ಸಾರಾಂಶ
ಕನ್ನಡಪ್ರಭ ವಾರ್ತೆ ಆನಂದಪುರ ಜೀವನದಲ್ಲಿ ದೊರೆತ ಅವಕಾಶ ಮತ್ತು ಬದುಕಿನ ಸಮಯವನ್ನು ಸದುಪಯೋಗಪಡಿಸಿಕೊಂಡರೆ ಪ್ರತಿಯೊಬ್ಬರೂ ಸಾಧಕರಾಗಲು ಸಾಧ್ಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ಹೇಳಿದರು.
ಇಲ್ಲಿಗೆ ಸಮೀಪದ ಮುರುಘಾ ಮಠದಲ್ಲಿ ನಡೆದ ಕಾರ್ತಿಕ ದೀಪೋತ್ಸವದ ಭಾವೈಕ್ಯ ಸಮ್ಮೇಳನ ಉದ್ಘಾಟಿಸಿ, ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನನ್ನ ಜೀವನದ ಆರಂಭದಲ್ಲಿ ಅಪಮಾನ, ನೋವನ್ನು ಕಂಡಿದ್ದೇನೆ. ಕಲೆಯಲ್ಲಿ ಹೆಚ್ಚು ಸಾಧನೆ ಮಾಡಿದ ಕಾರಣ ಇಂದು ನನಗೆ ದೊಡ್ಡ ಗೌರವ ದೊರೆತಿದೆ. ಕಲೆಗೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ನನ್ನ ಜೀವನದ ಚರಿತ್ರೆಯ ಸಾಕ್ಷಿಯಾಗಿದೆ ಎಂದು ಹೇಳಿದರು.12ನೇ ಶತಮಾನದಲ್ಲಿ ಶಿವಶರಣರು ವಚನ ಸಾಹಿತ್ಯದ ಮೂಲಕ ಪುರುಷರು ಹಾಗೂ ಮಹಿಳೆಯರು ಸಮಾನರು ಎಂಬ ಸಂದೇಶ ಸಾರಿದ್ದಾರೆ. ಓದಿನ ಜೊತೆಗೆ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ನಾನು ಅಭ್ಯಾಸ ಮಾಡಿದ್ದು ಕೇವಲ ಹತ್ತನೇ ತರಗತಿ. ಯಾವುದೇ ಕಾಲೇಜುಗಳ ಮೆಟ್ಟಲನ್ನು ಹತ್ತಿಲ್ಲ. ಆದರೆ ಈಗ ನೂರಾರು ಕಾಲೇಜುಗಳ ಮೆಟ್ಟಲನ್ನು ಹತ್ತುವ ಭಾಗ್ಯ ಕಲೆ ನನಗೆ ತಂದು ಕೊಟ್ಟಿದೆ. ನನ್ನಜೀವನ ಚರಿತ್ರೆಯ ಎರಡು ಪುಸ್ತಕಗಳು 15 ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯ ಪುಸ್ತಕವಾಗಿವೆ. ವಿದ್ಯಾರ್ಥಿಗಳು ನನ್ನ ಜೀವನ ಚರಿತ್ರೆ ಅಭ್ಯಾಸ ಮಾಡುತ್ತಿದ್ದಾರೆ. ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು ಎಂಬುದನ್ನು ಬದುಕು ನನಗೆ ಪಾಠ ಕಲಿಸಿದೆ ಎಂದರು.
ಹೊಂಬುಜ ಕ್ಷೇತ್ರದ ಜೈನ ಮಠದ ಜಗದ್ಗುರು ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ಸ್ವಾಮಿಗಳು ಮಾತನಾಡಿ, ಪೋಷಕರು ಮಕ್ಕಳಿಗೆ ಒಳ್ಳೆಯ ಹಾದಿಯಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಬೇಕು. ರಾಮಾಯಣ, ಮಹಾಭಾರತಂತಹ ಮಹಾಕಾವ್ಯದ ವ್ಯಕ್ತಿಗಳ ಪಾತ್ರದ ಪರಿಚಯ ಮಕ್ಕಳಿಗಾಗಬೇಕು. ಕೆಳದಿ ರಾಣಿ ಚೆನ್ನಮ್ಮ, ಅಕ್ಕಮಹಾದೇವಿ, ಒನಕೆ ಓಬವ್ವನಂತಹ ಆದರ್ಶ ಮಹಿಳೆಯರು ರಾಜಾಡಳಿತ ನಡೆಸಿದ್ದನ್ನುಕಾಣಬಹುದು. ಮಹಾನ್ ಪುರುಷರ ಆದರ್ಶ- ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿ ಆಗಲು ಸಾಧ್ಯ ಎಂದರು.ಮುರುಘಾ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಿವಮೊಗ್ಗ ಬಸವ ಕೇಂದ್ರದ ಡಾ. ಬಸವ ಮರಳುಸಿದ್ಧ ಮಹಾಸ್ವಾಮೀಜಿ ಉಪನ್ಯಾಸ ನೀಡಿದರು. ಚಲನಚಿತ್ರ ನಟ ದೊಡ್ಡಣ್ಣ ಅವರಿಗೆ ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.
