ಮಕ್ಕಳ ರಕ್ಷಣೆಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ

| Published : Jun 22 2024, 12:53 AM IST

ಸಾರಾಂಶ

ಶಿವಮೊಗ್ಗ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆರ್‌ಟಿಇ-2009, ಪೋಕ್ಸೋ-2012 ಹಾಗೂ ಬಾಲನ್ಯಾಯ ಕಾಯ್ದೆ-2015 ರ ಅನುಷ್ಟಾನ ಕುರಿತು ಭಾಗೀದಾರರೊಂದಿಗೆ ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ ಕೊಳ್ಳ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 112, ಇದರಲ್ಲಿ 15 ವರ್ಷ ಮೀರಿದವರು 58 ವಿದ್ಯಾರ್ಥಿಗಳು ಇದ್ದಾರೆ. ವಸತಿ ಶಾಲೆಯಲ್ಲಿ ಮಕ್ಕಳಿಗೆ ಮೂಲ ಸೌಕರ್ಯ, ಓದುವಂತಹ ವಾತಾವರಣ ಇಲ್ಲದಿದ್ದರೂ ಮಕ್ಕಳು ದಾಖಲಾಗಿ ಕಂಡು ಬಂದಿದೆ. ಇದಕ್ಕೆ ಹೇಗೆ ಅನುಮತಿ ಸಿಗಲಾಗಿದೆ. ಇದೆಲ್ಲದಕ್ಕೂ 24 ಗಂಟೆಯೊಳಗೆ ಮಾಹಿತಿ ನೀಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ ಕೊಳ್ಳ ಅಧಿಕಾರಿಗಳಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆರ್‌ಟಿಇ-2009, ಪೋಕ್ಸೋ-2012 ಹಾಗೂ ಬಾಲನ್ಯಾಯ ಕಾಯ್ದೆ-2015 ರ ಅನುಷ್ಟಾನ ಕುರಿತು ಭಾಗೀದಾರರೊಂದಿಗೆ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆಯಿಂದಾಗಿಯೇ ಮಕ್ಕಳ ವಿರುದ್ಧ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.

ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳ ಹಾಸ್ಟೆಲ್‍ಗಳು, ಬಾಲ ಮಂದಿರ ಮತ್ತು ಅಂಗನವಾಡಿಗಳನ್ನು ಭೇಟಿ ನೀಡಿದ್ದೇನೆ. ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಿದೆ. ಸರ್ಕಾರಿ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳ ಹಾಜರಾತಿ ಕುರಿತು ಸಮರ್ಪಕ ಮಾಹಿತಿಯನ್ನು ಶಿಕ್ಷಣ ಇಲಾಖೆಗೆ ನೀಡಬೇಕು. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಬರುವಂತೆ ಮಾಡಬೇಕು. ಆಗ ಮಕ್ಕಳ ವಿರುದ್ಧದ ಪ್ರಕರಣಗಳು ಕಡಿಮೆ ಆಗಲು ಸಾಧ್ಯವಾಗುತ್ತದೆ. ಆದ್ದರಿಂದ ಮಕ್ಕಳ ಹಾಜರಾತಿಯನ್ನು ಪ್ರಾಮಾಣಿಕವಾಗಿ ಮತ್ತು ಸಮರ್ಪಕವಾಗಿ ನೀಡಬೇಕೆಂದು ಎಚ್ಚರಿಸಿದರು.

