ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಯಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಒಂದು ವೇಳೆ ಅಂತಹ ಘಟನೆಗಳು ಸಂಭವಿಸಿದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಕೂಡಲೇ ಸ್ಪಂದಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಮಹಿಳೆಯರ ಹಕ್ಕುಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸವದತ್ತಿ ತಾಲೂಕಿನಲ್ಲಿ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಇರುವ ಭದ್ರತೆ ಕುರಿತು ತಾಲೂಕಿಗೆ ಭೇಟಿ ಪರಿಶೀಲನೆ ನಡೆಸಲಾಯಿತು. ತಾಲೂಕಿನ ವಿವಿಧ ಇಲಾಖೆಯಿಂದ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಪ್ರಗತಿ ವರದಿಯನ್ನು ಕೂಡಲೇ ಸಲ್ಲಿಸಬೇಕು ಎಂದು ತಿಳಿಸಿದರು.ಕಳೆದ ಒಂದು ವರ್ಷದಲ್ಲಿ ಹೆಣ್ಣು ಮಕ್ಕಳು ಕಾಣೆ, ವರದಕ್ಷಿಣೆ ಕಿರುಕುಳ, ದೌರ್ಜನ್ಯ, ಮಹಿಳೆಯರ ಕೊಲೆ ಪ್ರಕರಣಗಳು ಬಹಳಷ್ಟು ದಾಖಲಾಗಿವೆ. ಅಂತಹ ಪ್ರಕರಣಗಳನ್ನು ಕೂಡಲೇ ಕೈಗೆತ್ತಿಕೊಂಡು ನೊಂದ ಮಹಿಳೆಯರು, ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು. ಜಿಲ್ಲೆಯಲ್ಲಿ 6 ತಿಂಗಳಲ್ಲಿ 9 ಮಹಿಳೆಯರ ಕೊಲೆ ಪ್ರಕರಣ ದಾಖಲಾಗಿವೆ. ಅಂತಹ ಪ್ರಕರಣಗಳಿಗೆ ಪೊಲೀಸ್ ಇಲಾಖೆ ತಕ್ಷಣವೇ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮಹಿಳಾ ದೌರ್ಜನ್ಯ ದಾಖಲಾದ ಪ್ರಕರಣಗಳಿಗೆ ನ್ಯಾಯ ಸಿಗಬೇಕು. ಅಂತಹ ಪ್ರಕರಣಗಳ ಬಗ್ಗೆ ವಿಳಂಬ ತೋರಬಾರದು. ನ್ಯಾಯಾಲಯ ಹಂತದಲ್ಲಿರುವ ಪ್ರಕರಣಗಳ ಸಾಕ್ಷಿಗಳನ್ನು ಕಲೆಹಾಕಿ ನ್ಯಾಯಾಲಕ್ಕೆ ಹಾಜರುಪಡಿಸಬೇಕು. ಜಿಲ್ಲೆಯಲ್ಲಿ ಇಂತಹ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದರು.ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಮಹಿಳಾ ಉದ್ಯೋಗಸ್ಥರಿಗೆ ಕಾರ್ಮಿಕ ಇಲಾಖೆ ಕಾಯ್ದೆಯಡಿ ಅಗತ್ಯ ಇ.ಎಸ್.ಐ, ಪಿಎಫ್ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಬೇಕು. ಕೋಲ್ಕತ್ತಾದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ರಾಜ್ಯದಲ್ಲಿ ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಪ್ರಕರಣದ ಬಳಿಕ ಈಗಾಗಲೇ ಎಲ್ಲ ಜಿಲ್ಲಾಡಳಿತಕ್ಕೆ ಮಹಿಳಾ ಆಯೋಗದಿಂದ ಪತ್ರ ಬರೆಯಲಾಗಿದೆ. ಜಿಲ್ಲೆಯಲ್ಲಿ ಅತ್ಯಾಚಾರ ಕೊಲೆ ಪ್ರಕರಣಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಶಾಲಾ ಕಾಲೇಜು, ಮಕ್ಕಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ತಿಳಿಸಿಕೊಡಬೇಕು. ಇನ್ನೂ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಆಗಬೇಕಿದೆ. ಇದರಿಂದ ಅತ್ಯಾಚಾರ, ಕೊಲೆ ಪ್ರಕರಣಗಳಿಗೆ ಕಡಿವಾಣ ಹಾಕಬಹುದು ಎಂದರು.ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಶಾಲೆಗಳಲ್ಲಿ ಪ್ರತಿ 4ನೇ ಶನಿವಾರ ಕಾರ್ಯಕ್ರಮ ಆಯೋಜನೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಅಂತಹ ಯಾವುದೇ ರೀತಿಯ ಘಟನೆಗಳು ಕಂಡು ಬಂದರೆ ಕೂಡಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ. ಮುರಳಿ ಮೋಹನ್ ರೆಡ್ಡಿ, ಐಎಎಸ್ ಪ್ರೊಬೇಷನರಿ ಅಧಿಕಾರಿ ದಿನೇಶ್ ಕುಮಾರ ಮೀನಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಜಿಲ್ಲೆಯಲ್ಲಿ ಶಾಲಾ, ಕಾಲೇಜು, ಪಿಜಿ ಸೆಂಟರ್‌ಗಳಲ್ಲಿ ಶೌಚಾಲಯ, ಕುಡಿಯುವ ನೀರು, ಶಾಲಾ ಕಾಲೇಜುಗಳಿಗೆ ಬಸ್ ಸೌಲಭ್ಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಲು ಸೂಚನೆ ನೀಡಲಾಗಿದೆ. ಮಹಿಳಾ ಸಹಾಯವಾಣಿ ಜಾಗೃತಿ ಕಾರ್ಯಕ್ರಮ ಮೂಡಿಸಲಾಗುತ್ತಿದೆ. ಗ್ರಾಪಂ ಮಟ್ಟದಲ್ಲಿ ಪೊಲೀಸ್, ಕಂದಾಯ ಇಲಾಖೆಯಿಂದ ಜಂಟಿಯಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಸೂಚಿಲಾಗಿದೆ.- ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