ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್‌ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸ್‌ ಸಹಯೋಗದಲ್ಲಿ ಗುರುವಾರ ಶಿವಮೊಗ್ಗ ತಾಲೂಕಿನ ಎಲ್ಲಾ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ಮತ್ತು ಪ್ರಾಂಶುಪಾಲರಿಗಾಗಿ ಏರ್ಪಡಿಸಿದ್ದ ಶಾಲಾ ಶುಲ್ಕ ಪಾರದರ್ಶಕತೆ ಮತ್ತು ನಿಯಮ ಪಾಲನೆ, ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಕುರಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ದಾಖಲಾತಿಗಾಗಿ ವಿಧಿಸಲಾಗುತ್ತಿರುವ ಶುಲ್ಕ ಸರ್ಕಾರ ನಿಗಧಿಪಡಿಸಿದ್ದಕ್ಕಿಂತ ಅತೀ ಹೆಚ್ಚಾಗಿದ್ದು, ಜನಸಾಮಾನ್ಯರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುವುದು ಕಷ್ಟಸಾಧ್ಯವಾಗುತ್ತಿದೆ. ಇಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಿಂದ, ಸಂಘ-ಸಂಸ್ಥೆಗಳಿಂದ ದೂರುಗಳು ಬರುತ್ತಿರುವುದನ್ನು ಶಿಕ್ಷಣ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ ಎಂದರು.

ಅಲ್ಲದೇ ಸಮವಸ್ತ್ರ, ವಾಹನ ಶುಲ್ಕಗಳೂ ಸಹ ಅತೀವವಾಗಿರುವ ಬಗ್ಗೆ ದೂರುಗಳು ಬಂದಿವೆ. ಆಡಳಿತ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಆಯಾ ಶಾಲೆಗಳ ಮುಖ್ಯೋಪಾಧ್ಯಾಯರು ಈ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿಕೊಂಡು ಸರ್ಕಾರ ನಿಗಧಿಪಡಿಸಿದ ಶುಲ್ಕ ಹಾಗೂ ತಮ್ಮ ಶಾಲೆಯ ಪ್ರವೇಶ ಶುಲ್ಕದ ವಿವರಗಳನ್ನು ತಮ್ಮ ಶಾಲೆಯ ಸೂಚನಾಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವಂತೆ ಸೂಚಿಸಿದರು.

ಸರ್ಕಾರದ ಮಾರ್ಗಸೂಚಿ ಹಾಗೂ ಇಲಾಖೆಯ ನಿಯಮಗಳನ್ನು ಅನುಸರಿಸದ ಶಾಲೆಗಳಿಗೆ ನೀಡಲಾಗಿದ್ದ ಮಾನ್ಯತೆಯನ್ನು ಹಿಂಪಡೆದುಕೊಳ್ಳಲಾಗುವುದು. ತಮ್ಮ ಶಾಲಾ ಶುಲ್ಕ ಪಾವತಿಸಲಾಗದ ಮಕ್ಕಳ ವರ್ಗಾವಣೆ ಪತ್ರ ನೀಡದಿರುವುದು, ಮಕ್ಕಳನ್ನು ಶಾಲೆಯಿಂದ ಹೊರಗೆ ನಿಲ್ಲಿಸುವುದು, ಅಂಕಪಟ್ಟಿ ನೀಡದಿರುವುದು ಸರಿಯಲ್ಲ. ಅಂತಹ ವಿಷಯಗಳ ಕುರಿತು ದೂರು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ರಾಜ್ಯ ಮಕ್ಕಳ ರಕ್ಷಣಾ ಆಯೋಗದಲ್ಲಿ ದೂರು ದಾಖಲಿಸಲಾಗುವುದು ಎಂದರು.


ಪ್ರಾದೇಶಿಕ ಸಾರಿಗೆ ಅಧಿಕಾರಿ ಮರುಗೇಂದ್ರಯ್ಯ ಶಿರೋಳ್ಕರ್‌ ಮಾತನಾಡಿ, ಜಿಲ್ಲೆಯಲ್ಲಿನ ಖಾಸಗಿ ಶಾಲೆಗಳಲ್ಲಿ 710ಕ್ಕೂ ಹೆಚ್ಚಿನ ಬಸ್ಸುಗಳಿದ್ದು, ಅವುಗಳಲ್ಲಿ ಸುಮಾರು 80ಕ್ಕೂ ಹೆಚ್ಚಿನ ಬಸ್ಸುಗಳ ಪರವಾನಿಗಿ ನವೀಕರಿಸಿಕೊಳ್ಳದಿರುವುದು, ಕ್ಷಮತಾ ಪ್ರಮಾಣಪತ್ರ ಪಡೆಯದಿರುವುದು ಕಂಡು ಬಂದಿದೆ. ಅಂತಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಬಸ್ಸುಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದಲ್ಲದೇ ಮುಂದಿನ ದಿನಗಳಲ್ಲಿ ಆಕಸ್ಮಿಕ ಅಪಘಾತಗಳುಂಟಾಗಿ ಆಗಬಹುದಾದ ಅನಾಹುತಗಳಿಂದ ಮಕ್ಕಳ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಟ್ರಾಫಿಕ್‌ ಇನ್ಸ್‌ಫೆಕ್ಟರ್‌ ಕೆ.ವಿ.ದೇವರಾಜ್‌ ಮಾತನಾಡಿ, ಪ್ರತಿಯೊಂದು ಜೀವವೂ ಅಮೂಲ್ಯ. ವಿಶೇಷವಾಗಿ ಶಾಲಾ ಮಕ್ಕಳನ್ನು ಹೊತ್ತು ಸಾಗಿಸುವ ವಾಹನಗಳ ಚಾಲಕರು ತಮ್ಮ ಜವಾಬ್ದಾರಿ ಅರಿತು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಆಡಳಿತ ಮಂಡಳಿಯವರು ಸಮರ್ಥ ವಾಹನ ಚಾಲಕರನ್ನು ಸೇವೆಗೆ ನೇಮಿಸಿಕೊಳ್ಳುವಂತೆ ಸೂಚಿಸಿದ ಅವರು, ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ 4 ವಾಹನಗಳ ಚಾಲಕರನ್ನು ಗುರುತಿಸಿ, ಅವರ ಪರವಾನಗಿ ರದ್ದುಪಡಿಸಲು ಶಿಫಾರಸ್ಸು ಮಾಡಿ ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಅನುದಾನಿತ ಶಾಲೆಗಳ ಒಕ್ಕೂಟದ ಅ‍ಧ್ಯಕ್ಷ ಗಿರೀಶ್‌, ಕ್ಷೇತ್ರ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್‌ಸಂಚಾರಿ ನಿರೀಕ್ಷಕ ಮಲ್ಲೇಶಪ್ಪ, ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಮುಖ್ಯೋಪಾಧ್ಯಾಯರು, ಶಿಕ್ಷಣ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.

ಜಿಲ್ಲೆಯ ಕೆಲವು ಆಯ್ದ ಖಾಸಗಿ ಶಾಲೆಗಳಲ್ಲಿ ಬಡಮಕ್ಕಳನ್ನು ಶುಲ್ಕವಿಲ್ಲದೆ ದಾಖಲಿಸಿಕೊಂಡು ಉದಾರವಾಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಆಡಳಿತ ಮಂಡಳಿಯವರು ಅಭಿನಂದನಾರ್ಹರು.

ರಮೇಶ್‌ನಾಯ್ಕ ಕ್ಷೇತ್ರ ಶಿಕ್ಷಣಾಧಿಕಾರಿ, ಶಿವಮೊಗ್ಗ.