ಹಾಸ್ಟೆಲ್ ಭೇಟಿ ವೇಳೆ ವಿದ್ಯಾರ್ಥಿಗಳಿಗೆ ಸಮರ್ಪಕ ಮತ್ತು ಗುಣಮಟ್ಟದ ಆಹಾರ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳು ನೀಡದಿರುವುದು ಕಂಡು ಬಂದಿದೆ. ಸ್ವಚ್ಚತೆ ಇಲ್ಲದಿರುವುದು. ಸರ್ಕಾರಿ ಶಾಲೆ ದಾಖಲಾತಿ ಕಡಿಮೆ ಆಗುತ್ತಿದ್ದು, ಮಧ್ಯಾಹ್ನದ ಬಿಸಿಯೂಟ ಗುಣಮಟ್ಟದಿಂದ ಕೂಡಿಲ್ಲ. ಮಕ್ಕಳ ಸ್ಯಾಟ್ಸ್, ಹೆಡ್ ಕೌಂಟ್, ಮಿಡ್ ಡೇ ಮೀಲ್ ವ್ಯತ್ಯಾಸ ಇದ್ದು, ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.ಮಕ್ಕಳ ರಕ್ಷಣೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಮತ್ತು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಬಾಲ್ಯವಿವಾಹ, ಪೋಕ್ಸೋ ಮತ್ತು ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಿದ್ದು ಇದು ಆಘಾತಕಾರಿ ವಿಷಯವಾಗಿದೆ. ಮಕ್ಕಳನ್ನು ಈ ಎಲ್ಲ ಪಿಡುಗುಗಳಿಂದ ರಕ್ಷಿಸಲು ಸಂಬಂಧಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಆರ್‍ಡಿಪಿಆರ್ ಸೇರಿದಂತೆ 10 ಇಲಾಖೆಗಳು ಅತ್ಯಂತ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಮಕ್ಕಳ ರಕ್ಷಣೆ ಸಂಬಂಧ ಈ 10 ಇಲಾಖೆಗಳು ಪ್ರತಿ ತಿಂಗಳಿಗೆ ಓರ್ವ ಇಲಾಖೆ ನೋಡಲ್ ಇಲಾಖೆಯಾಗಿ ಸಕ್ರಿಯ ಕಾರ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 1606 ಬಾಲ ಕಾರ್ಮಿಕ ತಪಾಸಣೆ ಕೈಗೊಳ್ಳಲಾಗಿದ್ದು 14 ಪ್ರಕರಣ ಪತ್ತೆ ಹಚ್ಚಿದ್ದು ಎಫ್‍ಐಆರ್ ಆಗಿದೆ. 12 ಮಕ್ಕಳಿಗೆ ಪುನರ್ವಸತಿ ಕಲ್ಪಿಸಿ ಶಾಲೆಗೆ ಸೇರಿಸಲಾಗಿದೆ. ಹೊರರಾಜ್ಯದ ಮಕ್ಕಳಿಗೆ ಅವರ ಮನೆಗೆ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರೇಖಾ ಮಾತನಾಡಿ, ಪೋಕ್ಸೊ, ಶಾಲೆ ಬಿಟ್ಟ ಮಕ್ಕಳು, ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿವೆ. 