ಹಾವೇರಿ ಜಿಲ್ಲೆಯಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಕಾರ್ಯನಿರ್ವಹಿಸಿ-ಟಿ.ಶ್ಯಾಮಭಟ್‌

| Published : Aug 10 2024, 01:41 AM IST

ಹಾವೇರಿ ಜಿಲ್ಲೆಯಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಕಾರ್ಯನಿರ್ವಹಿಸಿ-ಟಿ.ಶ್ಯಾಮಭಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಸೇವೆ ನೀಡುವ ಸಂಸ್ಥೆಗಳಲ್ಲಿನ ಅಧಿಕಾರಿಗಳು ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಂತೆ ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರೊಂದಿಗೆ ಗೌರವದಿಂದ ಮಾತನಾಡಿ, ಮಾನವೀಯತೆಯಿಂದ ನಡೆದುಕೊಳ್ಳುವುದರಿಂದ ಶೇ.೯೦ರಷ್ಟು ಮಾನವ ಹಕ್ಕುಗಳ ಉಲ್ಲಂಘನೆ ತಡೆಯಬಹುದು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್ ಅಧಿಕಾರಿಗಳಿಗೆ ಹೇಳಿದರು.

ಹಾವೇರಿ: ಸಾರ್ವಜನಿಕ ಸೇವೆ ನೀಡುವ ಸಂಸ್ಥೆಗಳಲ್ಲಿನ ಅಧಿಕಾರಿಗಳು ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಂತೆ ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರೊಂದಿಗೆ ಗೌರವದಿಂದ ಮಾತನಾಡಿ, ಮಾನವೀಯತೆಯಿಂದ ನಡೆದುಕೊಳ್ಳುವುದರಿಂದ ಶೇ.೯೦ರಷ್ಟು ಮಾನವ ಹಕ್ಕುಗಳ ಉಲ್ಲಂಘನೆ ತಡೆಯಬಹುದು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್ ಅಧಿಕಾರಿಗಳಿಗೆ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ಸಭೆ ಹಾಗೂ ಸಾರ್ವಜನಿಕರ ಅಹವಾಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಿಗಳು ತಮ್ಮ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವುದರ ಜೊತೆಗೆ ಅವರ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಬೇಕು, ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಅವರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಆಯೋಗದ ಕಾರ್ಯವ್ಯಾಪ್ತಿ ಮಾಹಿತಿ ನೀಡಲು ಹಾಗೂ ಆಯೋಗದಲ್ಲಿ ದಾಖಲಾದ ಪ್ರಕರಣಗಳನ್ನು ಆಯಾ ಜಿಲ್ಲೆಯಲ್ಲಿ ಇತ್ಯರ್ಥಪಡಿಸಲು ಆಯೋಗದಿಂದ ಜಿಲ್ಲಾ ಭೇಟಿ ಹಮ್ಮಿಕೊಳ್ಳಲಾಗಿದೆ. ಆಯೋಗದಲ್ಲಿ ದಾಖಲಾದ ಎಂಟು ಸಾವಿರ ಪ್ರಕರಣಗಳ ಪೈಕಿ ಈಗಾಗಲೇ ಆರು ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈಗಾಗಲೇ ೧೨ ಜಿಲ್ಲೆಗೆ ಆಯೋಗ ಭೇಟಿ ನೀಡಿದೆ. ಇದು ೧೩ನೇ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ೮ ಪ್ರಕರಣಗಳಿದ್ದು, ಅವುಗಳನ್ನು ಇಲ್ಲೇ ಇತ್ಯರ್ಥಪಡಿಸಲಾಗುವುದು. ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ಮಾನವ ಹಕ್ಕುಗಳ ಆಯೋಗಕ್ಕೆ ದೂರುಗಳನ್ನು ಆನ್‌ಲೈನ್, ಅಂಚೆ ಅಥವಾ ನೇರವಾಗಿ ಸಲ್ಲಿಸಬಹುದು. ದೂರು ದಾಖಲಿಸಿದವರು ಪ್ರಕರಣದ ಕುರಿತು ತಿಳಿದುಕೊಳ್ಳಲು ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸಲು ಆಯಾ ಜಿಲ್ಲಾ ಕೇಂದ್ರಗಳಲ್ಲೆ ಪ್ರಕರಣಗಳ ಇತ್ಯರ್ಥಕ್ಕೆ ಜಿಲ್ಲಾ ಭೇಟಿ ಹಮ್ಮಿಕೊಳ್ಳಲಾಗಿದೆ ಎಂದರು. ಸಾರ್ವಜನಿಕ ಸೇವೆ ನೀಡುವ ಸಂಸ್ಥೆಗಳಲ್ಲಿನ ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾದ ಪ್ರಕರಣಗಳು ದಾಖಲಾದಲ್ಲಿ ಆಯೋಗದಿಂದ ಯಾವುದೇ ಕ್ರಮಕೈಗೊಳ್ಳಲು ಅವಕಾಶ ಇರುವುದಿಲ್ಲ. ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.ಆಯೋಗದ ಸದಸ್ಯ ಎಸ್‌.ಕೆ. ವಂಟಿಗೋಡಿ ಮಾತನಾಡಿ, ವ್ಯಕ್ತಿಯ ಹುಟ್ಟಿನಿಂದ ವಾಸದ ಹಕ್ಕು, ಶಿಕ್ಷಣದ ಹಕ್ಕು, ಉದ್ಯೋಗ ಹೀಗೆ ಹಲವು ಮೂಲಭೂತ ಸೌಕರ್ಯಗಳ ಹಕ್ಕನ್ನು ಹೊಂದುತ್ತಾನೆ. ಮಾನವ ಹಕ್ಕುಗಳ ಸಂರಕ್ಷಣೆ ಸರ್ಕಾರದ ಮೇಲಿದೆ. ಹಾಗಾಗಿ ಮಾನವ ಹಕ್ಕುಗಳ ಉಲ್ಲಂಘನೆ ತಡೆಗಟ್ಟುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.ಮುಂಬರುವ ದಿನಗಳಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಮಾಡುವಾಗ ಅಟ್ಯಾಚ್ ಬಾತರೂಂ ಹಾಗೂ ಡ್ರೆಸಿಂಗ್ ರೂಂಗೆ ಕ್ರಿಯಾಯೋಜನೆ ತಯಾರಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.ಇಂದು ನಗರದ ಖಾಸಗಿ ಬಡಾವಣೆಯಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಡ್ರೈನೇಜ್ ವ್ಯವಸ್ಥೆ ಇಲ್ಲ. ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದ ಕಾರಣ ಅಂತಹ ಸ್ಥಳದಲ್ಲಿ ಅನೇಕ ರೋಗರುಜಿನಗಳು ಹರಡುವ ಸಾಧ್ಯತೆ ಇರುತ್ತದೆ. ಇಂತಹ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಕೆಲಸವಾಗಬೇಕು ಎಂದು ತಿಳಿಸಿದರು.ನಕಲಿ ಸದಸ್ಯರ ವಿರುದ್ಧ ಎಚ್ಚರ:ರಾಜ್ಯ ಮಾನವ ಹಕ್ಕುಗಳ ಆಯೋಗದ ಕಚೇರಿ ಬೆಂಗಳೂರಿನಲ್ಲಿ ಮಾತ್ರ ಇರುತ್ತದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಇರುವುದಿಲ್ಲ ಹಾಗೂ ಯಾವುದೇ ಪ್ರತಿನಿಧಿಗಳನ್ನು ನೇಮಕ ಮಾಡಿರುವುದಿಲ್ಲ. ಹಾಗಾಗಿ ಆಯೋಗದ ಹೆಸರು ಹೇಳಿಕೊಂಡು ಐಡಿ ಕಾರ್ಡ್‌ ಹಾಕಿಕೊಂಡು ಕಚೇರಿಗೆ ಬಂದು ಕಿರುಕುಳಕೊಡುವವರ ಬಗ್ಗೆ ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು. ಇಂತಹ ಪ್ರಕರಣಗಳು ಕಂಡುಬಂದರೆ ಕೂಡಲೇ ಆಯೋಗದ ಗಮನಕ್ಕೆ ತರಬೇಕು ಹಾಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದು ತಿಳಿಸಿದರು. ಆಯೋಗದ ಕಾರ್ಯದರ್ಶಿಗಳಾದ ಎ.ದಿನೇಶ ಸಂಪತ್‌ರಾಜ್, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಉಪಸ್ಥಿತರಿದ್ದರು.