ಸಾರಾಂಶ
ಬೆಳಗಾವಿ: ದರ್ಶನ್ ಬಳ್ಳಾರಿ ಕಾರಾಗೃಹಕ್ಕೆ ಶಿಫ್ಟ್ ಆಗುವ ವೇಳೆ ಕೂಲಿಂಗ್ ಗ್ಲಾಸ್ ಧರಿಸಿರುವ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಎಸಗಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕಾರಾಗೃಹ ಮತ್ತು ಸುಧಾರಣೆ ಸೇವೆ ವಿಭಾಗದ ಉತ್ತರ ವಲಯದ ಡಿಐಜಿ ಟಿ.ಪಿ.ಶೇಷ ಅವರು ಗುರುವಾರ ಇಲಾಖೆಯ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.ಕೊಲೆ ಪ್ರಕರಣದ ವಿಚಾರಣಾಧೀನ ಕೈದಿ ದರ್ಶನ್ ಬಳ್ಳಾರಿ ಜೈಲಿಗೆ ದಾಖಲಾಗುವ ವೇಳೆ ಕೂಲಿಂಗ್ ಗ್ಲಾಸ್ ಧರಿಸಿದ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿದೆ. ಬೆಂಗಾವಲಿಗಾಗಿ ನಿಯೋಜಿಸಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ದರ್ಶನ್‌ಗೆ ಕೂಲಿಂಗ್ ಗ್ಲಾಸ್ ಧರಿಸಲು ಹಾಗೂ ಬಳಕೆ ಮಾಡಲು ಅನುಮತಿ ನೀಡಿರುವುದು ರಾಜ್ಯದ ಜನತೆಯಲ್ಲಿ ತಪ್ಪು ಸಂದೇಶ ಹೋಗುತ್ತದೆ. ಇದರಿಂದಾಗಿ ಇಲಾಖೆಯ ಘನತೆಗೆ ಧಕ್ಕೆ ಉಂಟಾಗಿದೆ.ಬಂಧಿಯ ಸ್ವಂತ ವಸ್ತುಗಳನ್ನು ನಿಯಮಾನುಸಾರ ಕಾರಾಗೃಹದ ಮುಖ್ಯದ್ವಾರದಲ್ಲಿ ಒಪ್ಪಿಸಬೇಕಾಗುತ್ತದೆ. ಈಗಾಗಲೇ ದರ್ಶನ್‌ಗೆ ರಾಜಾತಿಥ್ಯ ನೀಡಿರುವ ವರದಿಗಳು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿವೆ. ಬಂಧಿಯ ಪ್ರತಿಯೊಂದು ಚಿಕ್ಕ ಚಟುವಟಿಕೆಗಳ ಮೇಲೆಯೂ ಸುದ್ದಿ ವಾಹನಿಗಳು ನಿಗಾ ಇಟ್ಟಿರುತ್ತವೆ ಎಂಬುದು ಗೊತ್ತಿದ್ದರೂ ಬೆಂಗಾವಲು ಸಿಬ್ಬಂದಿ ಕೂಲಿಂಗ್ ಗ್ಲಾಸ್ ಧರಿಸಲು ಅನುಮತಿ ನೀಡಿ, ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಎಸಗಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಸಕ್ಷಮ ಪ್ರಾಧಿಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.