ರೈತರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ

| Published : Oct 30 2024, 12:38 AM IST / Updated: Oct 30 2024, 12:39 AM IST

ರೈತರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ನವಲಗುಂದ ತಾಲೂಕಿನಲ್ಲಿ ಪ್ರವಾಹ ಹಾಗೂ ಮಳೆಯಿಂದ ₹ 300 ಕೋಟಿ ಮೌಲ್ಯದ ರಸ್ತೆಗಳು ಹಾಳಾಗಿದ್ದು ಶೀಘ್ರ ವರದಿ ನೀಡಬೇಕು. 357 ಮನೆ ಧರೆಗುರುಳಿವೆ.

ನವಲಗುಂದ:

ಸಾರ್ವಜನಿಕರು ಹಾಗೂ ರೈತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಈಗಾಗಲೇ ಪ್ರವಾಹ ಹಾಗೂ ಮಳೆಯಿಂದ ಕೋಟ್ಯಂತರ ರುಪಾಯಿ ಹಾನಿಯಾಗಿದ್ದು ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಪ್ರವಾಹ ಹಾಗೂ ಮಳೆಯಿಂದ ₹ 300 ಕೋಟಿ ಮೌಲ್ಯದ ರಸ್ತೆಗಳು ಹಾಳಾಗಿದ್ದು ಶೀಘ್ರ ವರದಿ ನೀಡಬೇಕು. 357 ಮನೆ ಧರೆಗುರುಳಿದ್ದು ಎ,ಬಿ,ಸಿ ಮಾದರಿಯಲ್ಲಿ ಪರಿಹಾರ ನೀಡಲು ಶ್ರಮಿಸಲಾಗುವುದು. ಹಿಂದಿನ ಸರ್ಕಾರ ಎ,ಬಿ,ಸಿ ಮಾದರಿಯಲ್ಲಿ ಪರಿಹಾರ ನೀಡುವುದಾಗಿ ಹೇಳಿತ್ತು. ಕೇವಲ ಒಂದೇ ಕಂತು ಬಿಡುಗಡೆ ಮಾಡಿ ತಟಸ್ಥಗೊಳಿಸಿತ್ತು. ಆದರೆ, ನಾವು ನೀಡಿರುವಂತಹ ಯೋಜನೆಯಿಂದ ಯಾವೊಬ್ಬ ಬಡವರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಇಲಾಖೆಗಳ ಅಧಿಕಾರಿಗಳ ಮೇಲಿದೆ ಎಂದರು.

ಬಳ್ಳೂರು, ತಿರ್ಲಾಪೂರ ಗ್ರಾಮಗಳ ಶಾಲೆಗಳಲ್ಲಿ ನೀರು ನುಗ್ಗಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ತೊಂದರೆಯಾಗಿತ್ತು. ಅದಕ್ಕೂ ಕೂಡಾ ತಹಸೀಲ್ದಾರ್‌ ಮತ್ತು ಬಿಇಒ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದ ಕೋನರಡ್ಡಿ, ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ತಾಪಂ ಜಂಟಿಯಾಗಿ ಬೆಳೆ ಸಮೀಕ್ಷೆ ಮತ್ತು ಮಳೆಯಿಂದ ಭಾಗಶಃ ಬಿದ್ದಿರುವ ಮನೆಗಳ ಅಂಕಿ ಸಂಖ್ಯೆಗಳ ಮಾಹಿತಿ ಕಲೆಹಾಕಿ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದರು.

ಬೆಣ್ಣಿಹಳ್ಳ ಪ್ರವಾಹ ತಡೆಗೆ ₹ 200 ಕೋಟಿ ಬಿಡುಗಡೆಯಾಗಿದೆ. ಅದೇ ರೀತಿ ಲೋಕೋಪಯೋಗಿ ಇಲಾಖೆಯಿಂದ ₹ 20 ಕೋಟಿ, ₹ 15 ಕೋಟಿ ರಸ್ತೆ, ಸೇತುವೆ ನಿರ್ಮಿಸಲು ಅನುದಾನ, ನವಲಗುಂದ ನಗರದ ಬಡಜನತೆಗೆ ಆಶ್ರಯ ಯೋಜನೆ ಜಾರಿಗೆ ಭೂಮಿ ಖರೀದಿಸಲು ₹5.5 ಕೋಟಿ, ಅಲ್ಪಸಂಖ್ಯಾತ ಇಲಾಖೆಯಿಂದ ₹ 5 ಕೋಟಿ, ಸಿಎಂ ವಿಶೇಷ ನಿಧಿಯಿಂದ ₹ 25 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.

ಇದೇ ವೇಳೆ ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕದಿಂದ 2024-29ನೇ ಸಾಲಿನ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ 28 ನಿರ್ದೇಶಕರನ್ನು ಸನ್ಮಾನಿಸಲಾಯಿತು. ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತಹಸೀಲ್ದಾರ್‌ಗಳಾದ ಸುಧೀರ ಸಾವಕಾರ, ಮಂಜುನಾಥ ದಾಸಪ್ಪನವರ, ಜೆ.ಬಿ. ಮಜ್ಜಗಿ, ತಾಪಂ ಇಒ ಭಾಗ್ಯಶ್ರೀ ಜಾಗೀರದಾರ, ಯಶವಂತಕುಮಾರ, ಸಿಪಿಐ ರವಿಕುಮಾರ ಕಪ್ಪತ್ತನವರ, ವರ್ಧಮಾನಗೌಡ ಹಿರೇಗೌಡ್ರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.