ಮೂಲೆಗದ್ದೆ ಶಿವಯೋಗಿ ಆಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ, ಶ್ರೀಪಾದ ಹೆಗಡೆ, ಡಾ. ಧನಂಜಯ್ ಸರ್ಜಿ, ಕೆ.ಆರ್. ಪ್ರಕಾಶ್, ಬೇಸೂರು ಇoದೂಧರ್ ಗೌಡ, ಮಂಜುನಾಥ್ ಗೌಡ, ನಾಗರಾಜ್ ಶೆಟ್ಟಿ, ದೀಪೋತ್ಸವ ಸಮಿತಿಯ ಅಧ್ಯಕ್ಷ ನಾಗರಾಜ್ ಗೌಡ ಹರತಾಳು ಉಪಸ್ಥಿತರಿದ್ದರು.- - - ಬಾಕ್ಸ್ ಸಮಾಜ ಸೇವಾ ವೃತ್ತ ಪ್ರಶಸ್ತಿ ಪ್ರದಾನಸಹಕಾರಿ ಧುರೀಣ ಹರನಾಥ್ ರಾವ್ ಮತ್ತಿಕೊಪ್ಪ, ಪೌಜಿ ಶರಾವತ್, ಕೆ.ಟಿ. ತಿಮ್ಮೇಶ, ರುದ್ರಪ್ಪ ಗೌಡ ಸೇರಿದಂತೆ ಹಲವರಿಗೆ ಸಮಾಜ ಸೇವಾ ವೃತ್ತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿದ್ವಾನ್ ಡಾ. ಸಿ. ರೇಣುಕಾರಾಧ್ಯ, ಶಾಂತವೀರಯ್ಯ, ಪರಮೇಶ್ವರಪ್ಪ, ಮುದ್ದು ವೀರೇಶ್, ಕುಮಾರಿ ಅನುಷಾ ಅವರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು. ಶಿವಮೊಗ್ಗ ಆಕಾಶವಾಣಿ ಕಲಾವಿದರಾದ ನಾಗರತ್ನಮ್ಮ ಚಂದ್ರಶೇಖರ್ ಅವರಿಂದ ವಚನ ಸಂಗೀತ ನೆರವೇರಿತು. ಸಾಗರದ ಕಲಾ ರಾಧನಾ ಕಲ್ಚರ್ ಟ್ರಸ್ಟ್ ವತಿಯಿಂದ ವಚನ ನೃತ್ಯ ರೂಪಕ ಪ್ರದರ್ಶನಗೊಂಡಿತು. ಆರಂಭದಲ್ಲಿ ಡಿಇಡಿ ವಿದ್ಯಾರ್ಥಿಗಳಿಂದ ಸಂಸ್ಥೆ ಕಾರ್ಯಕ್ರಮಗಳು ನೆರವೇರಿದ್ದು. ಅನಂತರ ಪಲ್ಲಕ್ಕಿ ಉತ್ಸವ ವಿವಿಧ ಜಾನಪದ ಕಲಾತಂಡದೊಂದಿಗೆ ಯಶಸ್ವಿಯಾಗಿ ನೆರವೇರಿತು.
- - - -ಫೋಟೋ:ಆನಂದಪುರ ಸಮೀಪದ ಮುರುಘಾ ಮಠದಲ್ಲಿ ನಡೆದ ಭಾವೈಕ್ಯ ಸಮ್ಮೇಳನವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಉದ್ಘಾಟಿಸಿದರು.