9ನೇ ತರಗತಿ ನಂತರ ಖಾಸಗಿ ಶಾಲೆಗಳು ಶೇ.100 ಫಲಿತಾಂಶಕ್ಕಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಟಿಸಿ ಕೊಟ್ಟು ಕಳುಹಿಸಿದಾಗ ಸರ್ಕಾರಿ ಶಾಲೆಗೆ ಬರುತ್ತಾರೆ. ವಾತಾವರಣ ಬದಲಾವಣೆ, ಒತ್ತಡದಿಂದ ಡ್ರಾಪ್ ಔಟ್ ಆಗಿಯೂ ಪೋಕ್ಸೋ ಪ್ರಕರಣ ಹೆಚ್ಚುತ್ತಿದೆ. ಹಾಸ್ಟೆಲ್‍ಗಳಲ್ಲೂ ಗರ್ಭಿಣಿಯರು ಕಂಡು ಬಂದಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಾರ್ಡ್ ಮತ್ತು ಪೊಲೀಸ್ ಸಿಬ್ಬಂದಿ ನಿಯೋಜನೆ ಅವಶ್ಯಕತೆ ಇದೆ ಎಂದು ಮನವಿ ಮಾಡಿದರು. ಜಿ.ಪಂ. ಉಪ ಕಾರ್ಯದರ್ಶಿ ಸುಜಾತ ಮಾತನಾಡಿ, ಮಕ್ಕಳ ರಕ್ಷಣೆ ಸಂಬಂಧ ಜಿಲ್ಲೆಯಲ್ಲಿ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಬಾಲ್ಯ ವಿವಾಹ, ಶಾಲೆ ಬಿಟ್ಟ ಮಕ್ಕಳು ಸೇರಿದಂತೆ ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸರಿಯಾಗಿ ಮಾಹಿತಿ ಒದಗಿಸಿ, ಸಮಸ್ಯೆಯನ್ನು ಸಮರ್ಪಕವಾಗಿ ಬಗೆಹರಿಸಬೇಕು ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್, ಡಿವೈಎಸ್‍ಪಿ ಹಾಗೂ ಹಿರಿಯ ಮಕ್ಕಳ ಪೊಲೀಸ್ ಅಧಿಕಾರಿ ಬಾಬು ಅಂಜನಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.ನಾನು ಭೇಟಿ ನೀಡಿದ ಅಂಗನವಾಡಿಗಳಲ್ಲಿ ಕಳೆದ 3 ತಿಂಗಳಿನಿಂದ ಹಾಲು ಸರಬರಾಜು ಇಲ್ಲ. ಬೇಳೆ, ಬೆಲ್ಲ ಗುಣಮಟ್ಟವಿಲ್ಲ. ಜಿಲ್ಲೆಯಲ್ಲಿ 45 ಎನ್‍ಆರ್‍ಸಿ ಬೆಡ್‍ಗಳಿದ್ದರೂ ಅಂಗನವಾಡಿಗಳಿಂದ ಅಪೌಷ್ಟಿಕ ಮಕ್ಕಳನ್ನು ಕಳುಹಿಸದಿರುವುದು ಗಮನಕ್ಕೆ ಬಂದಿದೆ. ತೀವ್ರ ಅಪೌಷ್ಟಿಕ ಮಕ್ಕಳನ್ನು (ಸ್ಯಾಮ್) ಸಮರ್ಪಕವಾಗಿ ಗುರುತಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ ಕೊಳ್ಳ ಸೂಚನೆ ನೀಡಿದರು. ಜಿಲ್ಲೆಯಲ್ಲಿ 2021-22 ನೇ ಸಾಲಿನಲ್ಲಿ 919, 22-23 ರಲ್ಲಿ 892 ಮತ್ತು 23-24 ಜೂನ್‍ವರೆಗೆ 861 ಬಾಲ ಗರ್ಭಿಣಿಯರು ಇರುವುದು ವರದಿಯಾಗಿದೆ. ಈ ಕುರಿತು ಎಫ್‍ಐಆರ್ ಸೇರಿದಂತೆ ಪೋಕ್ಸೋ ಕಾಯ್ದೆಯಡಿ ಕ್ರಮ ವಹಿಸಬೇಕು. ಸ್ಕ್ಯಾನಿಂಗ್ ಸೆಂಟರ್‌ಗಳ ತಪಾಸಣೆ ಮತ್ತು ಹೆಣ್ಣು ಭ್ರೂಣ ಹತ್ಯೆ ಸಂಬಂಧ ಟಾಸ್ಕ್ ಫೋರ್ಸ್ ರಚಿಸಿ ಸಕ್ರಿಯವಾಗಿ ಕಾರ್ಯ ನಿರ್ವಹಣೆ ಆಗಬೇಕು. ಇಲಾಖೆಗಳು ಸಮನ್ವಯತೆಯಿಂದ ಮಕ್ಕಳ ಪರ ಕಾಳಜಿ ಇಟ್ಟುಕೊಂಡು ಕೆಲಸ ಮಾಡಿದಲ್ಲಿ ಮಕ್ಕಳ ವಿರುದ್ಧದ ಪ್ರಕರಣ ಕಡಿಮೆ ಆಗುತ್ತವೆ. ಈ ನಿಟ್ಟಿನಲ್ಲಿ ಇಲಾಖೆಗಳು ಕಾರ್ಯಗತವಾಗಬೇಕು ಎಂದು ತಿಳಿಸಿದರು.