ಸಾರಾಂಶ
ಯಾತ್ರಾ ನಿವಾಸ ಕಾಮಗಾರಿ ಪ್ರಾರಂಭಿಸಿ ಸಂಪೂರ್ಣವಾಗಿ ಹಣವನ್ನು ತೆಗೆಸಿಕೊಂಡಿದ್ದಾರೆ. ಆದರೂ ಕಾಮಗಾರಿ ಅಪೂರ್ಣವಾಗಿರುವ ಬಗ್ಗೆ ತಮಗೆ ಮಾಹಿತಿ ಬಂದಿದ್ದು, ತಕ್ಷಣವೇ ಇಲಾಖೆ ಅಧಿಕಾರಿಯೊಬ್ಬರನ್ನು ವಿಚಾರಣೆ ಮಾಡಲು ಕಳಿಸಿ ಒಂದು ವೇಳೆ ಅವರು ಹಣವನ್ನು ಸಮರ್ಪಕವಾಗಿ ಬಳಕೆ ಮಾಡದಿರುವುದು ಕಂಡು ಬಂದಲ್ಲಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಮುಂಡರಗಿ: ತಾಲೂಕಿನ ಸಿಂಗಟಾಲೂರು ಸುಕ್ಷೇತ್ರದಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಕಳೆದ ಎರಡೂವರೆ ವರ್ಷಗಳ ಹಿಂದೆ ಕೆ.ಆರ್.ಐ.ಡಿ.ಎಲ್. ಇಲಾಖೆ ಯಾತ್ರಾ ನಿವಾಸ ಕಾಮಗಾರಿ ಪ್ರಾರಂಭಿಸಿ ಸಂಪೂರ್ಣವಾಗಿ ಹಣವನ್ನು ತೆಗೆಸಿಕೊಂಡಿದ್ದಾರೆ. ಆದರೂ ಕಾಮಗಾರಿ ಅಪೂರ್ಣವಾಗಿರುವ ಬಗ್ಗೆ ತಮಗೆ ಮಾಹಿತಿ ಬಂದಿದ್ದು, ತಕ್ಷಣವೇ ಇಲಾಖೆ ಅಧಿಕಾರಿಯೊಬ್ಬರನ್ನು ವಿಚಾರಣೆ ಮಾಡಲು ಕಳಿಸಿ ಒಂದು ವೇಳೆ ಅವರು ಹಣವನ್ನು ಸಮರ್ಪಕವಾಗಿ ಬಳಕೆ ಮಾಡದಿರುವುದು ಕಂಡು ಬಂದಲ್ಲಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ಸೋಮವಾರ ತಾಲೂಕಿನ ಸಿಂಗಟಾಲೂರು ಸುಕ್ಷೇತ್ರದಲ್ಲಿ ಶ್ರೀ ವೀರಭದ್ರೇಶ್ವರ ಉದ್ಯಾನವನ ಉದ್ಘಾಟನೆಗೆ ಆಗಮಿಸಿದ ವೇಳೆ ನೆನಗುದಿಗೆ ಬಿದ್ದಿರುವ ಪ್ರವಾಸೋದ್ಯಮ ಇಲಾಖೆಯ ಯಾತ್ರಾ ನಿವಾಸದ ಕಾಮಗಾರಿ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ಯಾತ್ರಾ ನಿವಾಸದ ಕುರಿತು ಸಂಪೂರ್ಣವಾದ ಮಾಹಿತಿ ಪಡೆದು ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಜೊತೆ ಜೊತೆಗೆ ಆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಅಲ್ಲದೇ ಈ ವೀರಭದ್ರೇಶ್ವರನ ಕ್ಷೇತ್ರದ ಅಭಿವೃದ್ಧಿಗಾಗಿ ಇಲ್ಲಿನ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಸೇರಿದಂತೆ ಎಲ್ಲ ನಿರ್ದೇಶಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಹೆಚ್ಚಿನ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರು.ಗಳ ಅನುದಾನ ನೀಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.