ನಿರ್ಲಕ್ಷ್ಯ ತೋರಿದ ಪಿಡಿಒಗಳ ವಿರುದ್ಧ ಕ್ರಮ: ಶಾಸಕ ಡಾ. ಚಂದ್ರು ಲಮಾಣಿ ಸೂಚನೆ

| Published : Oct 28 2025, 12:44 AM IST

ನಿರ್ಲಕ್ಷ್ಯ ತೋರಿದ ಪಿಡಿಒಗಳ ವಿರುದ್ಧ ಕ್ರಮ: ಶಾಸಕ ಡಾ. ಚಂದ್ರು ಲಮಾಣಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಿಸಿಕೊಂಡು ಗ್ರಾಮ ಪಂಚಾಯಿತಿಯಿಂದ ಎಲ್ಲ ಸೌಲಭ್ಯ ಪಡೆಯುತ್ತಿದ್ದರೂ ಅವರಿಗೆ ಉತಾರ/ಹಕ್ಕುಪತ್ರ ಕೊಡುವಲ್ಲಿ ಉಂಟಾದ ತೊಂದರೆ ನಿವಾರಣೆಗೆ ಉಪಗ್ರಾಮ ಯೋಜನೆಯಡಿ ಉತಾರ ಕೊಡುವ ವ್ಯವಸ್ಥೆ ಮಾಡಬೇಕು.

ಲಕ್ಷ್ಮೇಶ್ವರ: ಗ್ರಾಮೀಣ ಭಾಗದಲ್ಲಿನ ವಸತಿ ಯೋಜನೆ ಫಲಾನುಭವಿಗಳಿಗೆ ಉಪಗ್ರಾಮ ರಚನೆ ಯೋಜನೆಯಡಿ ಇ- ಸ್ವತ್ತು ಉತಾರ ಕೊಡುವಲ್ಲಿ ಮತ್ತು ಕೇಂದ್ರ ಸರ್ಕಾರದ ಪಿಎಂವೈ ಯೋಜನೆಯಲ್ಲಿ ಆಶ್ರಯ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುವ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ಪಿಡಿಒಗಳಿಗೆ ನೋಟಿಸ್ ನೀಡಬೇಕು ಮತ್ತು ಈ ಕಾರ್ಯದ ಪ್ರಗತಿ ವರದಿಯನ್ನು ತ್ವರಿತಗತಿಯಲ್ಲಿ ಸಲ್ಲಿಸುವಂತೆ ಶಾಸಕ ಡಾ. ಚಂದ್ರು ಲಮಾಣಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಉಪಗ್ರಾಮ ರಚನೆ ಹಾಗೂ ಪಿಎಂವೈ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ೨೦೧೮ರಲ್ಲಿನ ಪಿಎಂವೈ ಯೋಜನೆಯ ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿ ಹೊಸ ಫಲಾನುಭವಿಗಳ ಪಟ್ಟಿ ಸಿದ್ಧತೆಗೆ ಅವಕಾಶ ಕಲ್ಪಿಸಬೇಕು ಎಂದರು.

ಈಗಾಗಲೇ ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಿಸಿಕೊಂಡು ಗ್ರಾಮ ಪಂಚಾಯಿತಿಯಿಂದ ಎಲ್ಲ ಸೌಲಭ್ಯ ಪಡೆಯುತ್ತಿದ್ದರೂ ಅವರಿಗೆ ಉತಾರ/ಹಕ್ಕುಪತ್ರ ಕೊಡುವಲ್ಲಿ ಉಂಟಾದ ತೊಂದರೆ ನಿವಾರಣೆಗೆ ಉಪಗ್ರಾಮ ಯೋಜನೆಯಡಿ ಉತಾರ ಕೊಡುವ ವ್ಯವಸ್ಥೆ ಮಾಡಬೇಕು. ಉಪಗ್ರಾಮ ಯೋಜನೆಯ ಅನುಕೂಲತೆ ಜನರಿಗೆ ತಲುಪಿಸಬೇಕು. ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲ ಸದಸ್ಯರು ಆಶ್ರಯ ಯೋಜನೆಯಡಿ ಮನೆ ನಿರ್ಮಾಣದ ಫಲಾನುಭವಿಗಳಿಂದ ಲಂಚ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಈ ನಿಟ್ಟಿನಲ್ಲಿ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವ ಅವರ ಕಷ್ಟಗಳಿಗೆ ಸ್ಪಂದಿಸುವ ಸದಾವಕಾಶ ಪಿಡಿಒಗಳಿಗಿದೆ. ೨೦೧೮ರ ಫಲಾನುಭವಿಗಳ ಪಟ್ಟಿ ಅಂತಿಮವಾಗಬೇಕಿದೆ. ಇನ್ನು ಮನೆ ನಿರ್ಮಾಣದ ಸಹಾಯಧನ ಕಲ್ಪಿಸುವಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆ ಪಟ್ಟಿ ಮಾಡಿ ಕೊಡಿ. ರಾಜ್ಯಮಟ್ಟದ ದಿಶಾ ಕಮಿಟಿಯಲ್ಲಿ ಚರ್ಚಿಸುತ್ತೇನೆ ಎಂದರು.ಸಭೆಯ ವೇಳೆ ದೊಡ್ಡೂರ, ಗೋನಾಳ, ಬಾಲೇಹೊಸೂರ, ಕೊಂಚಿಗೇರಿ ಗ್ರಾಮಗಳ ಜನರು ತಮ್ಮ ಗ್ರಾಪಂಗಳ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದರು. ಗೋವನಾಳ ಗ್ರಾಪಂ ಸದಸ್ಯ ಮಂಜನಗೌಡ ಕೆಂಚನಗೌಡ್ರ ಅವರು, ನಮ್ಮ ಗ್ರಾಮದಲ್ಲಿ ೪ ತಿಂಗಳಿಂದ ಕಾರ್ಯದರ್ಶಿ ಕರ್ತವ್ಯಕ್ಕೆ ಗೈರಾಗಿದ್ದಾರೆ. ಜನರು ಉತಾರ ಪಡೆಯಲು ಹಾಗೂ ಅಗತ್ಯ ಕೆಲಸಗಳಿಗೆ ಅಲೆಯುತ್ತಿದ್ದಾರೆ ಎಂಬಿತ್ಯಾದಿ ದೂರನ್ನು ನೀಡಿದರು. ಕೂಡಲೇ ಈ ಸಮಸ್ಯೆ ಬಗೆಹರಿಸುವಂತೆ ತಾಪಂ ಇಒ ಅವರಿಗೆ ಶಾಸಕರು ಸೂಚಿಸಿದರು.

ಈ ವೇಳೆ ತಹಸೀಲ್ದಾರ್ ರಾಘವೇಂದ್ರ ಕುಲಕರ್ಣಿ, ಲಕ್ಷ್ಮೇಶ್ವರ ತಾಪಂ ಇಒ ಕೃಷ್ಣಪ್ಪ ಧರ್ಮರ, ಶಿರಹಟ್ಟಿ ತಾಪಂ ಇಒ ರಾಮಣ್ಣ ದೊಡ್ಡಮನಿ, ಕಂದಾಯ ಅಧಿಕಾರಿ ಜೆ.ಎ. ಮನಿಯಾರ, ಶಿರಹಟ್ಟಿ/ ಲಕ್ಷ್ಮೇಶ್ವರ ತಾಲೂಕಿನ ಗ್ರಾಪಂ ಪಿಡಿಒ, ಕಾರ್ಯದರ್ಶಿ, ಗ್ರಾಮ ಆಡಳಿತಾಧಿಕಾರಿಗಳು ಇದ್ದರು.