ಸಾರಾಂಶ
ಹುಬ್ಬಳ್ಳಿ:
ನ್ಯೂ ಇಂಗ್ಲಿಷ್ ಸ್ಕೂಲ್‌ನಿಂದ ಇಂಡಿ ಪಂಪ್ ವರೆಗೆ ರಸ್ತೆ ಅಗಲೀಕರಣಕ್ಕೆ ಶೀಘ್ರ ಕ್ರಮಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಸೂಚಿಸಿದರು.ಸರ್ಕ್ಯೂಟ್ ಹೌಸ್‌ನಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಹಳೇ ಹುಬ್ಬಳ್ಳಿ ಇಂಡಿ ಪಂಪ್ ವೃತ್ತದಿಂದ ಪಿಬಿ ರಸ್ತೆಯ ನ್ಯೂ ಇಂಗ್ಲಿಷ್ ಸ್ಕೂಲ್ ವರೆಗಿನ 1.24 ಕಿ.ಮೀ. ರಸ್ತೆ ಅಗಲೀಕರಣ ಮಾಡಲಾಗುವುದು. ಈ ರಸ್ತೆಯ ಬದಿಯಲ್ಲಿರುವ 261 ಕಟ್ಟಡ ಗುರುತಿಸಿದ್ದು ಅದರಲ್ಲಿ 243 ಖಾಸಗಿ ಹಾಗೂ 18 ಪಾಲಿಕೆ ಆಸ್ತಿಗಳಿವೆ. ಈಶ್ವರ, ವೀರಭದ್ರೇಶ್ವರ, ಬನಶಂಕರಿ, ಆಂಜನೇಯ ದೇವಸ್ಥಾನ ಸೇರಿದಂತೆ 6 ದೇವಸ್ಥಾನ ಮತ್ತು 1 ಮಸೀದಿ ಸಹ ರಸ್ತೆಯ ಪಕ್ಕದಲ್ಲಿ ಬರುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ಸಲ್ಲಿಸಿದರು.ಮಾಹಿತಿ ಆಲಿಸಿದ ಶಾಸಕ ಪ್ರಸಾದ ಅಬ್ಬಯ್ಯ, ಈ ರಸ್ತೆ ಅಗಲೀಕರಣ ಬಗ್ಗೆ ಆ ಭಾಗದ ಜನರೇ ಬೇಡಿಕೆ ಇಟ್ಟಿದ್ದಾರೆ. ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳ ಮಾಲೀಕರೇ ಸ್ವತಃ ತೆರವುಗೊಳಿಸುವ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಹಳೆ ಹುಬ್ಬಳ್ಳಿ ಭಾಗದ ಪ್ರಮುಖ ರಸ್ತೆ ಆಗಿರುವುದರಿಂದ ಪ್ರತಿದಿನ ವಾಹನ ಮತ್ತು ಜನ ದಟ್ಟನೆಯಿಂದ ಕೂಡಿರುತ್ತದೆ. ಹೀಗಾಗಿ ಭೂ ಸ್ವಾಧೀನಕ್ಕೆ ಅವಶ್ಯವಿರುವ ಪ್ರಕ್ರಿಯೆಯನ್ನು ಪಾಲಿಕೆ ಅಧಿಕಾರಿಗಳು ಆರಂಭಿಸುವಂತೆ ಸೂಚನೆ ನೀಡಿದರು.
ಭೂ ಸ್ವಾಧೀನಕ್ಕೆ ₹5.7 ಕೋಟಿ:ರಸ್ತೆ ಅಗಲೀಕರಣ ಸಮೀಕ್ಷಾ ವರದಿಯಲ್ಲಿ ತಿಳಿಸಿರುವಂತೆ 243 ಖಾಸಗಿ ಸ್ವತ್ತುಗಳು ಸೇರಿದಂತೆ ಭೂಸ್ವಾಧೀನಕ್ಕೆ ಅವಶ್ಯವಿರುವ ₹5.7 ಕೋಟಿಯನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ಭರಿಸಲಾಗುವುದು. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವಿಶೇಷ ಅನುದಾನ ತರಲಾಗುತ್ತದೆ. ಹೀಗಾಗಿ, ಅಧಿಕಾರಿಗಳು ಪರಸ್ಪರ ಸಮನ್ವಯ, ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಶೀಘ್ರವೇ ರಸ್ತೆ ಅಗಲೀಕರಣ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿದರು. ಸಭೆಯಲ್ಲಿ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪಾಲಿಕೆಯ ಸಹಾಯಕ ಆಯುಕ್ತ ವಿಜಯಕುಮಾರ, ಹುಬ್ಬಳ್ಳಿ ಶಹರ ತಹಸೀಲ್ದಾರ್ ಮಹೇಶ ಗಸ್ತೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.