕಟ್ಟುಪಾಡುಗಳ ಚೌಕಟ್ಟನ್ನು ಮುರಿದು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಶಿಖರ ಏರಿದ್ದು ಅಷ್ಟೇ ಸತ್ಯ ಎಂದು ಅವರು ವಿವರಿಸಿದರು.

ಮಧ್ಯಕಾಲೀನ ಸಂದರ್ಭದಲ್ಲಿ ಮಹಿಳೆಯರು ರಾಣಿ, ಯುವರಾಣಿ, ಮಹಾಮಂಡಲೇಶ್ವರಿ ಹಾಗೂ ಆಡಳಿತಗಾರ್ತಿಯರಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳ ಜತೆಗೆ ಸಾಮಾನ್ಯ ಮಹಿಳೆಯರು ಕೃಷಿ, ಪಶುಪಾಲನೆ ಹಾಗೂ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದರು ಎಂದರು.

ರಾಜಕೀಯ ರಂಗದಲ್ಲಿ ಅರಮನೆಯ ಆಡಳಿತದಿಂದ ಹಿಡಿದು ರಣರಂಗದ ನಾಯಕತ್ವದ ವರೆಗೆ (ರಾಣಿ ಅಬ್ಬಕ್ಕ, ಶಾಂತಲಾದೇವಿ), ಆಧ್ಯಾತ್ಮಿಕ ರಂಗದಲ್ಲಿ ಸಮಾಜದ ಲಿಂಗ ತಾರತಮ್ಯವನ್ನೇ ಬುಡಮೇಲು ಮಾಡಿದ ವಚನ ಕ್ರಾಂತಿಯವರೆಗೆ (ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ) ಮತ್ತು ಆರ್ಥಿಕವಾಗಿ ಸ್ವತಂತ್ರ ವ್ಯಾಪಾರಿಗಳಾಗಿ ಹಾಗೂ ಅರಮನೆಯ ಜವಾಬ್ದಾರಿಯುತ ಉದ್ಯೋಗಿಗಳಾಗಿ ಮಹಿಳೆಯರು ತಮ್ಮ ಅಪ್ರತಿಮ ಅಸ್ಮಿತೆಯನ್ನು ಜಗತ್ತಿಗೆ ಸಾರಿದರು. ಸಾಮಾನ್ಯ ಮಹಿಳೆಯರೂ ಊರಿನ ರಕ್ಷಣೆಗಾಗಿ ಆತ್ಮಾಭಿಮಾನದಿಂದ ಹೋರಾಡಿ ವೀರಗಲ್ಲುಗಳಲ್ಲಿ ಅಮರರಾದ ಇತಿಹಾಸ ನಮ್ಮ ಕರ್ನಾಟಕದ್ದಾಗಿದೆ ಎಂದರು.

ಮಹಿಳೆಯರ ಮೇಲೆ ಪರಿಣಾಮ ಬೀರಿದ್ದ ಸತಿಸಹಗಮನ, ದೇವದಾಸಿ ಪದ್ಧತಿ, ಬಾಲ್ಯವಿವಾಹ ಹಾಗೂ ಇತರ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಪುರಂದರದಾಸರು ಹಾಗೂ ಕನಕದಾಸರು ಸಾಮಾಜಿಕ ಜಾಗೃತಿ ಮೂಡಿಸಿದ್ದರು ಎಂದರು.


ಹಂಪಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿ, ಮಧ್ಯಕಾಲೀನ ಮಹಿಳೆಯರ ಇತಿಹಾಸವನ್ನು ಪುನರ್‌ರಚಿಸುವುದು ಇಂದಿನ ಇತಿಹಾಸ ಅಧ್ಯಯನ ಅಗತ್ಯವಾಗಿದೆ. ಮಹಿಳೆಯರ ಕೊಡುಗೆಗಳನ್ನು ಬೆಳಕಿಗೆ ತರುವ ಸಂಶೋಧನೆಗಳು ಸಾಮಾಜಿಕ ಇತಿಹಾಸಕ್ಕೆ ಹೊಸ ಆಯಾಮಗಳನ್ನು ನೀಡುತ್ತವೆ ಎಂದರು.

ವಿಭಾಗದ ಅಧ್ಯಾಪಕರು, ಸಿಬ್ಬಂದಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.