ಗದಗ: ಸ್ವಚ್ಛತೆ ದೇವರಿಗೆ ಸಮಾನವಾಗಿದ್ದು, ನಮ್ಮ ದೇಹವನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛ ವಾತಾವರಣದಿಂದ ಅನಾರೋಗ್ಯವನ್ನು ದೂರವಿಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಜರುಗಿದ ಪೌರಕಾರ್ಮಿಕರಿಗೆ ಹಾಗೂ ಸ್ವಚ್ಛತಾ ಕೆಲಸಗಾರರಿಗೆ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು-2026 ಮತ್ತು ಸ್ವಚ್ಛತಾ ಪರಿಕರಗಳ ಬಳಕೆ ಕುರಿತು ತಿಳಿವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದಿನ ದಿನಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಅತ್ಯಂತ ಮಹತ್ವದ ವಿಷಯವಾಗಿದ್ದು, ಕಸವನ್ನು ಹಸಿಕಸ, ಒಣಕಸ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿ ತ್ಯಾಜ್ಯ ಎಂಬ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗುತ್ತಿದೆ. ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸುವುದರಿಂದ ಅದರ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಹೆಚ್ಚು ನೀರು ಬಳಸುವ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಘನ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇಂತಹ ಸ್ಥಳಗಳತ್ತ ವಿಶೇಷ ಗಮನ ಹರಿಸಿ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡಬೇಕಾಗಿದೆ ಎಂದರು.ಘನ ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಸರ್ಕಾರ ನಿಯಮಗಳನ್ನು ರೂಪಿಸಿದ್ದು, ಎಲ್ಲರೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಗರಗಳ ಬೆಳವಣಿಗೆ ಮತ್ತು ಜನಸಂಖ್ಯೆ ಹೆಚ್ಚಳದೊಂದಿಗೆ ತ್ಯಾಜ್ಯದ ಪ್ರಮಾಣವೂ ಹೆಚ್ಚುತ್ತಿದ್ದು, ಅದರ ವೈಜ್ಞಾನಿಕ ವಿಲೇವಾರಿ ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ ಎಂದರು.
ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕೆಲಸಗಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರು ಪ್ರತಿನಿತ್ಯ ಹಲವಾರು ಸವಾಲಿನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ತ್ಯಾಜ್ಯ ಸಂಗ್ರಹಣೆ, ಚರಂಡಿ ಸ್ವಚ್ಛತೆ ಹಾಗೂ ತ್ಯಾಜ್ಯ ವಿಂಗಡಣೆ ವೇಳೆ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ಅಪಾಯಗಳು ಎದುರಾಗುತ್ತವೆ. ಆದ್ದರಿಂದ ಕೈಗವಸು, ಮುಖಗವಸು, ಸುರಕ್ಷತಾ ಬೂಟು, ರಿಫ್ಲೆಕ್ಟಿವ್ ಜಾಕೆಟ್ ಸೇರಿದಂತೆ ಅಗತ್ಯ ರಕ್ಷಣಾ ಸಾಧನಗಳನ್ನು ಕಡ್ಡಾಯವಾಗಿ ಬಳಸಬೇಕು. ಇದರಿಂದ ಅಪಘಾತಗಳು ಮತ್ತು ಸೋಂಕುಜನ್ಯ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಜಿಲ್ಲಾ ಕಾನೂನು ಸೇವಾ ಪ್ರಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ ಮಾತನಾಡಿ, ಸಮಾಜದ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರಿಗಾಗಿ ಇಂತಹ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರೊಬ್ಬರು ಕಳೆದ 20 ದಿನಗಳಿಂದ ಸಂಬಳ ಆಗದಿರುವ ಬಗ್ಗೆ ನ್ಯಾಯಾಧೀಶರ ಗಮನಕ್ಕೆ ತಂದಾಗ, ತಕ್ಷಣವೇ ಸ್ಪಂದಿಸಿದ ನ್ಯಾಯಾಧೀಶರು, ಯಾವುದೇ ತಾಂತ್ರಿಕ ತೊಂದರೆಗಳಿದ್ದಲ್ಲಿ ಅಧಿಕಾರಿಗಳು ಪೌರಕಾರ್ಮಿಕರಿಗೆ ಸೂಕ್ತ ಮಾಹಿತಿ ನೀಡಿ ಅದನ್ನು ಬಗೆಹರಿಸಬೇಕು. ಪೌರಕಾರ್ಮಿಕರ ವೇತನ ಪಾವತಿಯಲ್ಲಿ ವಿಳಂಬ ಧೋರಣೆ ತೋರಬಾರದು. ಒಂದು ವೇಳೆ ಜಿಲ್ಲಾ ಮಟ್ಟದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಅದನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಮನವರಿಕೆ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.
ಈ ವೇಳೆ ಸಪಾಯಿ ಕರ್ಮಚಾರಿ ಸಂಘದ ನಾಮನಿರ್ದೇಶಿತ ಸದಸ್ಯರಾದ ಎಸ್.ಎನ್. ಬಳ್ಳಾರಿ, ಮುತ್ತು ಬಿಳೆಯಲಿ ಮಾತನಾಡಿದರು.
ಉಪ ವಿಭಾಗಾಧಿಕಾರಿ ಗಂಗಪ್ಪ.ಎಂ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ ಕೊಟೂರು, ಕಾನೂನು ಸಲಹೆಗಾರ ಎಸ್.ಜಿ ಪಲ್ಲೇದ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಎಂ.ಶೆಟ್ಟಿ, ಸಂಚಾಲಕ ರಮೇಶ ಕೊಳೂರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಪೌರಕಾರ್ಮಿಕರು, ಸ್ವಚ್ಛತಾ ಕೆಲಸಗಾರರು ಹಾಗೂ ಸಿಬ್ಬಂದಿ ಇದ್ದರು. ಆನಂದ ಬದಿ ನಿರೂಪಿಸಿದರು.